ರಾಹುಲ್ ಗಾಂಧಿಗೆ ರೈತರ ಕಷ್ಟ ಕೇಳಲು ಪುರುಸೊತ್ತು ಸಿಗ್ಲಿಲ್ಲವೇ?
ರಾಜ್ಯದ ವಿಮಾನ ನಿಲ್ದಾಣದಲ್ಲಿಂಯೇ ಇಳಿದು ಇಲ್ಲಿಯೇ ಒಂದು ದಿನ ತಂಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ರಾಜ್ಯದ ರೈತರ ಕಷ್ಟಗಳನ್ನು ಆಲಿಸುವ ಪುರುಸೊತ್ತು ಸಿಗಲಿಲ್ಲವೇ ಎಂದು ವೆಂಕಯ್ಯ ನಾಯ್ಡು ಟೀಕಿಸಿದ್ದಾರೆ...

ಬೆಂಗಳೂರು: ರಾಜ್ಯದ ವಿಮಾನ ನಿಲ್ದಾಣದಲ್ಲಿಂಯೇ ಇಳಿದು ಇಲ್ಲಿಯೇ ಒಂದು ದಿನ ತಂಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ರಾಜ್ಯದ ರೈತರ ಕಷ್ಟಗಳನ್ನು ಆಲಿಸುವ ಪುರುಸೊತ್ತು ಸಿಗಲಿಲ್ಲವೇ ಎಂದು ವೆಂಕಯ್ಯ ನಾಯ್ಡು ಟೀಕಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ರಾಜ್ಯದ ರೈತರ ಕಷ್ಟ ಆಲಿಸುವ ರಾಹುಲ್ ಗಾಂಧಿ ಯವರಿಗೆ ತಮ್ಮದೇ ಪಕ್ಷದ ಸರ್ಕಾರವಿರುವ ಕರ್ನಾಟಕದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸಾಂತ್ವನ ಹೇಳಬೇಕು ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದಿರುವುದು ದುರದೃಷ್ಟಕರ ಎಂದರು. ಕಾಂಗ್ರೆಸ್ಸೇತರ ಸರ್ಕಾರ ಇರುವೆಡೆ ರೈತರ ಆತ್ಮಹತ್ಯೆ ಆದರೆ ತಕ್ಷಣವೇ ಭೇಟಿ ನೀಡಿ ರಾಜಕೀಯ ಭಾಷಣ ಮಾಡುವ ರಾಹುಲ್ ಗಾಂಧಿ, ರಾಜ್ಯದ ರೈತರನ್ನೇಕೆ ಭೇಟಿಯಾಗಿ ಸಾಂತ್ವನ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ, ರೈತರ ಒಂದಿಂಚೂ ಭೂ ಸ್ವಾಧೀನಕ್ಕೆ ಅವಕಾಶ ಕೊಡುವುದಿಲ್ಲ ಎನ್ನುತ್ತಾರೆ. ಅವರ ಸ್ಕೇಲ್‍ನಲ್ಲಿ ಒಂದಿಂಚು ಎಂದರೆ ಎಷ್ಟು ಎಂದು ವ್ಯಂಗ್ಯವಾಡಿದರು.
ಹರಿಯಾಣ ಕಾಂಗ್ರೆಸ್ ಸರ್ಕಾರವೊಂದೇ ರೈತರಿಗೆ ಪರಿಹಾರ ನೀಡದೇ 48 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿ ಕೊಂಡಿದೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೀಗಿರುವಾಗ ರಾಹುಲ್ ಗಾಂಧಿಯವರ ಸ್ಕೇಲ್‍ನಲ್ಲಿ ಇಂಚು ಅಂದರೆ ಎಷ್ಟು ಎಂದು ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅನುದಾನ ಕಡಿತವಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಿಲ್ಲ. ಸಿದ್ದರಾಮಯ್ಯ ಬಹಳ ಬುದ್ಧಿವಂತರು. ಕೇಂದ್ರದಿಂದ ಬಂದಿರುವ ಹೆಚ್ಚುವರಿ ಹಣದ ಬಗ್ಗೆ ಅವರು ಹೇಳುವುದೇ ಇಲ್ಲ. ಯೋಜನೆಗಳಿಗೆ ನಿಗದಿ ಮಾಡಿರುವ ಮೊತ್ತ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ ಎಂದಷ್ಟೇ ಹೇಳುವ ಮೂಲಕ ಕೇಂದ್ರದಿಂದ ಅನುದಾನ ಕಡಿತವಾಗಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದರು.
14ನೇ ಹಣಕಾಸು ಆಯೋಗದ ಮೂಲಕ ಕಳೆದ ಬಾರಿಗಿಂತ ಈ ಬಾರಿ ಶೇ.10ರಷ್ಟು ಅನುದಾನ ಹೆಚ್ಚುವರಿಯಾಗಿ ನೀಡಲಾಗಿದೆ. ಒಟ್ಟಾರೆ ಹೆಚ್ಚುವರಿಯಾಗಿ ಕರ್ನಾಟಕಕ್ಕೆ ಶೇ.69ರಷ್ಟು ಹಣ ಸಿಕ್ಕಿದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ರು.1 ಲಕ್ಷ 21 ಸಾವಿರ ಕೋಟಿ ಅನುದಾನ ಬರುತ್ತದೆ. ಆದರೆ ಸತ್ಯವನ್ನು ಮರೆಮಾಚಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಮಾರ್ಟ್ ಸಿಟಿ: ರಾಜ್ಯ ಸರ್ಕಾ ರವೇ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಗಮನವಿರಿಸಿ ಕೊಂಡು ಸ್ಮಾರ್ಟ್ ಸಿಟಿ ನಗರಗಳ ಆಯ್ಕೆ ಪಟ್ಟಿಯನ್ನು ಕೇಂದ್ರಕ್ಕೆ ನೀಡಬೇಕು. ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣವಾಗಲಿದೆ ಎಂದರು ವಿವರಿಸಿದರು. ಅದೇ ರೀತಿ, 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ರಾಜ್ಯದ 26 ನಗರಗಳನ್ನು ಅಮೃತ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಗುಲ್ಬರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬಿಜಾಪುರ, ಶಿವಮೊಗ್ಗ, ಭದ್ರಾವತಿ , ರಾಯಚೂರು , ಬೀದರ್, ಹೊಸಪೇಟೆ, ಗದಗ ಬೆಟಗೇರಿ, ಕೆಜಿಎಫ್, ಕೋಲಾರ, ಚಿತ್ರದುರ್ಗ, ಮಂಡ್ಯ, ಹಾಸನ, ಉಡುಪಿ, ಚಿಕ್ಕಮಗಳೂರು, ಬಾಗಲಕೋಟೆ, ರಾಣೆಬೆನ್ನೂರು, ಗಂಗಾವತಿ ಈ ಯೋಜನೆಯಡಿ ಬರಲಿವೆ. ಈ ನಗರಗಳ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಶೇ.50ರಷ್ಟು ಅನುದಾನ ಕೇಂದ್ರ ಭರಿಸಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


