ಹೌಸ್‍ಕೀಪಿಂಗ್ ಉದ್ಯೋಗಿ ನಿಗೂಢ ಸಾವು
ಕೆಂಗೇರಿ ಸಮೀಪದ ಬೀಡಿ ಕಾರ್ಮಿಕರ ಕಾಲೋನಿ ಬಳಿ ಖಾಸಗಿ ಕಂಪನಿ ಆವರಣದಲ್ಲಿ ಹೌಸ್ ಕೀಪಿಂಗ್ ಉದ್ಯೋಗಿಯೊಬ್ಬರು ನಿಗೂಢವಾಗಿ ಮೃತಪಟ್ಟಿದ್ದಾರೆ...

ಬೆಂಗಳೂರು: ಕೆಂಗೇರಿ ಸಮೀಪದ ಬೀಡಿ ಕಾರ್ಮಿಕರ ಕಾಲೋನಿ ಬಳಿ ಖಾಸಗಿ ಕಂಪನಿ ಆವರಣದಲ್ಲಿ ಹೌಸ್ ಕೀಪಿಂಗ್ ಉದ್ಯೋಗಿಯೊಬ್ಬರು ನಿಗೂಢವಾಗಿ ಮೃತಪಟ್ಟಿದ್ದಾರೆ.
ಕೆಂಗೇರಿ 7ನೇ ಮುಖ್ಯರಸ್ತೆ ನಿವಾಸಿ ವೆಂಕಟರಾಜು (47) ಮೃತರು. ಇವರು ಸಿಡಿಡಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಅಸ್ವಸ್ಥನಾಗಿ ಬಿದ್ದಿದ್ದ ಅವರನ್ನು ಕಂಡ ಕಂಪನಿ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ವೆಂಕಟರಾಜು ಅವರ ಸಹೋದ್ಯೋಗಿಗಳೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಸಿ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಆರೋಪಿಗಳನ್ನು ಬಂಧಿಸುವವರೆಗೆ ಸ್ಥಳದಿಂದ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದ್ದರು. ನಂತರ ಸ್ಥಳಕ್ಕೆ ಧಾವಿಸಿದ ಪಶ್ಚಿಮ ವಿಭಾಗ ಡಿಸಿಪಿ ಲಾಬುರಾಮ್ ಹಾಗೂ ಹಿರಿಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆ ನೀಡಿದರು. ಬಳಿಕ ಸಂಬಂಧಿಕರು ಪ್ರತಿಭಟನೆ ಹಿಂಪಡೆದರು. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಇದು ಕೊಲೆಯೋ ಆತ್ಮಹತ್ಯೆಯೋ ಎಂಬುದು ತಿಳಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಹೋದ್ಯೋಗಿ ಜತೆ ಜಗಳ: ವೆಂಕಟರಾಜು
ಅವರು ಬೆ. 7.30ರ ವೇಳೆಗೆ ಕಂಪನಿ ಬಳಿ ಬಂದಿದ್ದರು. ಈ ವೇಳೆ ಅಲ್ಲಿನ ಕೆಲಸ ಮಾಡುವ ಸುಶೀಲಮ್ಮ ಎಂಬಾಕೆಯ ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದ ವೆಂಕರಾಜು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಅಸ್ವಸ್ಥಗೊಂಡ ಸುಶೀಲಮ್ಮರನ್ನು ಸಹೋದ್ಯೋಗಿಗಳಾದ ಮಂಗಳಮ್ಮ, ಜಯಲಕ್ಷ್ಮಮ್ಮ ಎಂಬುವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ ಮಾಡಿದ್ದರಿಂದ ಭೀತಿಗೆ ಒಳಗಾದ ವೆಂಕಟರಾಜು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಗಿ ಸೆಕ್ಯುರಿಟಿ ಗಾರ್ಡ್ ಹಾಗೂ ಸಿಬ್ಬಂದಿ ಹೇಳಿದ್ದಾರೆ. ಆದರೆ, ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


