ಬ್ಯಾಂಕ್‍ಗಳಿಗೆ ಪಂಗನಾಮ ಹಾಕಿದ್ದ ನಕಲಿ ಟೆಕ್ಕಿಗಳ ಸೆರೆ
ಐಶಾರಾಮಿ ಜೀವನ ನಡೆಸಲು, ಹೆಂಡ, ಹುಡುಗಿಯರ ಸಹವಾಸಕ್ಕೆ ಇವರು ಹಿಡಿದಿದ್ದು ಅಡ್ಡದಾರಿ.ಇದಕ್ಕಾಗಿ ಹಣ ಬೇಕಲ್ಲ. ಅದಕ್ಕಾಗಿ...

ಬೆಂಗಳೂರು: ಐಶಾರಾಮಿ ಜೀವನ ನಡೆಸಲು,ಹೆಂಡ, ಹುಡುಗಿಯರ ಸಹವಾಸಕ್ಕೆ ಇವರು ಹಿಡಿದಿದ್ದು ಅಡ್ಡದಾರಿ.ಇದಕ್ಕಾಗಿ ಹಣ ಬೇಕಲ್ಲ. ಅದಕ್ಕಾಗಿ ಇವರು ಬಳಸಿಕೊಂಡಿದ್ದು ಬ್ಯಾಂಕಿನ ಹಣವನ್ನು. ಆದರೆ, ಬ್ಯಾಂಕ್ ಸುಮ್ಮನೆ ಹಣ ಕೊಟ್ಟುಬಿಡುತ್ತಾ. ಇದಕ್ಕಾಗಿ ಇವರು ಬಳಸಿಕೊಂಡ ಮಾರ್ಗ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವುದಾಗಿ ಸುಳ್ಳಿನ ಕಂತೆಯನ್ನು ಹೆಣೆದರು.
ಅಷ್ಟೇ ಅಲ್ಲ ತಾವು ಹೇಳಿದ ಸುಳ್ಳನ್ನೇ ನಿಜ ಮಾಡಲು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಕಲಿ ದಾಖಲೆಗಳನ್ನು ತಯಾರಿಸಿ ದರು. ಅಷ್ಟೇ ಅಲ್ಲ ಆ ಕಂಪನಿಯ ಫೇಕ್ ಮೇಲ್ ಐಡಿಯನ್ನೂ ರೂಪಿಸಿ, ಬ್ಯಾಂಕ್‍ನವರನ್ನು ಸುಲಭವಾಗಿ ಮರಳು ಮಾಡಿದ್ದಾರೆ. ಇವರು ಹೇಳಿದ ಸುಳ್ಳನ್ನೇ ನಂಬಿದ ಬ್ಯಾಂಕ್ ಗಳು ಸಾಲವನ್ನೂ ನೀಡಿದವು. ಆದರೆ, ಹಣ ವಸೂಲಿ ಮಾಡಬೇಕಲ್ಲ. ಆವಾಗಲೇ ಬ್ಯಾಂಕ್‍ಗಳಿಗೆ ಗೊತ್ತಾಗಿದ್ದು ಇವರ ಅಸಲಿಯತ್ತು. ಇವರು ಇದುವರೆಗೆ ನಾನಾ ಬ್ಯಾಂಕ್‍ಗಳಿಗೆ ಕೋಟ್ಯಂತರ ಹಣ ವಂಚಿಸಿದ್ದಾರೆಂದು ತನಿಖೆ ವೇಳೆ ತಿಳಿದುಬಂದಿದೆ.
ಹೌದು. ಈ ರೀತಿ ಬ್ಯಾಂಕ್‍ಗಳಿಗೆ ನಕಲಿ ದಾಖಲೆಗಳನ್ನು ನೀಡಿ ಕಾರು ಕೊಳ್ಳಲು ಹಾಗೂ ಗೃಹ ಸಾಲವೆಂದು ಲಕ್ಷಾಂತರ ರುಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಜಾಲವೊಂದನ್ನು
ಪತ್ತೆ ಮಾಡಿರುವ ಹೈಗ್ರೌಂಡ್ಸ್ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.
ಮಲ್ಲೇಶ್ವರದ ವೇದಾಂತ್ ಅಲಿಯಾಸ್ ಬಿ.ಪ್ರಶಾಂತ್ (32), ರಾಜ(30), ಸಿ.ಎನ್.ಪದ್ಮನಾಭ ಅಲಿಯಾಸ್ ಪದ್ದು (31), ಲೋಕಿ ಅಲಿಯಾಸ್ ಎ.ಪಿ.ಲೋಕೇಶ್(30),ಸಂತೋಷ್ ಕುಮಾ ಅಲಿಯಾಸ್ ಪವನ್‍ರಾಜ್ (33), ಲತೀಶ್ (32),ಗಜೇಂದ್ರ ಕುಮಾರ್ ಅಲಿಯಾಸ್ ಅಪ್ಪು (30) ಮತ್ತು ಎಂ.ವಿ.ಮಾದೇಶ ಅಲಿಯಾಸ್ ಮಹೇಶ್ (32) ಬಂಧಿತರು.ಎಲ್ಲರೂ ಬಿ.ಇ, ಬಿಬಿಎಂ ಹಾಗೂ ಬಿ.ಕಾಂ ಪದವೀಧರರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ 10 ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಬಂಧಿತರು ಕಳೆದ 10 ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದು, ಹಲವು ಬ್ಯಾಂಕ್ ಗಳಿಗೆ ಕೋಟ್ಯಂತರ ರುಪಾಯಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿವರ: ಆಕ್ಸೆಂಚರ್ ಸೇರಿದಂತೆ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಲ್ಲಿ ತಾವು ಉದ್ಯೋಗಿ ಎಂದು ಗುರುತಿನ ಚೀಟಿ, ವೇತನ ಪಟ್ಟಿ, ಆದಾಯ ತೆರಿಗೆ ಪಾವತಿ ರಸೀದಿ ಹಾಗೂ ಚುನಾವಣೆ ಗುರುತಿನ ಚೀಟಿ ಸೃಷ್ಟಿಸುತ್ತಿದ್ದರು. ಬಿ.ಇ.ಪದವೀಧರನಾದ ಆರೋಪಿ ವೇದಾಂತ್, ಕಂಪ್ಯೂಟರ್ ಬಳಕೆಯಲ್ಲಿ ಪರಿಣಿತ. ಸಾಲ ಪಡೆಯಲು ಬ್ಯಾಂಕ್‍ಗೆ ಸಲ್ಲಿಸಬೇಕಾದ ಎಲ್ಲ ದಾಖಲೆಗಳನ್ನೂ ಸೃಷ್ಟಿಸಿಕೊಡುತ್ತಿದ್ದ.ಪದ್ಮನಾಭ ಮತ್ತು ಲತೀಶ್ಬ್ಯಾಂಕ್‍ಗೆ ಹೋಗಿ ಅಧಿಕಾರಿಗಳ ಬಳಿ ಸಾಲ ಪಡೆಯುವ ಮಾಡುತ್ತಿದ್ದರು. ಗಜೇಂದ್ರ, ಲೋಕೇಶ,ರಾಜ ನಕಲಿ ದಾಖಲೆ ತಯಾರಿಸಲು ಸಹಾಯ ಮಾಡುತ್ತಿದ್ದರು. ಹೀಗೆ ಒಬ್ಬೊಬ್ಬರು ಒಂದೊಂದು ಕೆಲಸ ಹಂಚಿಕೊಂಡಿದ್ದರು. ಅಂತಿಮವಾಗಿ ಕಾರು ಮತ್ತು ನಿವೇಶನ ಖರೀದಿ ಸಾಲಕ್ಕಾಗಿ ಬ್ಯಾಂಕ್‍ಗಳಿಗೆ ಅರ್ಜಿ ಸಲ್ಲಿಸುತ್ತಿದ್ದರು.
ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಆರೋಪಿಗಳು ಇ-ಮೇಲ್ ಕೂಡ ಸೃಷ್ಟಿಸಿದ್ದರು. ಸಾಲ ನೀಡುವ ಬ್ಯಾಂಕ್‍ಗಳಿಗೆ ತಾವೇ ಸಲ್ಲಿಸಿರುವ ಅರ್ಜಿಗೆ ಈ ಹೆಸರಿನ ವ್ಯಕ್ತಿ ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಲ ನೀಡಬಹುದೆಂದು ಮಾನವ ಸಂಪನ್ಮೂಲ ವಿಭಾಗ ಅಧಿಕಾರಿಗಳು ಖಚಿತಪಡಿಸಿದಂತೆ ಬ್ಯಾಂಕ್ ಮ್ಯಾನೇಜರ್ ಗೆ ಇ-ಮೇಲ್ ಕಳುಹಿಸುತ್ತಿದ್ದರು.ಇದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಬ್ಯಾಂಕ್ ಅಧಿಕಾರಿಗಳು ಸಾಲ ಮಂಜೂರು ಮಾತ್ತಿದ್ದರು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ನಕಲಿ ನೋಂದಣಿ ಸಂಖ್ಯೆ ಹಾಕಿದ್ದ 2 ಬೈಕ್, 1 ಕಾರು ಹಾಗೂ 6 ಲಕ್ಷ ಮೌಲ್ಯದ 238 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. 2008ರಲ್ಲಿ ವಂಚನೆ ಕೇಸ್ ವೊಂದರಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವಂಚಕರು ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


