ವೈದ್ಯ ಸೇವೆಗೆ ಅಧಿಸೂಚನೆ ಪ್ರಕಟ
ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸುಗಳನ್ನು ಪೂರೈಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿಗೆ ಸಂಬಂಧಿಸಿದಂತೆ...

ಬೆಂಗಳೂರು: ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸುಗಳನ್ನು ಪೂರೈಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿಗೆ ಸಂಬಂಧಿಸಿದಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ತಕ್ಷಣದಿಂದಲೇ ಅನ್ವಯವಾಗಲಿದೆ. ಹೀಗಾಗಿ ಈ ಶೈಕ್ಷಣಿಕ ವರ್ಷದಲ್ಲಿ ಎಂಬಿಬಿಎಸ್ ಕೋರ್ಸ್ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪೂರೈಸುವ ಪದವೀಧರರು ಒಂದು ವರ್ಷ ಕಾಲ ಸರ್ಕಾರಿ ಆರೋಗ್ಯ ಸೇವೆಯಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸ ಬೇಕಾಗುತ್ತದೆ.
ಈ ಮೂಲಕ ಗ್ರಾಮೀಣ ಭಾಗದ ವೈದ್ಯರ ಸಮಸ್ಯೆಗೆ ಕೊನೆ ಬೀಳಲಿದೆ. ಈ ಸೇವೆ ನೀಡುವ ವೈದ್ಯರಿಗೆ ಶಿಷ್ಯವೇತನ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ಕೊಡಬೇಕಾಗಿದ್ದು, ಅಲ್ಲಿ ಒಪ್ಪಿಗೆ ಸಿಕ್ಕ ನಂತರಇವರ ಸೇವೆ ಎಂದಿನಿಂದ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿ ಗಳು ಒಂದು ವರ್ಷ ಹೌಸ್ ಸರ್ಜನ್ ರೀತಿ ಕಾರ್ಯನಿರ್ವಹಿಸಬೇಕೆಂಬ ನಿಯಮವಿದೆ. ಅದೇ ರೀತಿ ಈ ನಿಯಮ ಮೀರಿ ದಂಡ ಕಟ್ಟಿ ಅದರಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿ ಕೊಡಲಾಗಿತ್ತು. ಹೀಗಾಗಿ ವೈದ್ಯಕೀಯ ಕೋರ್ಸ್ ಮುಗಿಸಿದ ಬಹುತೇಕ ವಿದ್ಯಾರ್ಥಿ ಗಳು ಸರ್ಕಾರಿ ಸೇವೆಗೆ ಬಾರದೇ ದಂಡ ಕಟ್ಟ ದೂರ ಉಳಿಯುತ್ತಿದ್ದರು. ಇದರಿಂದ ಸರ್ಕಾರದ ವಿವಿಧ ಹಂತದಲ್ಲಿ ವೈದ್ಯರ ಕೊರತೆ ಗಂಭೀರವಾಗಿ ಕಾಡಲಾರಂಭಿಸಿತು. ಈ ಹಿನ್ನೆಲೆಯಲ್ಲಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ವರ್ಷ ಸರ್ಕಾರಿ ಸೇವೆಯಲ್ಲಿ ಹೌಸ್‍ಮನ್ ಶಿಪ್ ಮಾಡಲೇ ಬೇಕೆಂಬ ಬಗ್ಗೆ ಕಾನೂನಿಗೆ ತಿದ್ದುಪಡಿ ಮಾಡಲಾಗಿತ್ತು. ಈ ಸಂಬಂಧ ಈಗ ರಾಜ್ಯ ಸರ್ಕಾರದ ಅಧಿಸೂಚನೆಯೂ ಹೊರಟಿದೆ.
ಅಧಿಸೂಚನೆಯ ಮುಖ್ಯಾಂಶ
- ಎಂಬಿಬಿಎಸ್ ನಂತರ ಅಥವಾ ಸ್ನಾತಕೋತ್ತರ ಪದವಿ ಅಥವಾ ಡಿಪ್ಲಮೊ ಕೋರ್ಸ್ ಮುಗಿಸಿದ ನಂತರ, ವೈದ್ಯಕೀಯ ಶಿಕ್ಷಣ ಪಡೆದವರು 1 ವರ್ಷ ಸರ್ಕಾರಿ ಆರೋಗ್ಯ ಸೇವೆಯಲ್ಲಿ ತರಬೇತಿ ಹೆಸರಿನಲ್ಲಿ ಕಡ್ಡಾಯವಾಗಿ ಕಾರ್ಯ ನಿರ್ವಹಿಸಲೇಬೇಕಾಗುತ್ತದೆ. ಹೀಗೆ ಕಾರ್ಯ ಕಾರ್ಯನಿರ್ವಹಿಸಿದ್ದಕ್ಕಾಗಿ ನೀಡುವ ಶಿಷ್ಯವೇತನದ ಪ್ರಮಾಣ ಸರ್ಕಾರಿ ವೈದ್ಯರಿಗೆ ನೀಡುವ ಆರಂಭಿಕ ವೇತನಕ್ಕಿಂತ ರೂ.100 ಕಡಿಮೆ ಇರುತ್ತದೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರ ನೇತೃತ್ವದ ಸಕ್ಷಮ ಪ್ರಾಧಿಕಾರ ರಚನೆಯಾಗಲಿದ್ದು, ಒಂದು ವರ್ಷದ ತರಬೇತಿ ಪೂರೈಸಿದ ಅಭ್ಯರ್ಥಿಗಳಿಗೆ ಮಾತ್ರ ಆಯುಕ್ತರಿಂದ ಪ್ರಮಾಣ ಪತ್ರ ವಿತರಣೆಯಾಗುತ್ತದೆ. ಹೀಗೆ ಪ್ರಮಾಣ ಪತ್ರ ಪಡೆಯದೇ ಅವರ ವೈದ್ಯಕೀಯ ಕೋರ್ಸ್ ಪೂರ್ಣಗೊಳ್ಳುವುದೇ ಇಲ್ಲ. ಟಿ ಎಂಬಿಬಿಎಸ್ ಮುಗಿಸಿದ ನಂತರ ಒಂದು ವರ್ಷ ಕಾರ್ಯನಿರ್ವಹಿಸುವವರಿಗೆ `ಜ್ಯೂನಿಯರ್ ರೆಸಿಡೆಂಟ್ ಟ್ರೈನಿ'- ಎಂದೂ, ಸ್ನಾತಕೋತ್ತರ ಕೋರ್ಸ್ ಮುಗಿಸಿದ ನಂತರ ಒಂದು ವರ್ಷ `ಸೀನಿಯರ್ ರೆಸಿಡೆಂಟ್ ಟ್ರೈನಿ' ಎಂದು, ವಿಶೇಷ ತಜ್ಞ ಕೋರ್ಸ್ ಮಾಡಿದವರಿಗೆ `ಸೂಪರ್ ಸ್ಪೆಷಾಲಿಟಿ ಟ್ರೈನಿ' ಎಂದು ಕರೆಯಲಾಗುತ್ತದೆ. ಈ `ಜ್ಯೂನಿಯರ್ ರೆಸಿಡೆಂಟ್ ಟ್ರೈನಿ'ಯಾದವರು ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
- ಕೋರ್ಸ್ ಮುಗಿಸಿದವರು ಸರ್ಕಾರಿ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಹೊಣೆಗಾರಿಕೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆಸೇರಿದೆ. ಅಂದರೆ ಅದು, ನೋಡಲ್ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸಲಿದೆ. ಸಕ್ಷಮ ಪ್ರಾಧಿಕಾರವು ಕೌನ್ಸೆಲಿಂಗ್ ಮುಖಾಂತರವಾಗಿ ತರಬೇತುದಾರರಿಗೆ ಸ್ಥಳ ನಿಯೋಜನೆ ಮಾಡುತ್ತದೆ. ತಾಲೂಕು ಆರೋಗ್ಯಾಧಿಕಾರಿಯ ಬಳಿ `ಜ್ಯೂನಿಯರ್ ರೆಸಿಡೆಂಟ್ ಟ್ರೈನಿ'-ಗಳುವರದಿ ಮಾಡಿಕೊಳ್ಳಬೇಕಾಗುತ್ತದೆ. ಸೀನಿಯರ್ ರೆಸಿಡೆಂಟ್ ಟ್ರೈನಿ- ಜಿಲ್ಲಾ ಆರೋಗ್ಯಾಧಿಕಾರಿ ಅಥವಾ ಡೀನ್ ಆರ್ ಡೈರೆಕ್ಟರ್ ಬಳಿ, ಸೂಪರ್ ಸ್ಪೆಷಾಲಿಟಿ ಟ್ರೈನಿಗಳು ಡೀನ್ ಅಥವಾ ಆರೋಗ್ಯ ಅಧಿಕ್ಷಕರು ಅಥವಾ ನಿರ್ದೇಶಕರ ಬಳಿ ವರದಿ ಮಾಡಿಕೊಳ್ಳುತ್ತಾರೆ.
- ಈ ವ್ಯವಸ್ಥೆಯ ಅನುಷ್ಠಾನ ಪರಿವೀಕ್ಷಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯ ಅಧ್ಯಕ್ಷತೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಸಹ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಇದರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಸಚಿವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು ಸದಸ್ಯರಾಗಿರುತ್ತಾರೆ. ಅಧಿಸೂಚನೆಯಲ್ಲಿರುವಂತೆ ಕೌನ್ಸೆಲಿಂಗ್ ಮೂಲಕ ಎಲ್ಲಿ ಸ್ಥಳ ನಿಂಯೋಜನೆಗೊಳ್ಳುವರೋ ಅಲ್ಲೇ ವಾಸ್ತವ್ಯ ಮಾಡಬೇಕಾಗುತ್ತದೆ. ಇವರಿಗೆ ಪ್ರಯಾಣ ಭತ್ಯೆ, ನಿತ್ಯ ಭತ್ಯೆ ಸೇರಿ ವಿವಿಧ ಭತ್ಯೆಗಳನ್ನೂ ನೀಡಲಾಗುತ್ತದೆ. ಜೊತೆಗೆ ಮಾಸಿಕಒಂದು ಸಿಎಲ್ ಮತ್ತು ವಾರ್ಷಿಕ 10 ದಿನ ವೈದ್ಯಕೀಯ ರಜೆ ಸೌಲಭ್ಯವಿರುತ್ತದೆ. ಇದನ್ನು ಮೀರಿ ರಜೆ ಪಡೆದರೆ ಅದು ಒಂದು ವರ್ಷದ ಸೇವಾ ಅವಧಿಯ ಪ್ರಮಾಣ ಪತ್ರ ವಿತರಣೆ ಸಂದರ್ಭದಲ್ಲಿ ಪರಿಣಾಮ ಬೀರುತ್ತದೆ. ಹಾಜರಾತಿ ಕಡ್ಡಾಯ.
- ಎಂಬಿಬಿಎಸ್ ವೈದ್ಯರ ಪರವಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರಿರುವ ಕಡೆಗಳಲ್ಲಿ ಸರ್ಕಾರಿ ಸೇವೆಗೆರೆಸಿಡೆಂಟ್ ಟ್ರೈನಿಗಳು ಹಾಜರಾಗುತ್ತಿದ್ದಂತೆ ಆಯುಷ್ ವೈದ್ಯರನ್ನು ಅಲ್ಲಿಂದ ಬಿಡುಗಡೆಗೊಳಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


