ರಾಜ್ಯದ ಹಣ, ಕೇಂದ್ರ ಸರ್ಕಾರದ ಹೆಸರು
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಎನ್ ಡಿಎ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸಿದ್ದರಾಮಯ್ಯ ಜರಿದರು...

ಬೆಂಗಳೂರು: ಯೋಜನೆಗಳಿಗೆ ಹಣ ನೀಡುವುದು ರಾಜ್ಯ ಸರ್ಕಾರ. ಹೆಸರು ಮಾತ್ರ ಕೇಂದ್ರ ಸರ್ಕಾರಕ್ಕೆ!
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಯೋಜನೆಗಳನ್ನು ಟೀಕಿಸಿದ ರೀತಿ.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಭಾನುವಾರ ಜೆ.ಪಿ.ಪಾರ್ಕ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ ಕೊಳಗೇರಿ ಪ್ರದೇಶದಲ್ಲಿ ಹುಡ್ಕೋ ಮತ್ತು ವಾಂಬೆ ಯೋಡನೆಯಡಿ ನಿರ್ಮಿಸಿದ ಸಿಎಂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಎನ್ ಡಿಎ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸಿದ್ದರಾಮಯ್ಯ ಜರಿದರು.
ಎಷ್ಟು ಹಣ ನೀಡಿದ್ದೀರಿ?:
ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಎಷ್ಟು ಹಣ ಮೀಸಲಿಟ್ಟಿದೆ? ಜನ್-ಧನ್ ಯೋಜನೆಯಿಂದ ಜನರಿಗೆ ಉಪಯೋಗವಾಗಿದೆಯೇ? ಇನ್ನು ಸ್ವಚ್ಛಭಾರತ ಯೋಜನೆಗೆ ಕೇಂದ್ರ ಏನು ಕೊಟ್ಟಿದೆ? ಈ ಎಲ್ಲಾ ಯೋಜನೆಗಳಿಗೂ ನಿಗದಿಯಾಗಿರುವ ಅನುದಾನದಲ್ಲಿ ರಾಜ್ಯ ಸರ್ಕಾರಗಳದ್ದು ಸಿಂಹಪಾಲು. ಹೆಸರು ಮಾತ್ರ ಕೇಂದ್ರ ಸರ್ಕಾರದ್ದು. ಇದು ನ್ಯಾಯವೇ ಎಂದು ಸಿದ್ದರಾಮಯ್ಯ ಟೀಕಿಸಿದರು.
ನಮ್ಮದೇ ಹೆಚ್ಚು ಕೊಡುಗೆ:
ಸ್ವಚ್ಛ ಭಾರತ ಯೋಜನೆ ಫೋಷಣೆ ಮಾಡಲಾಗಿದ್ದು, ಅದಕ್ಕೆ ಶೇಕಡಾ 25 ಕೇಂದ್ರ ಸರ್ಕಾರ ಮತ್ತು ಶೇ 75ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಲಿದೆ. ಹಣ ರಾಜ್ಯ ಸರ್ಕಾರದ್ದು, ಹೆಸರು ಮಾತ್ರ ಕೇಂದ್ರ ಸರ್ಕಾರದ್ದು ಎಂದು ಟೀಕಿಸಿದರು.
ಈ ಸಂಬಂಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಉಪ ಸಮಿತಿ ರಚಿಸಲಾಗಿದೆ. ಮುಂದಿನ ಬಾರಿ ಸಮಿತಿ ಸಭೆಯಲ್ಲಿ ಶೇ 75 ಕೇಂದ್ರ, ಶೇ 25ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡುವ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.
ಕೊಳಗೇರಿ ಪ್ರದೇಶದಲ್ಲಿ ಜನರಿಗಾಗಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಸಂಪೂರ್ಣ ಉಚಿತ ಮನೆ ಕಟ್ಟಿಕೊಡುವ 'ರಾಜೀವ್ ಗಾಂಧಿ ಆವಾಸ್ ಯೋಜನೆ'ಗೆ ಪ್ರಧಾನಿ ಅಂತ್ಯ ಹಾಡಿದ್ದಾರೆ. ಹಾಗಾಗಿ ಈ ಬಗ್ಗೆ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರ ಜತೆ ಚರ್ಚಿಸಿದ್ದು, ಹಣ ನೀಡುವಂತೆ ಕೇಳಿದ್ದೇವೆ. ಆದರೆ ಅವರು, ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಮಾತ್ರ ಹಣ ನೀಡುವುದಾಗಿ ಹೇಳಿದರು. ರಾಜ್ಯ ಸರ್ಕಾರ ಈಗಾಗಲೇ ಫಲಾನುಭವಿಗಳನ್ನು ಗುರುತಿಸಿದ್ದು, ಅವರಿಗೆ ಮನೆ ನೀಡುವುದು ಹೇಗೆ ಎಂದು ಪ್ರಶ್ನಿಸಿದರು.
ಬಡವರ ಹೆಸರಿನಲ್ಲಿ, ಕೊಳಗೇರಿ ನಿರ್ಮೂಲನೆ ಮಾಡುವ ನೆಪದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕೇಂದ್ರ ಸರ್ಕಾರ, ಈಗ ಬಡವರಿಗೆ ಮನೆ ನೀಡುವ ಯೋಜನೆ ಹಾಗೂ ನರ್ಮ್ ಯೋಜನೆ ಕಾರ್ಯಕ್ರಮ ನಿಲ್ಲಿಸಿದ್ದು, ದೇಶದಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.
ಸಾಲದಲ್ಲಿ ಮನೆ ನಿರ್ಮಾಣ:
1983ರಿಂದ 2005ರವರೆಗೆ ಹುಡ್ಕೋ ಮತ್ತು ವಾಂಬೇ ಯೋಜನೆಯಡಿ ಸಾಲ ಪಡೆದು ಕೊಳಚೆ ಪ್ರದೇಶದ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಬಡವರು ಆ ಸಾಲವನ್ನು ಮರು ಪಾವತಿಸಿಲ್ಲ. ಕೊಳಗೇರಿ ಅಭಿವೃದ್ಧಿ ಮಂಡಳಿ ನೀಡಿದ ಮನೆಗಳಿಗೆ ಒಟ್ಟು 276 ಕೋಟಿ ಮನ್ನಾ ಮಾಡಿ ಬಡಜನರನ್ನು ಮಾಲೀಕರನ್ನಾಗಿ ಮಾಡಿದ್ದೇವೆ. ಬೆಂಗಳೂರಿನಲ್ಲಿ 70.20 ಕೋಟಿ ಮನ್ನಾ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


