ಎತ್ತಿನ ಗಾಡಿಯಲ್ಲಿ ಸಮ್ಮೇಳನ ಅಧ್ಯಕ್ಷರ ಭವ್ಯ ಮೆರವಣಿಗೆ
ಹೊಸ ವರ್ಷದಲ್ಲಿ ಮತ್ತು ಕೇಂದ್ರ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಶ್ರವಣಬೆಳಗೊಳ...

ಹಾಸನ: ಹೊಸ ವರ್ಷದಲ್ಲಿ ಮತ್ತು ಕೇಂದ್ರ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 81ನೇ ಅಕ್ಷರ ಜಾತ್ರೆಯಲ್ಲಿ ಎರಡು ಪ್ರಥಮಗಳು ಮೇಳೈಸುತ್ತಿರುವುದು ವಿಶೇಷವಾಗಿದೆ.
ಇದೇ ಮೊದಲ ಬಾರಿಗೆ ಸಮ್ಮೇಳನಾಧ್ಯಕ್ಷರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿಸುವುದು ಮತ್ತು ಸಮ್ಮೇಳನದ ಹಿಂದಿನ ದಿನವೇ ಅಧ್ಯಕ್ಷರ ಮೆರವಣಿಗೆ ಮಾಡುತ್ತಿರುವುದು ಈ ಎರಡು ಪ್ರಥಮಗಳನ್ನು 81ನೇ ಸಮ್ಮೇಳನ ತನ್ನದಾಗಿಸಿಕೊಳ್ಳುತ್ತಿದೆ. ಈ ನಡುವೆ ಸಮ್ಮೇಳನದಲ್ಲಿ ವೇದಿಕೆ ಹಂಚಿಕೊಳ್ಳುವ ಗಣ್ಯರು ದೇಶಿ ಸಂಸ್ಕೃತಿ ಪ್ರತಿಬಿಂಬಿಸುವ ಜುಬ್ಬ, ಪಂಚೆ,ಟವಲ್ ಧರಿಸುವುದಕ್ಕೆ ಒತ್ತು ನೀಡಲಾಗುತ್ತಿದೆ.
20 ಎತ್ತಿನಗಾಡಿಗಳು: ಸಮ್ಮೇಳನಾಧ್ಯಕ್ಷರು ಅಲಂಕೃತ ಎತ್ತಿನ ಗಾಡಿಯಲ್ಲಿ ಆಸೀನರಾಗಿ ಮೆರವಣಿಗೆ ತೆರಳುತ್ತಾರೆ. ಉಳಿದ ಗಣ್ಯರೂ ಎತ್ತಿನ ಗಾಡಿಗಳಲ್ಲೇ ಸಾಗುತ್ತಾರೆ. ಸುಮಾರು 20 ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ. ಮೆರವಣಿಗೆಯಲ್ಲಿ ಸಾಗುವ ಸಮ್ಮೇಳನ ಅಧ್ಯಕ್ಷರು ಸೇರಿದಂತೆ ಎಲ್ಲರೂ ಖಾದಿ ಜುಬ್ಬ, ಪಂಚೆ ಮತ್ತು ಟವಲ್ ಹಾಕಿಕೊಂಡು ಮೆರವಣಿಗೆ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ. ಖಾದಿ ವಸ್ತ್ರ ಮತ್ತು ಬಟ್ಟೆಗಳನ್ನು ಶೇ.50 ರಷ್ಟು ರಿಯಾಯಿತಿ ದರದಲ್ಲಿ ಸಮ್ಮೇಳನ ನಡೆಯುವ ಸಮಯದಲ್ಲಿ ಮಾರಾಟ ಮಾಡಬೇಕೆಂದು ಖಾದಿ ಮಂಡಲಿ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಬಂಡಾಯ ಕವಿ: ಸಮ್ಮೇಳನಾಧ್ಯಕ್ಷರಾದ ಬಂಡಾಯ ಕವಿ ಸಿದ್ದಲಿಂಗಯ್ಯ ಅಪ್ಪಣ ಗ್ರಾಮೀಣ ಪ್ರತಿಭೆ. ಕೃಷಿ ಕಾಯಕವಲ್ಲದೇ ಕುರಿ ಮೇಯಿಸುವ ಮೂಲಕ ಗ್ರಾಮೀಣ ಭಾಗದ ಜನರ ಮಿಡಿತವನ್ನು ಸ್ವ ಅನುಭವದಿಂದ ಬಲ್ಲವರು. ಹಾಗಾಗಿ ಅವರನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡುವುದು ಸಮಂಜಸ ಎಂಬುದು ಸಮ್ಮೇಳನ ಸ್ವಾಗತ ಸಮಿತಿಯ ಅನಿಸಿಕೆಯಾಗಿದೆ. ಸಮ್ಮೇಳನದ ಹಿಂದಿನ ದಿನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುತ್ತದೆ ಅಂದರೆ...ಜನವರಿ 31ರಂದು ಸಂಜೆ 4 ರಿಂದ 6-6.30 ವರೆಗೆ ನಡೆಯಲಿದೆ.
ಒಂದು ಮೈಲಿ ಮೆರವಣಿಗೆ
ಮೆರವಣಿಗೆ ಉದ್ದವೇ ಸುಮಾರು 1 ಮೈಲಿ ಇರುತ್ತದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜಾನಪದ, ಯಕ್ಷಗಾನ ಮತ್ತಿತರ ಕಲಾತಂಡಗಳು ಭಾಗವಹಿಸಲಿವೆ. ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕನ್ನಡ ಧ್ವಜದ ಬಣ್ಣಗಳುಳ್ಳ ವಸ್ತ್ರಗಳನ್ನು ತೊಟ್ಟು ಭಾಗವಹಿಸುವರು. ಸ್ಕೌಟ್ಸ್ ಮತ್ತು ಗೌಡ್ಸ್ ತಂಡ ಕೂಡ ಭಾಗವಹಿಸಲಿದೆ. ಮೆರವಣಿಗೆ ಸಾಗುವ ರಸ್ತೆಗಳ ಆಜುಬಾಜಿನಲ್ಲಿ ಹೂವಿನ ಅಲಂಕಾರ ಮತ್ತು ರಸ್ತೆಗಳಲ್ಲಿ ಮಹಿಳೆಯರು ರಂಗೋಲಿ ಚಿತ್ತಾರವನ್ನು ಬಿಡಿಸಲಿದ್ದಾರೆ.
ಹಿಂದಿನ ದಿನವೇ ಮೆರವಣಿಗೆ ಏಕೆ?
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮುಗಿಯುವುದು ಮಧ್ಯಾಹ್ನ 2 ಗಂಟೆಯಾಗುತ್ತದೆ. ಇದರಿಂದಾಗಿ ಸಮ್ಮೇಳನದ ಉದ್ಘಾಟನಾ ಸಮಾರಂಭ ಮತ್ತು ಸಮ್ಮೇಳನಾಧ್ಯಕ್ಷರ ಭಾಷಣ ತೀರ ವಿಳಂಬವಾಗುತ್ತದೆ. ಸಾಹಿತ್ಯಾಸಕ್ತರಿಗೆ ತೊಂದರೆ ಆಗುತ್ತದೆ ಹೀಗಾಗಿ ಹಿಂದಿನ ದಿನವೇ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.
ಸಭಿಕರಿಗೂ ತಪ್ಪಿದ ಕಿರಿಕಿರಿ
ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಸಾಹಿತಿ ನಾ.ಡಿಸೋಜಾ, ಅಧ್ಯಕ್ಷ ಭಾಷಣ ಮಾಡುತ್ತಿದ್ದಾಗ ಸಭಿಕರೊಬ್ಬರು ಬೇಗ ಭಾಷಣ ಮುಗಿಸಿ ಎಂದು ಚೀಟಿ ನೀಡಿದ್ದರು. ಇದರಿಂದ ಡಿಸೋಜಾ ಬೇಸರಗೊಂಡಿದ್ದಲ್ಲದೆ, ಸಂಘಟಕರಿಗೂ ಇರಸು ಮುರಿಸು ಉಂಟಾಗಿತ್ತು. ಆದ್ದರಿಂದ ಈ ಸಮ್ಮೇಳನದಲ್ಲಿ ಹಿಂದಿನ ದಿನ ಮೆರವಣಿಗೆ ನಡೆಸಲಾಗುತ್ತಿದೆ.
-ಡಾ. ಎಚ್.ಎಲ್ ಜನಾರ್ದನ್
ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ
-ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


