ಹೊಟ್ಟೆ ಹೊಲಿಸಿಕೊಂಡು ತಾಳಿ ಕಟ್ಟಿ!
ಸೂಜಿ ದಾರದಿಂದ ಹೊಟ್ಟೆ ಹೊಲಿಸಿಕೊಂಡರೆ ಮಾತ್ರ ತಾಳಿ ಕಟ್ಟುವ ಭಾಗ್ಯ..! ಕಾರವಾರದ ಮಾಜಾಳಿಯಲ್ಲಿರುವ...

ಕಾರವಾರ: ಸೂಜಿ ದಾರದಿಂದ ಹೊಟ್ಟೆ ಹೊಲಿಸಿಕೊಂಡರೆ ಮಾತ್ರ ತಾಳಿ ಕಟ್ಟುವ ಭಾಗ್ಯ..!
ಕಾರವಾರದ ಮಾಜಾಳಿಯಲ್ಲಿರುವ ದಾಡ್ ದೇವಸ್ಥಾನದ ಮಾರಿಕೆ ದೇವರ ಮಾರ್ಕೆಪೋನವ್ ಜಾತ್ರೆಯ ವಿಶಿಷ್ಟ ಸಂಪ್ರದಾಯ ಇದು. ಇಲ್ಲಿನ ರಾಮಾನಾಥ ದೇವಸ್ಥಾನದಲ್ಲಿ ಮೂರ್ನಾಲ್ಕು ದಿನದಿಂದ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಬುಧವಾರ ಪೌರ್ಣಮಿಯ ದಿನ ನಡೆಯುವ ಮಾರಿಕಾ ದೇವಿಯ ಜಾತ್ರೆಗೆ ಕೊಂಕಣಿಯಲ್ಲಿ ಮಾರ್ಕೆಪೋನವ್ ಎಂದು ಹೆಸರು. ಬೆಳಗ್ಗೆ ನಡೆಯುವ ವಿಶೇಷ ಪೂಜೆಯ ನಂತರ ಒಂದು ಕಡೆ ನವವಿವಾಹಿತೆಯರ ದಿವಸ್ ಸಂಪ್ರದಾಯ ಇನ್ನೊಂದೆಡೆ ಹೊಟ್ಟೆ ಹೊಲಿಯುವ ಸೆಲ್ ಸಂಪ್ರದಾಯ ನಡೆಯುತ್ತದೆ.
ಹೊಟ್ಟಿಗೆ ಹೊಲಿಗೆ: ಈ ಜಾತ್ರೆಯಲ್ಲಿ ಮಾರಿಕಾ ದೇವಿಯ ಎದುರು 11 ವರ್ಷ ಕ್ಕಿಂತ ಚಿಕ್ಕ ಗಂಡು ಮಕ್ಕಳ ಹೊಟ್ಟೆಯನ್ನು ಸೂಜಿ ದಾರದಿಂದ ಹೊಲಿಯಲಾಗುತ್ತದೆ.ಈ ಸಂಪ್ರದಾಯವನ್ನು ಸೆಲ್ ಎಂದು ಕರೆಯಲಾಗುತ್ತದೆ. ಹೊಟ್ಟೆ ಹೊಲಿಸಿಕೊಂಡ ಗಂಡು ಮಕ್ಕಳು ಮಾತ್ರ ಮದುವೆಯಾಗಲು ಅರ್ಹರು ಎಂಬ ನಂಬಿಕೆ ಸ್ಥಳೀಯರದ್ದು. ಬುಧವಾರ ನಡೆದ ಜಾತ್ರೆಯಲ್ಲಿ ಸಂಪ್ರದಾಯದಂತೆ 250 ಕ್ಕೂ ಹೆಚ್ಚು ಮಕ್ಕಳು ಹೊಟ್ಟೆ ಹೊಲಿಸಿಕೊಂಡರು. ಇದಕ್ಕೂ ಮುನ್ನ ಮಕ್ಕಳನ್ನು ಮಧು ಮಗ ನಂತೆ ಸಿಂಗರಿಸಲಾಗುತ್ತದೆ. ತಲೆಗೆ ಪೇಟ ತೊಡಿಸಿ, ಹೊಸ ಬಟ್ಟೆ ತೊಡಿಸಲಾಗುತ್ತದೆ. ಹೊಲಿಸಿಕೊಳ್ಳುವವರೆಗೆ ಈ ಮಕ್ಕಳು ಏನನ್ನೂ ತಿನ್ನುವಂತಿಲ್ಲ. ಹೊಟ್ಟೆ ಹೊಲಿಯಲೆಂದೇ ಮೂವರು ಪೂಜಾರಿಗಳು ನೇಮಕವಾಗಿರುತ್ತಾರೆ. ಸಂಪ್ರದಾಯದ ಸುಳಿಯಲ್ಲಿ ಪುಟ್ಟ ಮಕ್ಕಳ ಆಕ್ರಂದನ ಅರಣ್ಯರೋದನವಾಗುತ್ತದೆ.
ಬಂಡೀ ರಥ: ಸೆಲ್ ಮತ್ತು ದಿವಸ್ ಆಚರಣೆ ನಂತರ ಬಂಡೀರಥವನ್ನು ರಾಮ್ ನಾಥ ದೇವಸ್ಥಾನದ ವರೆಗೆ ಎಳೆದುಕೊಂಡು ಹೋಗುತ್ತಾರೆ. ಸಿಡಿ ಆಡುವ ಬಂಡಿಗೆ ಸಂಪೂರ್ಣ ಅಬ್ಬಲಿಗೆ ( ಕನಕಾಂಬರ) ಹೂವಿನಿಂದ ಅಲಂಕೃತವಾಗಿರುವುದು ಈ ರಥದ ವೈಶಿಷ್ಟ್ಯ. ರಾಮಾನಾಥ ದೇವ ಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಲಾಗುತ್ತದೆ.ಈ ಜಾತ್ರೆಗೆ ಕಾರವಾರ ಮಾತ್ರವಲ್ಲ, ನೆರೆಯ ಗೋವಾ, ಮಹಾರಾಷ್ಟ್ರ, ಮುಂಬೈ ಹಾಗೂ ಪೂಣಾದಿಂದಲೂ ಜನಸಾಗರ ಹರಿದುಬರುತ್ತದೆ. ಲಕ್ಷಾ ತರ ಜನ ಸೇರುವ ಮಾರ್ಕೆಪೋನವ್ ಜಾತ್ರೆ ಹಲವು ವಿಶಿಷ್ಟ ಆಚರಣೆಗಳಿಂದ ಕೂಡಿದೆ.
ನವ ವಿವಾಹಿತೆಯರಿಂದ ದಿವಸ್ ಆಚರಣೆ
ಇದರ ಜತೆ ನವ ವಿವಾಹಿತೆಯರಿಂದ ದಿವಸ್ ಸಂಪ್ರದಾಯ ನಡೆಯುತ್ತದೆ. ಸಾವಿರಾರು ಮಹಿಳೆಯರು ಒಟ್ಟಿಗೆ ಕುಳಿತು ದೀಪಾರತಿಗೆ ಪೂಜೆ ಮಾಡುತ್ತಾರೆ. ನಂತರ ಅದನ್ನು ದಾಡ್ ದೇವಸ್ಥಾನದಿಂದ ರಾಮಾ ನಾಥ ದೇವಸ್ಥಾನದವರೆಗೆ ಗದ್ದೆಯ ಮೂಲಕ ಕಾಲ್ನಡಿಗೆಯಲ್ಲಿ ತೆರಳಿ ಗುಡ್ಡ ಹತ್ತಿ ದೇವರಿಗೆ ದೀಪ ಪ್ರದರ್ಶಿಸುತ್ತಾರೆ. ಹೀಗೆ ಪ್ರದರ್ಶಿಸಿದರೆ ಹರಕೆ ತೀರಿಸಿದಂತೆ. ಹೊಸತಾಗಿ ವಿವಾಹವಾದವರು ಈ ಆಚರಣೆಯಲ್ಲಿ ಪಾಲ್ಗೊಂಡ ನಂತರ ಮಾತ್ರವೇ ಮಕ್ಕಳು ಜನಿಸುತ್ತಾರೆ ಎಂಬ ನಂಬಿಕೆಯೂ ಇದೆ. ದಿವಸ್ ಸಂಪ್ರದಾಯದಲ್ಲಿ ಪುಟ್ಟ ಮಕ್ಕಳೂ ಭಾಗವಹಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


