ಅಪರಾಧಿಗಳ ಪರ ಅಗತ್ಯ ದಾಖಲೆ ನೀಡಿ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ವೇಳೆ ಅಪರಾಧಿಗಳ ಪರ ವಕೀಲರು ಅಗತ್ಯ ದಾಖಲೆ ನೀಡುತಿಲ್ಲ ಎಂದು ಹೈಕೋರ್ಟ್...

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ವೇಳೆ ಅಪರಾಧಿಗಳ ಪರ ವಕೀಲರು ಅಗತ್ಯ ದಾಖಲೆ ನೀಡುತಿಲ್ಲ ಎಂದು ಹೈಕೋರ್ಟ್ ಕಿಡಿಕಾರಿದೆ.
ಜಯಲಲಿತಾ ಹಾಗೂ ಇತರೆ ಮೂವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಪೀಠದ ನ್ಯಾ.ಸಿ.ಕುಮಾರಸ್ವಾಮಿ ಅವರಿದ್ದ ಪೀಠ, ಸುಖಾಸುಮ್ಮನೆ ವಾದ ಮಾಡುವ ಬದಲಿಗೆ ದಾಖಲೆ ಒದಗಿಸಿ. ವಿಚಾರಣೆ ಆರಂಭಗೊಂಡು 28 ದಿನ ಕಳೆದರೂ, ಸರಿಯಾದ ದಾಖಲೆ ಒದಗಿಸಿಲ್ಲ. ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ರು1 ಸಂಬಳ ಪಡೆದಿದ್ದಾರೆ ಎನ್ನುತ್ತೀರಿ, ಹಾಗಿದ್ದಲ್ಲಿ ರು. 66 ಕೋಟಿ ಹರಿದುಬಂದಿದ್ದಾದರೂ ಹೇಗೆ?
ಹೀಗೆಯೇ ಮುಂದುವರಿದಲ್ಲಿ ನ್ಯಾಯಪೀಠವೇ ಸ್ವಯಂ ಲೆಕ್ಕ-ಪತ್ರ ತಪಾಸಣೆ ನಡೆಸಿ ತೀರ್ಪು ನೀಡಬೇಕಾಗುತ್ತದೆ ಎಂದು ಪೀಠ ಖಡಕ್ ಎಚ್ಚರಿಕೆ ನೀಡಿದೆ. ಜಯಲಲಿತಾ, ಇಳವರಸಿ ಮತ್ತು ಸುಧಾಕರನ್ ಪರ ಅಂತಿಮ ಸುತ್ತಿನ ವಾದ ಮಂಡಿಸಿದ ಹಿರಿಯ ವಕೀಲರಾದ ಬಿ. ಕುಮಾರ್ ಹಾಗೂ ಸ್ವತಂತ್ರನ್ ಅವರು, ಡಿವಿಎಸಿ ವಾಸ್ತವ ಅಂಕಿ-ಅಂಶಗಳನ್ನು ನಮೂದಿಸಿಲ್ಲ. ಸುಧಾಕರನ್ ಮದುವೆಗೆ ಒಂದು ಪೈಸೆಯೂ ಖರ್ಚು ಮಾಡಿಲ್ಲ. ಪಕ್ಷದ ಮುಖಂಡರೇ ಎಲ್ಲ ಖರ್ಚು ಮಾಡಿದ್ದಾರೆ. ಊಟಕ್ಕೆ ಸ್ಥಳೀಯ ರೈತರು ದಿನಸಿ ಪದಾರ್ಥ ನೀಡಿದ್ದಾರೆ.
ರಮಣಿ ಎಂಬ ಸ್ಥಳೀಯರು ರು.15 ಲಕ್ಷಕ್ಕೂ ಅಧಿಕ ಖರ್ಚು ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಮದುವೆಗೆ ರು.6.5 ಕೋಟಿ ಖರ್ಚು ಮಾಡಲಾಗಿದೆ ಎಂದು ಡಿವಿಎಸಿ ಹೇಳಿದೆ. ಆದರೆ, ಮದುವೆ ಸಂದರ್ಭದಲ್ಲಿ ಉಡುಗೊರೆಯಾಗಿ ಬಂದ ರು.6.5 ಕೋಟಿ ಮೊತ್ತದ ಬದಲಿಗೆ ಅಧೀನ ನ್ಯಾಯಾಲಯದ ನ್ಯಾ. ಕುನ್ಹಾ ಕೇವಲ ರು. 3 ಕೋಟಿ ಮೊತ್ತವನ್ನಷ್ಟೇ ಪರಿಗಣಿಸಿದ್ದಾರೆ ಎಂದು ವಾದಿಸಿದರು. ವಕೀಲರ ಸಮರ್ಥನೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ ನ್ಯಾಯಪೀಠ, ಇದು ಬೇನಾಮಿ ಆಸ್ತಿ ಪ್ರಕರಣವಲ್ಲ. ಇದು ಭ್ರಷ್ಟಾಚಾರ ನಿಗ್ರಹ ಕಾಯಿದೆಯಲ್ಲಿ ದಾಖಲಾಗಿರುವ ಪ್ರಕರಣ.
ನೀವು ಕ್ರಿಮಿನಲ್ ಪ್ರಕರಣದಲ್ಲಿ ವಾದ ಮಂಡಿಸುವ ಬದಲಿಗೆ ಪದೇ ಪದೆ ನ್ಯಾಯದೀಶರಾದ ಕುನ್ಹಾ ಅವರ ಮೇಲೆ ಆರೋಪಿಸುತ್ತಿದ್ದೀರಿ. ಮೇಲ್ಮನವಿ ವಿಚಾರಣೆ ಆರಂಭಗೊಂಡು 28 ದಿನಗಳಾಗಿದ್ದರೂ, ಒಂದೇ ಒಂದು ಸಾಕ್ಷ್ಯ ಒದಗಿಸಿಲ್ಲ. ಪ್ರಕರಣ ದಾಖಲಾಗಿ 18 ವರ್ಷಗಳಾಗಿವೆ. ಡಿವಿಎಸಿ ನೂರಾರು ಸಾಕ್ಷ್ಯಗಳನ್ನು ಕಲೆ ಹಾಕಿದೆ. ಅದಕ್ಕೆ ಪ್ರತಿಯಾಗಿ ಈವರೆಗೂ ನಿಮಗೆ ಸಾಕ್ಷಿಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ದಾಖಲೆಗಳನ್ನು ಒದಗಿಸುವಲ್ಲಿಯೂ ವಿಫಲರಾಗಿದ್ದೀರಿ. ಅನಗತ್ಯವಾಗಿ ನ್ಯಾಯಪೀಠದ ಕಾಲಹರಣ ಆಗುತ್ತಿದೆ. ಇದೇ ರೀತಿ ವಾದ ಮುಂದವರಿಸಿದಲ್ಲಿ ನ್ಯಾಯಪೀಠವೇ ಸ್ವಯಂ ಲೆಕ್ಕ ಪರಿಶೋಧಕರನ್ನು ನೇಮಿಸಿ, ಅವರು ನೀಡುವ ವರದಿ ಆಧರಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


