ಜಿಲ್ಲಾ ಸುದ್ದಿ

ಭೂಗಳ್ಳರಿಂದ ರಾಜಕಾಲುವೆ ಒತ್ತುವರಿ

ಭೂಗಳ್ಳರಿಂದಾಗಿ ರಾಜಕಾಲುವೆ ಒತ್ತುವರಿ ಯಾಗಿದ್ದು, ಕೆರೆಗಳಿಗೂ ಹಾನಿಯಾಗುತ್ತಿದೆ ಎಂದು ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು...

ಭೂಗಳ್ಳರಿಂದ ರಾಜಕಾಲುವೆ ಒತ್ತುವರಿ
ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ
Published On :

ಬೆಂಗಳೂರು: ಭೂಗಳ್ಳರಿಂದಾಗಿ ರಾಜಕಾಲುವೆ ಒತ್ತುವರಿ ಯಾಗಿದ್ದು, ಕೆರೆಗಳಿಗೂ ಹಾನಿಯಾಗುತ್ತಿದೆ ಎಂದು ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಆರ್‍ಬಿಐ ಕಾಲೋನಿ ನಿವಾಸಿಗಳ (ಲೇಕ್ ಸೇವರ್ಸ್) ಸಹಯೋಗದೊಂದಿಗೆ ಜಯನಗರದ ಭೈರಸಂದ್ರ ಕೆರೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕೆರೆ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಜಕಾಲುವೆ ಹಾಗೂ ಮಳೆನೀರು ಕಾಲುವೆ ಒತ್ತವರಿಯಾಗುತ್ತಿದೆ. ಹಿಂದೆ ಈ ಪ್ರದೇಶವನ್ನು ಆಳಿದ ರಾಜರು ಮಳೆನೀರು ಕೆರೆಗಳಿಗೆ ಸೇರಬೇಕೆಂಬ ಉದ್ದೇಶದಿಂದ ರಾಜಕಾಲುವೆ ನಿರ್ಮಿಸಿದ್ದರು.

ಕೆರೆಗಳಿಗೆ ನೀರು ತುಂಬುವ ಇಂತಹ ರಾಜಕಾಲುವೆಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ 5 ನಿಮಿಷ ಮಳೆ ಬಂದರೂ ಮನೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತದೆ. ಮನುಷ್ಯನಿಗೆ ಎಷ್ಟೇ ದೊರೆತರೂ ತೃಪ್ತಿಯಾಗುವುದಿಲ್ಲ. ಇರುವುದರಲ್ಲೇ ಮನುಷ್ಯರು ತೃಪ್ತಿ ಪಡಬೇಕು. ಇದನ್ನು ಇಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.

ಶಾಸಕ ಆರ್.ವಿ.ದೇವರಾಜು ಮಾತನಾಡಿ, ಭೈರಸಂದ್ರ ಕೆರೆ ಸಂರಕ್ಷಿಸುವ ಉದ್ದೇಶದಿಂದ ಹಾಗೂ ಮುಂದಿನ ಪಾಳಿಗೆಗೆ ನೈಸರ್ಗಿಕ ಸಂಪನ್ಮೂಲ ಲಭ್ಯವಾಗಿಸುವ ಉದ್ದೇಶದಿಂದ ಬಿಬಿಎಂಪಿ ಯೋಜನೆ ರೂಪಿಸಿದೆ. ಮುಂದಿನ 8 ತಿಂಗಳಲ್ಲಿ ಕೆರೆ ಸಂಪೂರ್ಣವಾಗಿ ಅಭಿವೃದ್ಧಿಯಾಗಲಿದೆ ಎಂದರು.

ನಮ್ಮ ಬೆಂಗಳೂರು ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಪಬ್ಬಿಸೆಟ್ಟಿ ಮಾತನಾಡಿ, 20 ವರ್ಷಗಳ ಹಿಂದೆ ಸ್ಥಳೀಯರು ಮಾಡಿದ ಹೋರಾಟದಿಂದ ಇಂದು ಕೆರೆ ಸಂರಕ್ಷಿಸಲು ಸಾಧ್ಯವಾಗಿದೆ. ಹಿಂದೆ ಕೆರೆ ಒತ್ತುವರಿಯಾಗಿದ್ದಾಗ ಅದನ್ನು ವಿರೋಧಿಸಲು ಸಾರ್ವಜನಿಕ ಆಂದೋಲನ ರೂಪಿಸಲಾಯಿತು. ಆಂದೋಲನ ಯಶಸ್ವಿಯಾಗಿದ್ದರಿಂದ ಕೆರೆ ಸಂರಕ್ಷಣೆಯಾಗಿದೆ. ಇದರ ನೆನಪಿಗಾಗಿ ಪ್ರತಿ ವರ್ಷ ಸಂಭ್ರಮಾಚರಿಸಲಾಗುತ್ತಿದೆ ಎಂದರು.

ಲೇಕ್ ಸೇವರ್ಸ್‍ನ ವೆಂಕಟ ಸುಬ್ಬಾರಾವ್ ಮಾತನಾಡಿ, ಕಸ ಹಾಕುವುದು, ಒತ್ತುವರಿ, ರಾಸಾಯನಿಕಗಳ ಸೇರ್ಪಡೆ, ಚರಂಡಿ ನೀರಿನ ಹರಿಯುವಿಕೆ, ಕಳಪೆ ನಿರ್ವಹಣೆ ಸೇರಿದಂತೆ ನಗರದ ಕೆರೆಗಳು ಹಲವು ಸಮಸ್ಯೆ ಎದುರಿಸುತ್ತಿವೆ. ಇದು ನೇರವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೆರೆ ಉಳಿಸುವ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕಿದೆ ಎಂದರು. ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಮಂಜುನಾಥ ರೆಡ್ಡಿ, ಪಾಲಿಕೆ ಸದಸ್ಯೆ ಗಂಗಾಂಬಿಕೆ ಹಾಜರಿದ್ದರು.

ಕೆರೆ ಹಬ್ಬ: ಕೆರೆ ಆವರಣದಲ್ಲಿ ಮಾ್ಯರಾಥಾನ್, ಕೆರೆ ಪೂಜೆ, ಮೆರವಣಿಗೆ, ಡೊಳ್ಳು ಕುಣಿತ, ಶಾಲಾ ಮಕ್ಕಳಿಂದ ನಡಿಗೆ ಪ್ರದರ್ಶನ, ಸುಗಮ ಸಂಗೀತ ಸೇರಿದಂತೆ ಹಲವು ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ನಿವಾಸಿಗಳು ಹಾಗೂ ಮಕ್ಕಳು ಕೆರೆ ಹಬ್ಬದಲ್ಲಿ ಭಾಗವಹಿಸಿದ್ದರು. 2015ರಿಂದ 2019 ರವರೆಗೆ 5 ವರ್ಷಗಳ ಕಾಲ ಕೆರೆ ಹಬ್ಬಗಳನ್ನು ಪ್ರತಿಷ್ಠಾನದಿಂದ ಆಯೋಜಿಸಲಾಗುವುದು. ವರ್ಷಕ್ಕೆ 12 ಕೆರೆಗಳಂತೆ 2019 ರವರೆಗೆ ಒಟ್ಟು 60 ಕೆರೆಗಳಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.