ಜಿಲ್ಲಾ ಸುದ್ದಿ

ಕೆಪಿಟಿಸಿಎಲ್‍ನಲ್ಲಿ ಕನ್ನಡಿಗರಿಗೆ ಆದ್ಯತೆ

ಕೆಪಿಟಿಸಿಎಲ್ ಮತ್ತು ಬೆಸ್ಕಾಂನ ಮುಂದಿನ ಎಲ್ಲಾ ನೇಮಕಾತಿಗಳಲ್ಲೂ ಕನ್ನಡಕ್ಕೆ ಪ್ರಾಧಾನ್ಯತೆ ನೀಡಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು...

ಕೆಪಿಟಿಸಿಎಲ್‍ನಲ್ಲಿ ಕನ್ನಡಿಗರಿಗೆ ಆದ್ಯತೆ
ಇಂಧನ ಸಚಿವ ಡಿ.ಕೆ. ಶಿವಕುಮಾರ್
Published On :

ಬೆಂಗಳೂರು: ಕೆಪಿಟಿಸಿಎಲ್ ಮತ್ತು ಬೆಸ್ಕಾಂನ ಮುಂದಿನ ಎಲ್ಲಾ ನೇಮಕಾತಿಗಳಲ್ಲೂ ಕನ್ನಡಕ್ಕೆ ಪ್ರಾಧಾನ್ಯತೆ ನೀಡಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕನ್ನಡ ಸಂಘವು ಗುರುವಾರ ಆಯೋಜಿಸಿದ್ದ 60ನೇ ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹತ್ತಾರು ವರ್ಷಗಳಿಂದಲೂ ಕನ್ನಡ ನಿರ್ಲಕ್ಷಿಸಿ ನೇಮಕಾತಿ ನಡೆದುಕೊಂಡು ಬರುತ್ತಿತ್ತು. ಕೆಲಸಕ್ಕೆ ಸೇರಿದ ಎರಡು ವರ್ಷದೊಳಗೆ ಕನ್ನಡ ಕಲಿಯಬೇಕೆಂದಿದ್ದರೂ ಇದುವರೆಗೆ ನಿಯಮ ಪಾಲಿಸಿರಲಿಲ್ಲ. ಈ ವಿಷಯ ಗೊತ್ತಾದ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನಿಯಮಕ್ಕೆ ತಿದ್ದುಪಡಿ ತಂದು ಇನ್ನು ಮುಂದೆ ಕನ್ನಡಿಗರಿಗೆ ಹೆಚ್ಚು ಪ್ರಾಧ್ಯಾನ್ಯತೆ ನೀಡಲು ಕ್ರಮ ವಹಿಸಲಾಗಿದೆ ಎಂದರು.

10,000 ನೇಮಕಾತಿ: ಇಂಧನ ಇಲಾಖೆಯ ಇತಿಹಾಸದಲ್ಲಿ 2015ನೇ ವರ್ಷ ಮಹತ್ವದ್ದು. ಹಿಂದೆಂದೂ ಆಗದ ಸುಮಾರು 10 ಸಾವಿರ ನೇಮಕಾತಿ ಈ ವರ್ಷದಲ್ಲಿ ಆಗಿದೆ. ಲೈನ್‍ಮಾ್ಯನ್ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಎಸ್ಸೆಸ್ಸೆಲ್ಸಿಗೆ ಮಿತಿಗೊಳಿಸಿ ಯಾವುದೇ ಜಾತಿ, ಹಣ, ಸ್ನೇಹಕ್ಕೆ ಮನ್ನಣೆ ನೀಡದೆ ಬಹಳ ಪಾರದರ್ಶಕವಾಗಿ ಹುದ್ದೆಗಳನ್ನು ಭರ್ತಿ ಮಾಡಿದ್ದೇನೆ. ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿರುತ್ತಾರೆ, ಅವರೊಂದಿಗೆ ಪೈಪೋಟಿ ಮಾಡಲು ಸಾಧ್ಯವಿಲ್ಲ ಎಂಬ ಈ ಭಾಗದ ವಿದ್ಯಾರ್ಥಿಗಳ ಮನವಿ ಪುರಸ್ಕರಿಸಿ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದು ವರ್ಗಾವಣೆಯ ಸಂದರ್ಭದಲ್ಲೂ ಹೆಚ್ಚು ಸಹಾಯಕ್ಕೆ ಬರಲಿದೆ ಎಂದು ಅವರು ತಿಳಿಸಿದರು.

ಬಡ್ತಿ ತಾರತಮ್ಯ ನಿವಾರಣೆ: ಕೆಪಿಟಿಸಿಎಲ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಸಿಬ್ಬಂದಿಗೆ ಜೇಷ್ಠತೆ ಅನುಸರಿಸಿ ಬಡ್ತಿ ನೀಡಲಾಗುತ್ತಿದೆ.ಈ ಹಿಂದೆ ಇದ್ದ ಗೊಂದಲ  ನಿವಾರಿಸಲಾಗಿದೆ. ಆದರೂ ಬಡ್ತಿಗಾಗಿ ಜಾತಿ ಸಂಘಟನೆಗಳು ನಿರ್ಮಾಣವಾಗುತ್ತಿರುವುದು ನೋವಿನ ಸಂಗತಿ. ಈ ವಿಚಾರದಲ್ಲಿ ನನ್ನಿಂದಲೂ ತಪ್ಪುಗಳಾಗಿವೆ, ತಪ್ಪುಗಳನ್ನು ಮಾಡಿಸಿದ್ದಾರೆ ಎಂದು ವಿಷಾದಿಸಿದರು.

ನಿವೃತ್ತರಾದ ಡಿ. ನಾಗೋಜರಾವ್, ಸಿ. ಎನ್. ಬಡ್ನಿ, ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕೆಪಿಟಿಸಿಎಲ್ ನಿರ್ದೇಶಕ ಎಸ್. ಸುಮಂತ್ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಧಾಪಕ ನಿರ್ದೇಶಕ ಜಾವೇದ್ ಅಖ್ತರ್, ಅಧಿಕಾರಿಗಳಾದ ಡಾ. ಅದಿತಿರಾಜ, ಎಂ. ರಾಮಕೃಷ್ಣ, ಆರ್. ಶ್ರೀಧರ್, ಎಂ. ನಾಗರಾಜ್, ಎ.ಎನ್. ಜಯರಾಜ್, ಕನ್ನಡ ಸಂಘದ ಪದಾಧಿಕಾರಿಗಳಾದ ಎನ್.ವಿ. ಭುವನೇಶ್ವರಯ್ಯ, ಕೆ.ಎನ್. ಮೋಹನ್, ಡಾ.ಎ.ಆರ್. ಗೋವಿಂದಸ್ವಾಮಿ ಉಪಸ್ಥಿತರಿದ್ದರು.

ತಲೆ ಕೆಟ್ಟಿರುವವರು, ವಯಸ್ಸಾದವರು ನಾಡಗೀತೆ ಬಗ್ಗೆ ಏನಾದರು ಮಾತನಾಡಿಕೊಳ್ಳಲಿ. ಆದರೆ, ನಾಡಗೀತೆ ಹಾಡುವವರು ಮಾತ್ರ ಸರಿಯಾದ ಸಮಯಕ್ಕೆ ಗೀತೆಹಾಡಿ ಮುಗಿಸಬೇಕು. ಸಂಗೀತ ಇರಬಾರದು, ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಬೆಂಗಳೂರಿನಲ್ಲಿ ಹಾಡಿದರು ಅಷ್ಟೇ ಸಮಯವಿರಬೇಕು, ಬೆಳಗಾವಿಯಲ್ಲಿ ಹಾಡಿದರೂ ಅಷ್ಟೇ ಸಮಯವಿರಬೇಕು. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನ ಹರಿಸಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಆರ್.ಕೆ. ನಲ್ಲೂರು ಪ್ರಸಾದ್ ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.