ಜಿಲ್ಲಾ ಸುದ್ದಿ

ಯಾರಾಗ್ತಾರೆ ರಾಜ್ಯ ಪೋಲೀಸ್ ಮುಖ್ಯಸ್ಥ?

ರಾಜ್ಯದ ನೂತನ ಪೋಲೀಸ್ ಮಹಾನಿರ್ದೇಶಕರಾಗಿ ಓಂಪ್ರಕಾಶ್ ಅಥವಾ ಸಿಬಿಐನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ...

ಯಾರಾಗ್ತಾರೆ ರಾಜ್ಯ ಪೋಲೀಸ್ ಮುಖ್ಯಸ್ಥ?
ಪೋಲಿಸ್ ಕಮಿಷನರ್ ಕಚೇರಿ
Published On :

ಬೆಂಗಳೂರು: ರಾಜ್ಯದ ನೂತನ ಪೋಲೀಸ್  ಮಹಾನಿರ್ದೇಶಕರಾಗಿ ಓಂಪ್ರಕಾಶ್ ಅಥವಾ ಸಿಬಿಐನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರ ಆಯ್ಕೆ ಸಾಧ್ಯತೆ ದಟ್ಟವಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಹಾಲಿ ಪೊಲೀಸ್ ಮಹಾನಿರ್ದೇಶಕ ಲಾಲ್ ರುಕಾಂ ಪಚಾವೋ ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಆರ್.ಕೆ. ದತ್ತಾ, ಓಂಪ್ರಕಾಶ್, ಸುಶಾಂತ್ ಮಹಾಪಾತ್ರ,  ಬಿಪಿನ್ ಗೋಪಾಲ್ ಕೃಷ್ಣ ಸೇವಾ ಜೇಷ್ಠತೆ ಆಧಾರದ ಮೇಲೆ ಪೈಪೋಟಿಯಲ್ಲಿದ್ದಾರೆ. ಆದರೂ ಓಂಪ್ರಕಾಶ್ ಮತ್ತು ದತ್ತಾ ಅವರ ಹೆಸರು ಪ್ರಮುಖವಾಗಿದೆ. ಡಿಜಿಪಿ ಆಯ್ಕೆಯಲ್ಲಿ ಸೇವಾ ಜೇಷ್ಠತೆಗೆ ಆದ್ಯತೆ ಹೆಚ್ಚಾದರೂ ಅಂತಿಮವಾಗಿ ಇದು ರಾಜ್ಯ ಸರ್ಕಾರದ ವಿವೇಚನಾ ಅಧಿಕಾರವಾಗಿರುವುದರಿಂದ ಸಿದ್ದರಾಮಯ್ಯ ನಿರ್ಣಯವೇ ಅಂತಿಮವಾಗಬಹುದು.

ದತ್ತಾ ಅವರು ಬಹುಕೋಟಿ 2ಜಿ ಹಗರಣ, ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ. ಇತ್ತ ಓಂಪ್ರಕಾಶ್ ಕೂಡ ಹಲವು ವರ್ಷಗಳ ಆರೋಪ ರಹಿತ ಆಡಳಿತ ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಆರ್.ಕೆ. ದತ್ತಾ ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದು, ಯಾರದೇ ಮಾತಿಗೆ ಬಗ್ಗುವವರಲ್ಲ. ಇದೇ ಅವರಿಗೆ ಮುಳುವಾಗುವ ಸಾಧ್ಯತೆ ಸರ್ಕಾರದ ವಲಯದಲ್ಲಿ ಕಾಣುತ್ತಿದೆ. ಆರ್.ಕೆ ದತ್ತಾ ಲೋಕಾಯುಕ್ತ ಎಡಿಜಿಪಿ ಆಗಿದ್ದ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ  ಆದಾಯಕ್ಕೆ ಮೀರಿದ ಆಸ್ತಿ ಸಂಗ್ರಹ ಆರೋಪದ ಮೇಲೆ ದಾಳಿ ನಡೆದಿತ್ತು. ಆ ಸಂದರ್ಭದಲ್ಲಿ ಅವರ ಆಸ್ತಿ ಪ್ರಮಾಣವನ್ನು ಅತಿರಂಜಿತವಾಗಿ ಮಾಧ್ಯಮಕ್ಕೆ ವಿವರಿಸಿದ್ದರು ಎಂದು ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಜತೆಗೆ ತಮ್ಮ ವಿರುದ್ಧ  ಸುಳ್ಳು ದಾಖಲೆ ಸೃಷ್ಟಿಸಿದ್ದಾರೆಂದು ಆದಾಯ ತೆರಿಗೆ ಕಾಯ್ದೆ  ಅನ್ವಯ ನಿಂಬಾಳ್ಕರ್ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದ ಬಗ್ಗೆ ಸಿಐಡಿ ಕಳೆದ ಶನಿವಾರವಷ್ಟೇ (ಫೆ 7) ಬಿ ರಿಪೋರ್ಟ್ ಸಲ್ಲಿಸಿದೆ.
ಇದೇ ವೇಳೆ ಸೇವಾ ಹಿರಿತನದಲ್ಲಿ ಆರ್.ಕೆ ದತ್ತಾ ಅವರಿಗಿಂತ ಪೊ ಲೀಸ್ ಗೃಹ ಮಂಡಳಿ ನಿಗಮದ ಡಿಜಿಪಿ ಸುಶಾಂತ್ ಮಹಾಪಾತ್ರ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ರಾವ್ ಮುಂದಿದ್ದಾರೆ. ಇನ್ನು ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ಕೂಡಾ ಇದ್ದಾರೆ. ಆದರೆ, ಬಿಪಿನ್ ಗೋಪಾಲಕೃಷ್ಣ ಅವರು ಅನಾರೋಗ್ಯ ಹಾಗೂ ಜುಲೈ ತಿಂಗಳಲ್ಲಿ ನಿವೃತ್ತಿಯಾಗುತ್ತಿರುವುದರಿಂದ ಅವರನ್ನು ಸ್ಪರ್ಧೆಗೆ ಪರಿಗಣಿಸುವುದು ಕಷ್ಟ. ಹೀಗಾಗಿ ಆರ್.ಕೆ ದತ್ತಾ, ಓಂಪ್ರಕಾಶ್ ರಾವ್ ಹಾಗೂ ಸುಶಾಂತ ಮಹಪಾತ್ರ ಅವರ ಹೆಸರುಗಳನ್ನು ಮಾತ್ರ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ, ಗೃಹ ಸಚಿವರು, ಸಲಹೆಗಾರರು ಚರ್ಚಿಸಿ ಒಂದು ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಪೊಲೀಸ್ ಗೃಹ ಮಂಡಳಿ ನಿಗಮದ ಡಿಜಿಪಿ ಸುಶಾಂತ್ ಮಹಪಾತ್ರ ಆಗಿದ್ದಾರೆ. ಆದರೆ, ತಾತ್ಕಲ್ ಪಾಸ್‍ಪೋರ್ಟ್‍ಗಳಿಗೆ ಹಣ ಪಡೆದು ಹಲವು ಐಪಿಎಸ್ ಅಧಿಕಾರಿಗಳು ಸಹಿ ಮಾಡಿದ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಸುಶಾಂತ ಮಹಾಪಾತ್ರ ಅವರ ಹೆಸರು ಇರುವುದರಿಂದ ಅವರ ಹೆಸರು ಹುದ್ದೆಗೆ ಪರಿಗಣನೆ ಮಾಡುವುದು ಕಷ್ಟ ಎನ್ನಲಾಗುತ್ತಿದೆ.ಇದೇ ವಾರದಲ್ಲಿ ಮುಖ್ಯ ಕಾರ್ಯದರ್ಶಿ, ಗೃಹ ಸಚಿವರು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಯಲಿದ್ದು ಸರ್ಕಾರ ಅಧಿಕೃತವಾಗಿಡಿಜಿಪಿ ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಚಟುವಟಿಕೆ ಚುರುಕುಗೊಂಡಿದೆ.


ಮುಖ್ಯಮಂತ್ರಿ ಭೇಟಿಯಾದ ಆರ್.ಕೆ ದತ್ತಾ
ರಾಜ್ಯ ಪೋಲೀಸ್ ಮುಖ್ಯಸ್ಥರ ಹುದ್ದೆಯ ರೇಸ್‍ನಲ್ಲಿ ಮುಂದೆ ಇರುವ ಆರ್.ಕೆ.ದತ್ತಾ ವಿಧಾನಸೌಧದಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚೆ ನಡೆಸಿದರು. ದೆಹಲಿಯಿಂದ ಬೆಂಗಳೂರಿಗೆ ಮಂಗಳವಾರ ಆಗಮಿಸಿದ್ದ ಅವರು ರಾತ್ರಿ ದೆಹಲಿಗೆ ವಾಪಸ್ ಆಗಿದ್ದಾರೆ. ಭೇಟಿಯ ವಿವರಗಳು ಲಭ್ಯವಾಗಿಲ್ಲ. ಕೊನೆ ಕ್ಷಣದಲ್ಲಿ ಯಾವ ಬದಲಾವಣೆ ಬೇಕಾದರೂ ಆಗಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.