ರಾಘವೇಶ್ವರ ಶ್ರೀ ವಿರುದ್ಧದ ಷಡ್ಯಂತ್ರ ಪ್ರಕರಣ ಕೈಬಿಟ್ಟಿದ್ದು ಸೂಕ್ತ ಕ್ರಮವಲ್ಲ: ಅಭಿಯೋಜಕರ ಆಕ್ಷೇಪ
ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ಷಡ್ಯಂತ್ರ ರೂಪಿಸಿದ್ದ ಆರೋಪಿಗಳ ವಿರುದ್ಧದ ಪ್ರಕರಣ ಕೈ ಬಿಟ್ಟಿರುವ ಕ್ರಮ ಅರ್ಹವಾದುದಲ್ಲ- ಸರ್ಕಾರದ ವಿಶೇಷ ಅಭಿಯೋಜಕ ಅಶೋಕ ನಾಯ್ಕ

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ಷಡ್ಯಂತ್ರ ರೂಪಿಸಿದ್ದ ಆರೋಪಿಗಳ ವಿರುದ್ಧದ ಪ್ರಕರಣ ಕೈ ಬಿಟ್ಟಿರುವ ಕ್ರಮ ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ಅರ್ಹವಾದುದಲ್ಲ ಎಂದು ಸರ್ಕಾರದ ವಿಶೇಷ ಅಭಿಯೋಜಕ ಅಶೋಕ ನಾಯ್ಕ ರಾಜ್ಯ ಸರ್ಕಾರದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಉನ್ನತ ಮೂಲಗಳಿಂದ ಕನ್ನಡಪ್ರಭಕ್ಕೆ ಈ ಮಾಹಿತಿ ಲಭ್ಯವಾಗಿದ್ದು, ಪ್ರಕರಣ ಕೈ ಬಿಡುವುದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಸರ್ಕಾರ ಪಾಲಿಸಲೇಬೇಕಾದ 10 ಕಾರಣಗಳು ಹಾಗೂ ಈ ಪ್ರಕರಣದಲ್ಲಿ ಸರ್ಕಾರ ಪಾಲಿಸದೇ ಇರುವ ಏಳು ಅಂಶಗಳನ್ನು ಪಟ್ಟಿ ಮಾಡಿ ಅವರು ಅಭಿಯೋಜನಾ ಇಲಾಖೆಗೆ ಪತ್ರ ಬರೆದಿದ್ದಾರೆ. ಮುರಳೀಧರ್ ಹಾಗೂ ಆಂಧ್ರಪ್ರದೇಶ ಸರ್ಕಾರಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ, ಮೊಕದ್ದಮೆ ಹಿಂತೆಗೆಯುವುದಕ್ಕೆ ಮುನ್ನ ಸರ್ಕಾರಿ ಅಭಿಯೋಜಕರ ಗಮನಕ್ಕೆ ತರಬೇಕಾಗುತ್ತದೆ.
ಮೊಕದ್ದಮೆ ಹಿಂತೆಗೆತದಿಂದ ನ್ಯಾಯ ಸಿಗುತ್ತದೆ ಎಂಬುದು ದೃಢಪಟ್ಟ ನಂತರವೇ ಒಪ್ಪಿಗೆ ನೀಡಬೇಕು. ಈ ವಿಚಾರದಲ್ಲಿ ಯಾಂತ್ರಿಕವಾಗಿ ಅರ್ಜಿ ಸಲ್ಲಿಸುವುದಕ್ಕೆ ಬರುವುದಿಲ್ಲ. ಇದರಿಂದ
ಕಾನೂನು-ಸುವ್ಯವಸ್ಥೆ ಮೇಲಾಗುವ ಪರಿಣಾಮ ಏನು? ಅಪರಾಧದ ಸ್ವರೂಪ ಏನು ಎಂಬುದನ್ನು ವಿವೇಚನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ರಾಮಚಂದ್ರಾಪುರ ಮಠದ ಸ್ವಾಮೀಜಿ ಘನತೆಗೆ ಕುಂದುಂಟು ಮಾಡಲು ಹಾಗೂ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಮಠದ ಆಡಳಿತದಿಂದ ತಪ್ಪಿಸಲು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ಸಾಕಷ್ಟು ಕಾರಣಗಳು ಲಭ್ಯವಿವೆ. ಸ್ವಾಮೀಜಿ ಹೆಸರಿಗೆ ಧಕ್ಕೆ ತರಲು ಮೊದಲನೇ ಆರೋಪಿ ಬಾಲಚಂದ್ರ, ಶ್ರೀಗಳಂತೆ ವೇಷ ಹಾಕಿಸಿ ಫೋಟೋ ತೆಗೆಸಿ ಕಂಪ್ಯೂಟರ್ ತಂತ್ರಜ್ಞಾನದಿಂದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಜತೆಗೆ ಅರೆನಗ್ನ ಅಶ್ಲೀಲ ಭಾವಚಿತ್ರ ಸೇರ್ಪಡೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳಿವೆ. ಸ್ವಾಮೀಜಿಗಳನ್ನು ಅವಮಾನಗೊಳಿಸುವುದಕ್ಕಾಗಿ ಆರೋಪಿಗಳು 1-4-2010ರಂದು ಮಧ್ಯಾಹ್ನ ಹೋಳಿ ಹಬ್ಬದ ಸಮಯದಲ್ಲಿ ಸಿಡಿ ವಿತರಣೆ ಮಾಡಿದ್ದಾರೆ. ಮಠ ಮತ್ತು ಆರೋಪಿಗಳ ಜತೆಗೆ ಈವರೆಗೆ ರಾಜಿ ವಾತಾವರಣ ಏರ್ಪಟ್ಟಿಲ್ಲ. ಹೀಗಾಗಿ ಈ ಪ್ರಕರಣ ಅಭಿಯೋಜನೆಯಿಂದ ಹಿಂದೆ ಪಡೆಯುವುದಕ್ಕೆ ಯೋಗ್ಯವಾದುದ್ದಲ್ಲ ಎಂದು ಅಭಿಪ್ರಾಯಪಟ್ಟು ಪತ್ರ ಬರೆದಿರುವುದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


