ಟಿವಿಗೆ ಇಲ್ಲದ ಸೆನ್ಸಾರ್‍ಶಿಪ್ ಸಿನಿಮಾಕ್ಕೆ ಏಕೆ?
ಟಿವಿಗೆ ಇಲ್ಲದ ಸೆನ್ಸಾರ್‍ಶಿಪ್ ಸಿನಿಮಾಕ್ಕೆ ಮಾತ್ರ ಏಕೆ? ಇಡೀ ದೇಶದಲ್ಲಿ ಏಕರೂಪದ ಸೆನ್ಸಾರ್‍ಶಿಪ್ ಕಾಯ್ದೆ ಜಾರಿಯಾಗಬೇಕು...

ಶಿವಮೊಗ್ಗ: ಟಿವಿಗೆ ಇಲ್ಲದ ಸೆನ್ಸಾರ್‍ಶಿಪ್ ಸಿನಿಮಾಕ್ಕೆ ಮಾತ್ರ ಏಕೆ? ಇಡೀ ದೇಶದಲ್ಲಿ ಏಕರೂಪದ ಸೆನ್ಸಾರ್‍ಶಿಪ್ ಕಾಯ್ದೆ ಜಾರಿಯಾಗಬೇಕು. ಇಲ್ಲದಿದ್ದರೆ ಈ ವ್ಯವಸ್ಥೆಯ
ಅಗತ್ಯವೇ ಇಲ್ಲ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಚಲನಚಿತ್ರರಂಗದ ವರ್ತಮಾನದ ಸ್ಥಿತಿ ಹಾಗೂ ಸೆನ್ಸಾರ್ ಮಂಡಳಿಯ ಪ್ರಸ್ತುತತೆ' ವಿಷಯವಾಗಿ ತಮ್ಮ ವಿಚಾರಗಳನ್ನು ಮಂಡಿಸಿ, ಪಕ್ಕದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸಿನಿಮಾಗಳಿಗೆ ದೊರೆಯುವ ಪ್ರಮಾಣಪತ್ರ ಕರ್ನಾಟಕದಲ್ಲಿ ಸಿಗುವುದಿಲ್ಲ. ಹಿಂದಿ ಭಾಷೆಗೆ ಒಂದು ರೀತಿ, ಕನ್ನಡ ಭಾಷೆಗೆ ಇನ್ನೊಂದುರೀತಿ- ನೀತಿಗಳನ್ನು ಅನುಸರಿಸಲಾಗುತ್ತಿದೆ. ಸೆನ್ಸಾರ್ ಮಂಡಳಿ ಎಂಬುದೇ ಹಾಸ್ಯಾಸ್ಪದವಾಗಿದೆ ಎಂದರು. ಸೆನ್ಸಾರ್ ಕಾಯ್ದೆ ಸಂಪೂರ್ಣವಾಗಿ ಮರು ಪರಿಶೀಲನೆ, ಮರುವಿಮರ್ಶೆ, ಮರುಚಿಂತನೆಗೆ ಒಳಪಡಬೇಕಿದೆ. ದೃಶ್ಯಮಾಧ್ಯಮದ ಎಲ್ಲವ ನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡರೆ ಮಾತ್ರ ಈ ಕಾಯ್ದೆಗೆ ಮೌಲ್ಯ ಸಿಗುತ್ತದೆ.ಯಾವುದೋ ಕಾಲದಲ್ಲಿ ರಚಿತವಾದ ಕಾಯ್ದೆಯ ಮಾನದಂಡ ಇಂದಿಗೂ ಅನುಸರಿಸಲಾಗುತ್ತಿದೆ. ಇದರಿಂದ ನೇರವಾಗಿ ಕನ್ನಡ ಭಾಷೆಯ ಚಿತ್ರರಂಗದ ಮೇಲೆ
ಪರಿಣಾಮ ಬೀರುತ್ತಿದೆ ಎಂದರು. ಇಂದು ಸೆನ್ಸಾರ್ ಮಂಡಳಿಗಳು ಗಂಜಿ ಕೇಂದ್ರದಂತಾಗಿ. ರಾಜಕೀಯ ನಿವೃತ್ತರನ್ನೋ, ಪಕ್ಷದ ಕಾರ್ಯಕರ್ತರನ್ನೋ ಮಂಡಳಿ ಸದಸ್ಯರನ್ನಾಗಿ ಮಾಡಲಾಗುತ್ತಿದೆ.ಅವರಿಗೆ ಸಿನಿಮಾದ ಗಂಧಗಾಳಿ ಇರುವುದಿಲ್ಲ. ಹಾಗಾಗಿ ಭ್ರಷ್ಟಾಚಾರದ ದೊಡ್ಡ ಕೂಪಗಳಾಗಿವೆ. ಪ್ರಮುಖವಾಗಿ ರಾಜ್ಯದ ಸೆನ್ಸಾರ್ ಮಂಡಳಿಯನ್ನೇ ಗುರಿಯಾಗಿಟ್ಟುಕೊಂಡು ಟೀಕಿಸಿದ ಅವರು, ಅವರು ಹೇಳುತ್ತಿರುವ ರೀತಿ ನಾವು ಸಿನಿಮಾ ತೆಗೆಯಬೇಕಂತೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಗ್ರಾಮರ್ ಇಲ್ಲ: ಸಿನಿಮಾಕ್ಕೆ ತನ್ನದೇ ಆದ ಗ್ರಾಮರ್ ಇಲ್ಲ. ಗ್ರಾಮರ್ ಇರಬೇಕೆಂದು ಬಯಸುವುದೂ ಸಹ ತಪ್ಪು.ಪ್ರತಿಯೊಬ್ಬರ ಅಭಿವ್ಯಕ್ತಿ ಭಿನ್ನವಾಗಿರುತ್ತದೆ. ಎಲ್ಲರೂ ಒಂದೇ ರೀತಿ ಸಿನಿಮಾ ತೆಗೆಯುವುದಿಲ್ಲ. ಅಂತಿಮವಾಗಿ ಜನರು ಏನನ್ನು ಸ್ವೀಕರಿಸುತ್ತಾರೆ ಎಂಬುದೇ ಸತ್ಯಎಂದು ಟಿ.ಎಸ್. ನಾಗಾಭರಣ ಹೇಳಿದರು.ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಹಾಗೂ ಸದಸ್ಯರು ರಾಜಿನಾಮೆ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಟಿ.ಎಸ್. ನಾಗಾಭರಣ ಅವರು, `ಮೆಸೆಂಜರ್ ಆಫ್ ಗಾಡ್' ಸಿನಿಮಾ ಅವರು ಹೇಳಿದ ರೀತಿಯಲ್ಲಿ ಇರಬೇಕಿತ್ತೆ? ಒಪ್ಪುವುದು, ಬಿಡುವುದು ಜನರಿಗೆ ಬಿಟ್ಟಿದ್ದು. ಪ್ರಮುಖವಾಗಿ ಸೆನ್ಸಾರ್ ಕಾನೂನು ಬದಲಾಗಬೇಕು, ಸೆನ್ಸಾರ್ ಮಂಡಳಿಗೆ ಅಗತ್ಯವಿರುವಷ್ಟು ಅಧಿಕಾರಿ, ಸಿಬ್ಬಂದಿ ನೇಮಿಸಬೇಕು. ಎಲ್ಲ ರಾಜ್ಯಕ್ಕೂ ಒಂದೇ ರೀತಿಯ ಕಾನೂನು ಇರಬೇಕು ಎಂದು ಪ್ರತಿಪಾದಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವೈದ್ಯ, ಕಾರ್ಯದರ್ಶಿ ನಿಂಗನಗೌಡ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


