ಕೇವಲ ಒಂದು ಟೀಗಾಗಿ 25 ಸಾವಿರ ಕಳೆದುಕೊಂಡ ಭೂಪ..!
ಹಣ ಸಂಪಾದನೆಯಷ್ಟೇ ಅಲ್ಲ, ಸಂಪಾದಿಸಿದ ಹಣವನ್ನು ಕಾಪಾಡಿಕೊಳ್ಳುವುದು ಕೂಡ ಭಾರಿ ಕಷ್ಟ ಎನ್ನುವುದು ಈ ಕಥೆಯಿಂದ ತಿಳಿಯುತ್ತದೆ...

ಮೈಸೂರು: ಹಣ ಸಂಪಾದನೆಯಷ್ಟೇ ಅಲ್ಲ, ಸಂಪಾದಿಸಿದ ಹಣವನ್ನು ಕಾಪಾಡಿಕೊಳ್ಳುವುದು ಕೂಡ ಭಾರಿ ಕಷ್ಟ ಎನ್ನುವುದು ಈ ಕಥೆಯಿಂದ ತಿಳಿಯುತ್ತದೆ.
ಅದೊಂದು ಕಾಲವಿತ್ತು. ಅಲ್ಲಿ ಬ್ಯಾಂಕುಗಳಿರಲಿಲ್ಲ, ಲಾಕರ್ ವ್ಯವಸ್ಥೆ ಇರಲಿಲ್ಲ. ಆದರೂ ಜನ ತಾವು ಸಂಪಾದಿಸಿದ ಹಣವನ್ನು ವಿವಿಧ ರೀತಿಯಲ್ಲಿ ರಕ್ಷಿಸಿ ಇಡುತ್ತಿದ್ದರು. ಕೆಲವರು ಭೂಮಿಯಲ್ಲಿ ಹೂತಿಟ್ಟರೆ. ಕೆಲವರು ಕಬ್ಬಿಣದ ಡಬ್ಬಗಳಲ್ಲಿ ಬಚ್ಚಿಡುತ್ತಿದ್ದರು. ಮತ್ತೆ ಕೆಲವರು ದಟ್ಟಾರಣ್ಯದ ಮರದ ಪೊಟರೆಗಳಲ್ಲಿ ಅವಿತಿಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬ್ಯಾಂಕುಗಳ ರಚನೆಯಾಗಿದೆ. ನಮ್ಮ ಹಣಕ್ಕೆ ಸಾಕಷ್ಟು ರಕ್ಷಣೆ ಕೂಡ ಇದೆ. ಪ್ಲಾಸ್ಟಿಕ್ ಮನಿ ಎಂಬ ಪರಿಕಲ್ಪನೆ ನಮ್ಮ ಹಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ರಕ್ಷಣೆ ಒದಗಿಸುತ್ತಿದೆ.
ಹೀಗಿದ್ದೂ ನಮ್ಮ ಹಣಕ್ಕೆ ಇಂದಿಗೂ ಸಂಪೂರ್ಣ ರಕ್ಷಣೆ ಇಲ್ಲ. ಅತಿಯಾದ ಬುದ್ಧಿವಂತಿಕೆಯಿಂದಲೋ ಅಥವಾ ನಮ್ಮ ಮೂರ್ಖತನದಿಂದಲೋ ಒಂದಲ್ಲ ಒಂದು ರೀತಿಯಲ್ಲಿ ನಾವು ಹಣವನ್ನು ಕಳೆದುಕೊಳ್ಳುತ್ತಿದ್ದೇವೆ. ಇಂತಹುದೇ ಮತ್ತೊಂದು ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಬಾಳೆಹಣ್ಣಿನ ವ್ಯಾಪಾರಿಯೊಬ್ಬ ತಾನು ಸಂಪಾದಿಸಿದ ಹಣವನ್ನು ಯಾರ ಕಣ್ಣಿಗೂ ಬಿಳದಂತೆ ಕಾಪಾಡಲು ಹೋಗಿ ಸಂಪೂರ್ಣ ಹಣವನ್ನು ಕಳೆದುಕೊಂಡಿದ್ದಾನೆ. ಹಣ ರಕ್ಷಣೆಗಾಗಿ ಈತ ಹೂಡಿದ ಒಂದು ಭಾರಿ ಉಪಾಯವೇ ಈತನಿಗೆ ಮುಳುವಾಗಿದೆ. ಈ ಘಟನೆ ನಡೆದು ಒಂದು ವಾರವೇ ಕಳೆದಿದ್ದು, ಈಗಲೂ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮೈಸೂರು ನಗರ ಸುತ್ತಮುತ್ತ ಸಾಕಷ್ಟು ಸುದ್ದಿ ಮಾಡುತ್ತಿದೆ.
ಮೈಸೂರಿನ ಗುಂಡ್ಲುಪೇಟೆ ರಾಘವಪುರ ಗ್ರಾಮದ ಬನ್ನೇಗೌಡ ಎಂಬ ವ್ಯಾಪಾರಿ ಕೇವಲ ಒಂದು ಟೀಗಾಗಿ ಬರೊಬ್ಬರಿ 25 ಸಾವಿರ ರುಪಾಯಿಗಳನ್ನು ಕಳೆದುಕೊಂಡಿದ್ದಾನೆ. ಬಾಳೆಹಣ್ಣು ಮಾರಾಟದಿಂದ ತಾನು ಸಂಪಾದಿಸಿದ ಹಣವನ್ನು ಕಳ್ಳರಿಂದ ಸುರಕ್ಷಿಸಿಡಲು ಚಿಂತಿಸುತ್ತಿದ್ದ ಬನ್ನೇಗೌಡ ಆ ಹಣವನ್ನು ಒಂದು ಸ್ಟೀಲ್ ಡಬ್ಬಿಯಲ್ಲಿಟ್ಟು ತನ್ನ ಮನೆಯ ಒಲೆಯ ಒಳಗೆ ಅದನ್ನು ಬಚ್ಚಿಟ್ಟಿದ್ದಾನೆ. ಅಲ್ಲದೆ ಅದರ ಮೇಲೆ ಕೆಲ ವಸ್ತುಗಳನ್ನು ಮುಚ್ಚಿದ್ದ. ಬಳಿಕ ತನ್ನ ಹಣವನ್ನು ಯಾರ ಕಣ್ಣಿಗೂ ಕಾಣದಂತೆ ಇಟ್ಟೆನೆಂಬ ಸಮಾಧಾನದಿಂದ ಅಂದು ರಾತ್ರಿ ನಿದ್ರಿಸಿದ್ದಾನೆ.
ಆದರೆ ಬನ್ನೇಗೌಡ ಎಡವಿದ್ದೇ ಇಲ್ಲಿ. ಮಾರನೆಯ ದಿನ ಬನ್ನೇಗೌಡನ ಪತ್ನಿ ಅದೇ ಒಲೆಯಲ್ಲಿ ಟೀ ಮಾಡಿ ತಂದು ಆತನಿಗೆ ನೀಡಿದ್ದಾಳೆ. ಅಲ್ಲದೆ ಪತಿಗೆ ಒಂದು ಗ್ಯಾಸ್ ಸಿಲಿಂಡರ್ ಬುಕ್ ಮಾಡುವಂತೆಯೂ, ತನಗೆ ಸೌದೆ ಒಲೆಯಲ್ಲಿ ಅಡುಗೆ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾಳೆ. ಹೆಂಡತಿಯ ಈ ಮಾತನ್ನು ಕೇಳಿದ ಬನ್ನೇಗೌಡನ ಎದೆ ಉರಿದುಹೋಗಿದ್ದು, ಕೂಡಲೇ ಸೌದೆ ಓಲೆಯ ಬಳಿ ಓಡಿ ಹೋಗಿ ತಾನು ಬಚ್ಚಿಟ್ಟಿದ್ದ ಹಣದ ಡಬ್ಬಿಯನ್ನು ತೆಗೆದು ನೋಡಿದ್ದಾನೆ. ಅಷ್ಟರಲ್ಲಾಗಲೇ ಹಣ ಬಹುತೇಕ ಸುಟ್ಟು ಹೋಗಿತ್ತು. ಅರೆಬೆಂದ ಹಣವನ್ನು ನೋಡಿದ ಬನ್ನೇಗೌಡನ ಹೃದಯ ಒಡೆದಿದೆ. ಕೇವಲ ಒಂದು ಟೀ ಇಷ್ಟು ದುಬಾರಿಯಾಗುತ್ತದೆ ಎಂದು ಬಹುಶಃ ಟೀ ಮಾಡಿದ ಬನ್ನೇಗೌಡನ ಪತ್ನಿ ಕೂಡ ಎಣಿಸಿರಲಿಕ್ಕಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


