ದಶಕದ ಬಳಿಕ ತುಂಬಿ ಕೋಡಿ ಹರಿದ ಕೆರೆಗಳು!
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದರ ಎಫೆಕ್ಟ್ ರಾಜ್ಯದ ದಕ್ಷಿಣ ಒಳನಾಡಿಗೆ ತಟ್ಟಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ದಶಕದ ನಂತರ ಕೆರೆ-ಕೊಳ್ಳಗಳು ಕೋಡಿ ಹರಿದಿವೆ...

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದರ ಎಫೆಕ್ಟ್ ರಾಜ್ಯದ ದಕ್ಷಿಣ ಒಳನಾಡಿಗೆ ತಟ್ಟಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ದಶಕದ ನಂತರ ಕೆರೆ-ಕೊಳ್ಳಗಳು ಕೋಡಿ ಹರಿದಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಕೋಲಾರ ಜಿಲ್ಲೆಯ ಹಲವೆಡೆ ಸೋಮವಾರ ಮುಂಜಾನೆಯಿಂದ ಎಡೆಬಿಡದೆ ವರ್ಷಧಾರೆಯಾಗಿದೆ. ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕಿನಲ್ಲಿ ಹತ್ತಾರು ಕೆರೆಗಳು ದಶಕದ ಬಳಿಕ ಕೋಡಿ ಹರಿದಿವೆ. ಭಾರಿ ಮಳೆಗೆ 100ಕ್ಕೂ ಅಧಿಕ ಮನೆಗಳು ಧರೆಗುರುಳಿದ್ದು, ಹಲವೆಡೆ ಮರ, ವಿದ್ಯುತ್ ಕಂಬಗಳೂ ನೆಲ ಕಂಡಿವೆ. ಕೋಲಾರ ನಗರದ ವಿವಿಧ ಕಡೆ ಮಳೆಯಿಂದ ಮನೆ ಕಳೆದುಕೊಂಡ 11 ಮಂದಿಗೆ ತಲಾ ರು.10 ಸಾವಿರ ಪರಿಹಾರ ವಿತರಿಸಲಾಗಿದೆ. ಅಂತರಗಂಗೆ ಬೆಟ್ಟದ ತಪ್ಪಲಿನ ಬಾಣಂತಿ ಕರೆ ತುಂಬಿದೆ. ಬಂಗಾರಪೇಟೆ ತಾಲೂಕಿನ ಹಲವೆಡೆ ಒಟ್ಟು 90 ಮನೆಗಳು ಕುಸಿದಿದ್ದು, ಶ್ರೀನಿವಾಸಪುರ ತಾಲೂಕಿನ ಯಲ್ದೂರಿನಲ್ಲಿ ಒಂದು ಮನೆ ಕುಸಿದಿದೆ. ಜಿಲ್ಲೆಯ ಬಹುತೇಕ ರಸ್ತೆಗಳು ಹಾನಿಗೊಳಗಾಗಿವೆ.
ಅತಿವೃಷ್ಟಿ ಬರೆ: ಹತ್ತು ವರ್ಷಗಳಿಂದ ಅನಾವೃಷ್ಟಿ ಸಮಸ್ಯೆಯಿಂದ ಬಳಲಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಈಗ ಅತಿವೃಷ್ಟಿ ಬರೆ ಹಾಕಿದೆ. ಭಾರಿ ಮಳೆಗೆ ನೆಲಗಡಲೆ, ರಾಗಿ ಮತ್ತು ಜೋಳಗಳು ನಾಶವಾಗಿವೆ. ಅಲ್ಲದೆ, ಎಲ್ಲ ತಾಲೂಕುಗಳಲ್ಲೂ ಹಲವಾರು ಮನೆಗಳು ನೆಲಕಚ್ಚಿವೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 4, ಶಿಡ್ಲಘಟ್ಟ ತಾಲೂಕಿನಲ್ಲಿ 3, ಬಾಗೇಪಲ್ಲಿ 5, ಗುಡಿಬಂಡೆ 1, ಚಿಂತಾಮಣಿಯಲ್ಲಿ 5, ಗೌರಿಬಿದನೂರು ತಾಲೂಕಿನಲ್ಲಿ ಎರಡು ಮನೆಗಳು ಉರುಳಿ ಬಿದ್ದಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ. ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಳೆನಾಶ: ರಾಮನಗರ ಜಿಲ್ಲೆಯಲ್ಲಿ ಸತತ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ 3,000 ಹೆಕ್ಟೇರ್ ಪ್ರದೇಶದ ತರಕಾರಿಗಳು ನಾಶವಾಗಿವೆ. ಈಗಾಗಲೇ ಕೊಯ್ಲಾಗಿರುವ ಹಾಗೂ ಕೊಯ್ಲಿಗೆ ಬಂದಿರುವ ರಾಗಿ ಬೆಳೆಗೂ ತೀವ್ರ ಹಾನಿಯಾಗಿದೆ. ಚನ್ನಪಟ್ಟಣ ತಾಲೂಕಿನ ಮೆಣಸಿಗನ ಹಳ್ಳಿ ಒಡೆದಿದ್ದು, ಹತ್ತಾರು ಎಕರೆ ಬೆಳೆಗಳು ಕೊಚ್ಚಿ ಹೋಗಿವೆ.
ಮನೆ ಹಾನಿ: ಚಾಮರಾಜನಗರ ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ವರುಣ ಸೋಮವಾರವೂ ಆರ್ಭಟಿಸಿದ್ದು, ಜನಜೀವ ನ ಅಸ್ತವ್ಯಸ್ತವಾಗಿದ್ದು, 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಗಳಾಗಿವೆ. ಇರಸವಾಡಿ ಗ್ರಾಮದಲ್ಲಿ ಎಂಟಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದರೆ, ಎರಡು ಮನೆಗಳು ಸಂಪೂರ್ಣ ಕುಸಿದಿವೆ. ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ 15ಕ್ಕೂ ಹೆಚ್ಚು ಮನೆಗಳು ನೆಲಕಂಡಿವೆ.
ತುಂತುರು ಮಳೆ: ಮೈಸೂರು, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ಎಲ್ಲೆಡೆ ಶೀತಗಾಳಿ ಬೀಸುತ್ತಿದ್ದು, ಸೂರ್ಯನ ದರ್ಶನವಾಗಲಿಲ್ಲ.
ಕೆಆರ್‍ಎಸ್ ಒಳಹರಿವು ಪ್ರಮಾಣ ಹೆಚ್ಚಳ
ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನೀರಿನ ಮಟ್ಟ 111 ಅಡಿ ತಲುಪಿದೆ. ಒಳ ಹರಿವಿನ ಪ್ರಮಾಣ 4883 ಕ್ಯುಸೆಕ್ ಹಾಗೂ 2141 ಕ್ಯುಸೆಕ್ ನೀರು ಹೊರ ಹರಿವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


