ಮೆಟ್ರೋ ಕಾಮಗಾರಿಗೆ ಜಾಗ ನೀಡಲು ಕೆಟಿಪಿಒ ನಕಾರ
ಬೈಯಪ್ಪನ ಹಳ್ಳಿಯಿಂದ ವೈಟ್ ಫೀಲ್ಡ್ ವರೆಗಿನ ಮೆಟ್ರೋ ಕಾಮಗಾರಿ ವಿಸ್ತರಿಸುವ ವೇಗಕ್ಕೆ ಸರ್ಕಾರಿ ಸಂಸ್ಥೆಯೇ ತೊಡರುಗಾಲಾಗಿ ಪರಿಣಮಿಸಿದ್ದು, ಸಮಸ್ಯೆಗೆ ಪರಿಹಾರ ನೀಡುವ ಹೊಣೆ ಸರ್ಕಾರದ ಹೆಗಲೇರಿದೆ...

ಬೆಂಗಳೂರು: ಬೈಯಪ್ಪನ ಹಳ್ಳಿಯಿಂದ ವೈಟ್ ಫೀಲ್ಡ್ ವರೆಗಿನ ಮೆಟ್ರೋ ಕಾಮಗಾರಿ ವಿಸ್ತರಿಸುವ ವೇಗಕ್ಕೆ ಸರ್ಕಾರಿ ಸಂಸ್ಥೆಯೇ ತೊಡರುಗಾಲಾಗಿ ಪರಿಣಮಿಸಿದ್ದು, ಸಮಸ್ಯೆಗೆ ಪರಿಹಾರ ನೀಡುವ ಹೊಣೆ ಸರ್ಕಾರದ ಹೆಗಲೇರಿದೆ.
ಆಗಿದ್ದಿಷ್ಟು. ಕಿಷ್ಕಿಂದೆಯಂತಿರುವ ವೈಟ್‍ಪಿsೀಲ್ಡ್‍ಗೆ ಆದಷ್ಟು ಶೀಘ್ರವಾಗಿ ಮೆಟ್ರೋ ಸೇವೆಯನ್ನು ವಿಸ್ತರಿಸಬೇಕೆಂಬ ಕೂಗು ಕೇಳಿಬಂದಿತ್ತು. ಜನರು ಹಾಗೂ ಸಂಘಸಂಸ್ಥೆಗಳ ಅಪೇಕ್ಷೆಗೆ ತಕ್ಕಂತೆ ಮೆಟ್ರೋ ಸಹ ಯುದ್ಧಕ್ಕೆ ಹೊರಟಂತೆ ಕಾಮಗಾರಿ ಆರಂಭಿಸಲು ಸರ್ವಸನ್ನದ್ಧವಾಗಿತ್ತು. ಆದರೆ, ಮೆಟ್ರೋ ಆಸೆಗೆ ಸರ್ಕಾರಿ ಸ್ವಾಮ್ಯದ ಕೆಟಿಪಿಒ (ಕರ್ನಾಟಕ ವ್ಯಾಪಾರ ಉತ್ತೇಜಿಸುವ ಸಂಸ್ಥೆ) ಒಂದು ಶಾಕ್ ನೀಡಿ ಅಚ್ಚರಿ ಮೂಡಿಸಿದೆ.
ವೈಟ್ ಫೀಲ್ಡ್ ನಲ್ಲಿ ನೆಲೆ ನಿಂತಿರುವ ಕೆಟಿಪಿಒ 50 ಎಕರೆ ವಿಸ್ತಾರ ಪ್ರದೇಶ ಹೊಂದಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರವನ್ನು ಉತ್ತೇಜಿಸುವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ನಡೆಸಲು ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ 5371 ಚದರ ಮೀಟರ್ ಅಳತೆಯ ಹವಾನಿಯಂತ್ರಿತ ಪ್ರದರ್ಶನ ಸಭಾಂಗಣವಿದೆ. ಜೊತೆಗೆ 38 ಚದರ ಮೀಟರ್‍ನ 11 ತೆರೆದ ಪ್ರದರ್ಶನ ಸಭಾಂಗಣಗಳಿವೆ. ಮೆಟ್ರೋ ಉದ್ದೇಶಿತ ಯೋಜನೆಯಲ್ಲಿ ಈ ಸಂಸ್ಥೆ ವ್ಯಾಪ್ತಿಯಲ್ಲಿ 6704 ಚದರ ಮೀಟರ್ ಅಳತೆಯ ಜಾಗವನ್ನು ಬಳಸಿಕೊಳ್ಳಲು ಉದ್ದೇಶಿಸಿತ್ತು.
ಆದರೀಗ ಕೆಟಿಪಿಒ ಮೆಟ್ರೋಗಾಗಿ ಜಾಗ ನೀಡಿದರೆ ತನ್ನ ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತದೆ. ಹೀಗಾಗಿ ಜಾಗ ಕೊಡಲು ಸಾಧ್ಯವೇ ಇಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. ಈ ಮೂಲಕ ವೈಟ್ ಫೀಲ್ಡ್ ವ್ಯಾಪ್ತಿಯಲ್ಲಿ ಮುಂದಿನ ಆರು ತಿಂಗಳೊಳಗಾಗಿ ಅಗತ್ಯ ಜಾಗವನ್ನು ಸ್ವಾಧೀನಪಡಿಸಿಕೊಂಡು ಜೂನ್ ನಂತರ ಕಾಮಗಾರಿ ಆರಂಭಿಸುವ ಬಿಎಂಎಆರ್ ಸಿಎಲ್ ನ ಆಶಯಕ್ಕೆ ಹಿನ್ನಡೆ ಆದಂತಾಗಿದೆ.
ಮೆಟ್ರೋ ರೈಲಿಗೆ ಅಗತ್ಯವಾದ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಒಂದು ಪವರ್ ಸಪ್ಲೈ ಕೇಂದ್ರವನ್ನು ಸ್ಥಾಪಿಸಲು ಬಿಎಂಆರ್‍ಸಿಎಲ್ ಗುರುತು ಮಾಡಿದ್ದು ಕೂಡ ಕೆಟಿಪಿಒ ಜಾಗವನ್ನೇ. ಆದರೆ, ನೀವು ಬೇರೆ ಜಾಗ ನೋಡಿಕೊಳ್ಳುವುದು ಒಳಿತು. ಹೀಗೆ ನಮ್ಮ ಆವರಣದಲ್ಲಿ ಪವರ್ ಸಪ್ಲೈ ಕೇಂದ್ರ ಆರಂಭಿಸಿದರೆ ಇಡೀ ನಮ್ಮ ಕ್ಯಾಂಪಸ್‍ನ ಚಿತ್ರಣವೇ ಬದಲಾಗುತ್ತದೆ. ಸಂಸ್ಥೆ ಸ್ಥಾಪಿಸಿರುವ ಉದ್ದೇಶವೇ ಹಾಳಾಗುತ್ತದೆ ಎಂದು ಕೆಟಿಪಿಒ ಮೆಟ್ರೋಗೆ ತಿಳಿಸಿದೆ. ಜೊತೆಗೆ ರಸ್ತೆಯ ಇನ್ನೊಂದು ಭಾಗದಲ್ಲಿ ಪವರ್ ಸಪ್ಲೈ ಸ್ಟೇಷನ್ ನಿರ್ಮಿಸಿಕೊಳ್ಳಿ ಎಂದು ಸಲಹೆ ನೀಡಿದೆ. ಆದರೆ, ಮೆಟ್ರೋ ಅಧಿಕಾರಿಗಳು ಮಾತ್ರ ಈ ಸಲಹೆಯನ್ನು ಒಪ್ಪಿಲ್ಲ.
ಕೆಟಿಪಿಒ ವಾದವೇನು?: ಕೆಟಿಪಿಒ ಹಿರಿಯ ಅಧಿಕಾರಿಗಳು ಹೇಳುವಂತೆ, ಮೆಟ್ರೋ ನಮ್ಮ ಕ್ಯಾಂಪಸ್‍ನಲ್ಲಿ 6740 ಚದರ ಮೀಟರ್ ಜಾಗವನ್ನು ಅಪೇಕ್ಷಿಸುತ್ತಿದೆ.
ಇದು ಒಟ್ಟು ಜಾಗದ ಶೇ.3 ರಷ್ಟು. ಈ ಅಪೇಕ್ಷೆ 9700 ಚದರ ಮೀಟರ್ ವರೆಗೂ ವಿಸ್ತರಣೆಯಾಗಬಹುದು. ಸದ್ಯಕ್ಕೆ ಸ್ಪಷ್ಟ ಚಿತ್ರಣವಿಲ್ಲ. ಆದರೆ, ದೊಡ್ಡದಾದ ಪವರ್ ಸಪ್ಲೈ ಸ್ಟೇಷನ್ ನಮ್ಮ ಕ್ಯಾಂಪಸ್‍ನಲ್ಲಿ ಬಂದರೆ ಅದರ ಸುತ್ತಮುತ್ತಲ ಸಾಕಷ್ಟು ಜಾಗವೂ 2.5 ಎಕರೆ ಜಾಗವನ್ನು ನಷ್ಟ ಮಾಡಿಕೊಳ್ಳುವ ಪ್ರಸಂಗ ವಿಸ್ತರಣಾ ಕಾರ್ಯಕ್ರಮಗಳಿಗೆ ಸಮಸ್ಯೆಯಾಗುತ್ತದೆ ಎಂದು ವಿವರಿಸುತ್ತಾರೆ.
ಅಷ್ಟೇ ಅಲ್ಲದೇ, ಮೊದಲ ಬಾರಿಗೆ ಇದನ್ನು ವಿರೋಧಿಸುತ್ತಿಲ್ಲ. ಈ ಹಿಂದೆ ಮೆಟ್ರೋ ಯೋಜನೆಗಾಗಿ ಜಾಗಗಳನ್ನು ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ನಮ್ಮ ಆಕ್ಷೇಪ ಎತ್ತಿದ್ದೆವು. ಆದರೆ, ಅಂದಿನಿಂದ ಇಂದಿನವರೆಗೆ ನಮ್ಮ ಮಾತಿಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ಹೇಳೋದೇನು: ಜಾಗ ನೀಡಲು ಕೆಟಿಪಿಒ ಆಕ್ಷೇಪ ಎತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಮೆಟ್ರೋ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದು ಸಾರ್ವಜನಿಕ ಉದ್ದೇಶಕ್ಕಾಗಿ ರೂಪಿತಗೊಳ್ಳುತ್ತಿರುವ ಯೋಜನೆ. ಸದ್ಯಕ್ಕೆ ವೈಟ್ ಫೀಲ್ಡ್ ವಿಸ್ತರಣಾ ಯೋಜನೆಗೆ ಕೆಟಿಪಿಒ ಸಂಸ್ಥೆಯ ಜಾಗದ್ದೊಂದೇ ಸವಾಲಿನ ವಿಷಯವಾಗಿದೆ. ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ. ಹಾಗೆಯೇ ಪವರ್ ಸಪ್ಲೈ ಸ್ಟೇಷನ್ ಅನ್ನು ಬೇರೆಡೆ ಸ್ಥಳಾಂತರಿಸುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


