ದ.ಕ.ಬಂದ್: ಅಲ್ಲಲ್ಲಿ ಹಿಂಸೆ, ಇರಿತ, ಕಲ್ಲು ತೂರಾಟ
ಟಿಪ್ಪು ಜಯಂತಿ ನಂತರದ ಬೆಳವಣಿಗೆಯಲ್ಲಿ ಬಂಟ್ವಾಳದಲ್ಲಿ ಗುರುವಾರ ರಾತ್ರಿ ನಡೆದ ಯುವಕನ ಹತ್ಯೆ ಘಟನೆ ಖಂಡಿಸಿ...

Published On :
ಮಂಗಳೂರು: ಟಿಪ್ಪು ಜಯಂತಿ ನಂತರದ ಬೆಳವಣಿಗೆಯಲ್ಲಿ ಬಂಟ್ವಾಳದಲ್ಲಿ ಗುರುವಾರ ರಾತ್ರಿ ನಡೆದ ಯುವಕನ ಹತ್ಯೆ ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿದ್ದ ದ.ಕ ಜಿಲ್ಲಾ ಬಂದ್ಗೆ ಶುಕ್ರವಾರ ಅಲ್ಲಲ್ಲಿ ಹಿಂಸಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ ದ.ಕ ಜಿಲ್ಲೆಗೆ ಸೀಮಿತವಾಗಿತ್ತು. ಉಡುಪಿ ಜಿಲ್ಲೆಯಲ್ಲಿ ರಸ್ತೆತಡೆ ಮತ್ತು ಪ್ರತಿಭಟನೆಗಳು ಮಾತ್ರ ನಡೆದಿವೆ. ಕೊಡಗಿನಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಗೋಳಿತೊಟ್ಟು ಎಂಬಲ್ಲಿ ಯುವಕನಿಗೆ ಚೂರಿ ಇರಿತ, ಮಂಗಳೂರಿನ ಬಂದರು ಪ್ರದೇಶದ ಧಾರ್ಮಿಕ ಕೇಂದ್ರದ ಮೇಲೆ ಕಲ್ಲು ತೂರಾಟ ಮಾಡಿದ ಘಟನೆಗಳು ಶುಕ್ರವಾರ ನಡೆದಿವೆ.
ಜೊತೆಗೆ, ಸವಣೂರಿನಲ್ಲಿ ಅಂಗಡಿ ತೆರೆದ ವಿಚಾರದಲ್ಲಿ ಗುಂಪು ಘರ್ಷಣೆ ನಡೆದಿದ್ದು, ಲಘು ಲಾಠಿ ಪ್ರಹಾರ ನಡೆಸಲಾಗಿದೆ. ಇಲ್ಲಿ ಎಸ್ಐ ಮೇಲೆ ಹಲ್ಲೆ ನಡೆದಿದೆ. ಜಿಲ್ಲೆಯ ವಿವಿಧೆಡೆಗಳಲ್ಲಿ ಬಸ್ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಶುಕ್ರವಾರ ಮಧ್ಯಾಹ್ನದ ಬಳಿಕ ಉಪ್ಪಿನಂಗಡಿ ಸಮೀಪ ಗೋಳಿತೊಟ್ಟು ಎಂಬಲ್ಲಿ ಮಹಮದ್ ಹ್ಯಾರಿಸ್ ಎಂಬ ಯುವಕನಿಗೆ ಬೈಕ್ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಗಾಯಾಳು ಯುವಕನ ಸ್ಥಿತಿ ಗಂಭೀರವಾಗಿದೆ.
ಲಾಠಿ ಚಾರ್ಜ್: ಶುಕ್ರವಾರ ಸಂಜೆ ವೇಳೆ ಸವಣೂರಿನಲ್ಲಿ ವ್ಯಾಪಾರಿಯೊಬ್ಬರು ಅಂಗಡಿ ತೆರೆದ ವಿಚಾರದಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಗುಂಪು ಘರ್ಷಣೆಗೆ ಕಾರಣವಾಯಿತು. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಸಂಪ್ಯ ಠಾಣೆ ಎಸ್ಐ ರವಿಕುಮಾರ್ ತಲೆಗೆ ಗಂಭೀರ ಗಾಯಗಳಾಗಿವೆ.
ಕಲ್ಲು ತೂರಾಟ: ಇನ್ನೊಂದು ಪ್ರಕರಣದಲ್ಲಿ, ಮಂಗಳೂರು ನಗರದ ಬಂದರು ಪ್ರದೇಶದ ಧಾರ್ಮಿಕ ಕೇಂದ್ರಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೃತ್ಯಕ್ಕೆ ಬಳಸಲಾದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಸಂಬಂಧ ಓರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಧಾರ್ಮಿಕ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಬಸ್ಗಳಿಗೆ ಕಲ್ಲು: ಶುಕ್ರವಾರ ಬೆಳಗ್ಗೆ ಜಿಲ್ಲೆಯ ವಿವಿಧೆಡೆ ಬಸ್ ಗಳಿಗೆ ಕಲ್ಲು ತೂರಾಟ ಮಾಡಿದ ಪ್ರಕರಣಗಳು ನಡೆದಿವೆ. ಪುತ್ತೂರಲ್ಲಿ ಆರು ಬಸ್ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದರೆ, ಮಂಗಳೂರು ತಾಲೂಕಿನ ಎಕ್ಕೂರು, ಪಂಪ್ವೆಲ್, ಸುರತ್ಕಲ್ ಹಾಗೂ ಮೂಡುಬಿದಿರೆ ಸಮೀಪದ ಬೆಳುವಾಯಿ ಎಂಬಲ್ಲಿ ತಲಾ ಒಂದೊಂದು ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಔಷಧಿ ಅಂಗಡಿಗಳು ಕಾರ್ಯ ನಿರ್ವಹಿಸಿದವು. ಮೆಡಿಕಲ್ ಶಾಪ್ ಮುಚ್ಚಲು ಪೊಲೀಸರು ಸೂಚಿಸಿದಾಗ ವಿರೋಧ ಕೇಳಿಬಂತು. ಎಸಿಪಿ ಅವರಿಗೆ ಘೇರಾವ್ ಹಾಕಿದ ಪ್ರಸಂಗವೂ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


