ಮೈಸೂರು ವಿವಿ ಶತಮಾನೋತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಇಂದು ಚಾಲನೆ
ದೇಶದ ಆರನೇಯ ಹಾಗೂ ರಾಜ್ಯದ ಪ್ರಪ್ರಥಮ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ...

ಮೈಸೂರು: ದೇಶದ ಆರನೇಯ ಹಾಗೂ ರಾಜ್ಯದ ಪ್ರಪ್ರಥಮ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ ಮಧ್ಯಾಹ್ನ 3ಕ್ಕೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಚಾಲನೆ ನೀಡಲಿದ್ದಾರೆ.
ರಾಜ್ಯಪಾಲ ವಿ.ಆರ್. ವಾಲ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಬಾರಿ ಸಂಸ್ಥಾಪನಾ ದಿನದಂದೇ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಇದೇ ಸಮಾರಂಭದಲ್ಲಿ ವಿಶ್ರಾಂತ ಕುಲಪತಿಗಳಾದ ಪ್ರೊ.ದೇಜಗೌ, ಡಾ.ಪಿ. ಸೆಲ್ವಿದಾಸ್, ಡಾ.ಎಂ. ಮಾದಯ್ಯ, ಪ್ರೊ.ಎಸ್.ಎನ್.ಹೆಗ್ಡೆ, ಪ್ರೊ.ಜೆ. ಶಶಿಧರ್ ಪ್ರಸಾದ್, ಪ್ರೊ.ವಿ.ಜಿ. ತಳವಾರ್, ಹಾಲಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹಾಗೂ ವಿವಿಯ ಹಿರಿಯ ವಿದ್ಯಾರ್ಥಿಯಾದ ನಿಘಂಟು ಬ್ರಹ್ಮ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರನ್ನು ಸನ್ಮಾನಿಸಲಾಗುತ್ತದೆ.
ರಾಜವಂಶಸ್ಥ್ಥರಾದ ಪ್ರಮೋದಾದೇವಿ ಒಡೆಯರ್, ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೂ ಆಹ್ವಾನ ನೀಡಲಾಗಿದೆ. 1916ರ ಜುಲೈ 27 ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿ ಸ್ಥಾಪಿಸಿದರು. ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರು ಇದಕ್ಕೆ ಸಾಥ್ ನೀಡಿದರು. ಹೀಗಾಗಿ ಪ್ರತಿ ವರ್ಷ ಜು.27 ರಂದು ವಿವಿಯ ಸಂಸ್ಥಾಪನ ದಿನ ಆಚರಿಸಿ, ಉಪನ್ಯಾಸ ಏರ್ಪಡಿಸಿಕೊಂಡು ಬರಲಾಗುತ್ತಿದೆ.
ಶತಮಾನೋತ್ಸವ ಅಂಗವಾಗಿ 2016ರ ಜು.27 ರವರೆಗೆ ನಾನಾ ಕಾರ್ಯಕ್ರಮಗಳು ನಡೆಯಲಿದ್ದು, ಮುಕ್ತಾಯ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಭಾಗವಹಿಸುವ ನಿರೀಕ್ಷೆ ಇದೆ. ಮುಂದಿನ ವರ್ಷದ ಜನವರಿ 5 ರಿಂದ 7 ರವರೆಗೆ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ ಅಧಿವೇಶನ ಕೂಡ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜ.5 ರಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೈಸೂರಿನಲ್ಲಿ ವಿಜ್ಞಾನ ಕಾಂಗ್ರೆಸ್ ಅಧಿವೇಶನ ನಡೆಯುತ್ತಿರುವುದು ಇದು ಎರಡನೇ ಬಾರಿ. ಹಿಂದೆ 1982 ರಲ್ಲಿ ನಡೆದಿತ್ತು. ಆಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಭಾಗವಹಿಸಿದ್ದರು.
ರಾಷ್ಟ್ರಪತಿಗಳ ಸ್ವಾಗತಕ್ಕೆ ಸಜ್ಜು
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ವಾಗತಕ್ಕೆ ಮೈಸೂರು ನಗರ ಸಜ್ಜಾಗಿದೆ. ದೆಹಲಿಯಿಂದ ನೇರವಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಅವರು ಆಗಮಿಸುವರು. ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವರು.
ನಂಜನಗೂಡು ರಸ್ತೆ, ಗನ್‍ಹೌಸ್ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಅಗ್ನಿಶಾಮಕ ಠಾಣೆ, ಕುಕ್ಕರಹಳ್ಳಿ ಕೆರೆ, ಬೋಗಾದಿ ರಸ್ತೆಯ ಮೂಲಕ ಮಾನಸಗಂಗೋತ್ರಿಯ ಬಯಲು ರಂಗಮಂದಿರ ತಲುಪುವರು. ರಾಷ್ಟ್ರಪತಿಗಳು ಸಂಚರಿಸುವ ಮಾರ್ಗವನ್ನು ಡಾಂಬರೀಕರಣ ಮಾಡಲಾಗಿದೆ. ವೃತ್ತಗಳಿಗೆ ಬಣ್ಣ ಬಳಿಯಲಾಗಿದೆ.
ಶತಮಾನೋತ್ಸವ ಅಂಗವಾಗಿ 2016ರ ಜು.27 ರವರೆಗೆ ನಾನಾ ಕಾರ್ಯಕ್ರಮಗಳು ನಡೆಯಲಿದ್ದು, ಮುಕ್ತಾಯ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಭಾಗವಹಿಸುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


