ಸಾಫ್ಟ್ ವೇರ್ ಎಂಜಿನಿಯರ್ ಅಪಹರಣಕಾರರ ಬಂಧನ
ರಾತ್ರಿ ವೇಳೆ ಒಂಟಿಯಾಗಿ ಬರುವವರನ್ನು ಅಪಹರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು...

ಬೆಂಗಳೂರು: ರಾತ್ರಿ ವೇಳೆ ಒಂಟಿಯಾಗಿ ಬರುವವರನ್ನು ಅಪಹರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಹೆಚ್.ಎಸ್.ಆರ್.ಲೇ ಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ಮೊನ್ನೆ ಮಂಗಳವಾರ ರಾತ್ರಿ ಸಾಫ್ಟ್ ವೇರ್ ಇಂಜಿನಿಯರೊಬ್ಬರು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಸ್ವಲ್ಪ ಹೊತ್ತು ಕಳೆದ ಬಳಿಕ ಅವರ ಮೊಬೈಲ್ ನಿಂದ ಒಬ್ಬ ವ್ಯಕ್ತಿ ಅವರ ಪತ್ನಿಗೆ ಕರೆ ಮಾಡಿ, ನಿಮ್ಮ ಪತಿ ನನ್ನ ಸ್ನೇಹಿತನಿಗೆ ಆಕ್ಸಿಡೆಂಟ್ ಮಾಡಿದ್ದಾರೆ, ಅವರಿಗೆ ಚಿಕಿತ್ಸೆ ಕೊಡಿಸಲು ಬಹಳ ವೆಚ್ಚವಾಗುತ್ತಿದ್ದು, ನಿಮ್ಮ ಪತಿ 30 ಸಾವಿರ ಕೊಟ್ಟಿದ್ದಾರಷ್ಟೆ. ಇನ್ನು 90 ಸಾವಿರ ರೂಪಾಯಿ ಅವಶ್ಯಕತೆಯಿದ್ದು, ಹಣವನ್ನು ತಂದುಕೊಡುವಂತೆ ಸ್ಥಳವನ್ನು ಸೂಚಿಸಿದ್ದಾನೆ. ಆ ಮಾತನ್ನು ನಂಬಿ ಎಂಜಿನಿಯರ್ ಪತ್ನಿ ರಾತ್ರಿ ಹೊತ್ತಿನಲ್ಲಿ 90 ಸಾವಿರ ರೂಪಾಯಿ ಹಣ ತಂದುಕೊಟ್ಟಿದ್ದಾರೆ.
ಮರುದಿನ ಬೆಳಿಗ್ಗೆ ಎಂಜಿನಿಯರ್ ಪತ್ನಿಗೆ ಅದೇ ಮೊಬೈಲ್ ನಿಂದ ಫೋನ್ ಮಾಡಿ, ನಿಮ್ಮ ಪತಿಯನ್ನು ನಾವು ಅಪಹರಿಸಿದ್ದೇವೆ. 20 ಲಕ್ಷ ರೂಪಾಯಿ ಕೊಟ್ಟರೆ ಬಿಡುತ್ತೇವೆ ಎಂದು ಬೆದರಿಕೆ ಹಾಕಿದರು. ಅದಕ್ಕೆ ಮಹಿಳೆ ಹೆಚ್.ಎಸ್.ಆರ್.ಲೇ ಔಟ್ ಪೊಲೀಸರಿಗೆ ದೂರು ನೀಡಿದ್ದರು.ಆರೋಪಿಗಳ ಆಗಾಗ ಫೋನ್ ಮಾಡಿ ಹಣ ತಂದುಕೊಡುವಂತೆ ಒತ್ತಾಯಿಸುತ್ತಿದ್ದರು.
ಕಾರ್ಯಪ್ರವೃತ್ತರಾದ ಆಗ್ನೇಯ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ನೇತೃತ್ವದ ತಂಡ ಆರೋಪಿಗಳನ್ನು ಅವರು ಕರೆ ಮಾಡುತ್ತಿದ್ದ ಸ್ಥಳವನ್ನು ಟವರ್ ಮೂಲಕ ಪತ್ತೆಹಚ್ಚಿ ಮೈಕೋ ಬಾಷ್ ಕಂಪೆನಿ ಹತ್ತಿರ ಕಾರಿನಲ್ಲಿದ್ದ ಆರೋಪಿಗಳನ್ನು ಪೊಲೀಸರು ಹಿಡಿದರು. ಆ ಕಾರೊಳಗಿದ್ದ ಸಾಫ್ಟ್ ವೇರ್ ಎಂಜಿನಿಯರನ್ನು ರಕ್ಷಿಸಿದ್ದಾರೆ. ಆರೋಪಿಗಳಿಂದ ಹಣ, ಕಾರು, ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ನಕಲಿ ರಿವಾಲ್ವರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


