ಅಧಿವೇಶನಕ್ಕೆ ಅಡ್ಡಿ ಇಲ್ಲ: ಟಿ.ಬಿ. ಜಯಚಂದ್ರ
ಬಿಬಿಎಂಪಿ ಚುನಾವಣೆ ಘೋಷಣೆಯಾಗುವುದರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ...

ಬೆಂಗಳೂರು: ಬಿಬಿಎಂಪಿ ಚುನಾವಣೆ ಘೋಷಣೆಯಾಗುವುದರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನ ಮತ್ತು ಚುನಾವಣೆ ಪ್ರತ್ಯೇಕ ವಿಚಾರ. ಸರ್ಕಾರ ಯಾವುದೇ ಪರಿಸ್ಥಿತಿಯಲ್ಲೂ ಅಧಿವೇಶನ ನಡೆಸುತ್ತದೆ. ಜುಲೈ ಅಂತ್ಯದವರೆಗೆ ಅನ್ವಯವಾಗುವಂತೆ ಧನವಿನಿಯೋಗ ವಿಧೇಯಕಕ್ಕೆ ಒಪ್ಪಿಗೆ ದೊರೆತಿರುವುದರಿಂದ ಅಧಿವೇಶನ ನಡೆಸುವುದು ಅನಿವಾರ್ಯ. ಎಷ್ಟು ದಿನ ನಡೆಸಲಾಗುತ್ತದೆ? ಬೆಂಗಳೂರಿನಲ್ಲಿ ಸದನ ನಡೆಯುತ್ತದೆಯೇ? ಎಂಬ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.
ಭೂಸುಧಾರಣಾ ಮಸೂದೆ: ಭೂ ಸುಧಾರಣೆ ಮತ್ತು ಭೂ ಕಂದಾಯ ಕಾಯ್ದೆ ಸೆಕ್ಷನ್ 79 ಎ, ಬಿಗೆ ಕಳೆದ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲೇ ತಿದ್ದುಪಡಿ ತರಲಾಗಿತ್ತು. ಆದರೆ ಈಗ ಅದನ್ನು ಮತ್ತೆ ವಾಪಾಸ್ ಪಡೆದು ಹೊಸ ರೂಪದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. 1986ರ ಭೂ ಸುಧಾರಣಾ ಕಾಯ್ದೆ ಪ್ರಕಾರ ಕೃಷಿಯೇತರ ವೃತ್ತಿ ಮಾಡುವ ವ್ಯಕ್ತಿಯ ಆದಾಯದ ಮಿತಿ ರು.2 ಲಕ್ಷದೊಳಗೆ ಇದ್ದರೆ ಮಾತ್ರ ಭೂಮಿ ಖರೀದಿಗೆ ಅವಕಾಶವಿತ್ತು. ಆದರೆ, ಈಗ ಆ ಮಿತಿಯನ್ನು ರು.25 ಲಕ್ಷದವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ ವಿಧೇಯಕ ಸೆಕ್ಷನ್ 109ಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದರು. ಹೊಸ ಸೋಲಾರ್ ನೀತಿ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಮಾಡಲಾಗುತ್ತಿದೆ. ಒಂದೊಮ್ಮೆ ರೈತನೇ ಸೋಲಾರ್ ಉದ್ಯಮದಲ್ಲಿ ತೊಡಗಲು ಮುಂದಾದರೆ, ಅವನಿಗೂ ಡೀಮ್ಡ್ ಕನ್ವರ್ಶನ್ ಅನ್ವಯವಾಗುತ್ತದೆ. ಈ ತಿದ್ದುಪಡಿ ವಿಧೇಯಕವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಜಯಚಂದ್ರ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


