ಜಿಲ್ಲಾ ಸುದ್ದಿ

ನಿರಾಳ ಮನಸ್ಥಿತಿಯಲ್ಲಿದ್ದರೂ ನಿಂತಿಲ್ಲ ತಳಮಳ

ಜೆಡಿಎಸ್ ಸಖ್ಯ ಬೆಳೆಸಲು ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಮುದ್ರೆ ಒತ್ತುತ್ತಿದ್ದಂತೆ ತಳಮಳಿಸಿದ್ದ ಬಿಜೆಪಿ ನಾಯಕರು, ತಮ್ಮೆಲ್ಲಾ ತಂತ್ರಗಳನ್ನು ರೂಪಿಸಿ ಜೆಡಿಎಸ್ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಧನಾತ್ಮಕ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಕುಸಿದು...

ನಿರಾಳ ಮನಸ್ಥಿತಿಯಲ್ಲಿದ್ದರೂ ನಿಂತಿಲ್ಲ ತಳಮಳ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಜೆಡಿಎಸ್ ಸಖ್ಯ ಬೆಳೆಸಲು ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಮುದ್ರೆ ಒತ್ತುತ್ತಿದ್ದಂತೆ ತಳಮಳಿಸಿದ್ದ ಬಿಜೆಪಿ ನಾಯಕರು, ತಮ್ಮೆಲ್ಲಾ ತಂತ್ರಗಳನ್ನು ರೂಪಿಸಿ ಜೆಡಿಎಸ್ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಧನಾತ್ಮಕ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಕುಸಿದು ಹೋಗಿದ್ದರು. ಆದರೂ ಭಾನುವಾರ ನಡೆದ ರಾಜಕೀಯ ಬೆಳವಣಿಗೆಯಿಂದ ಬಿಜೆಪಿ ಪಾಳಯದಲ್ಲಿ ಹೊಸದೊಂದು ಆಶಾಭಾವನೆ ಹುಟ್ಟಿಕೊಂಡಿದೆ.

ಒಂದು ಕಡೆ ಜೆಡಿಎಸ್ ಯಾವುದೇ ಕಾರಣಕ್ಕೂ  ಕಾಂಗ್ರೆಸ್‍ನೊಂದಿಗೆ ಹೋಗುವುದಿಲ್ಲ ಎಂಬ ಆಶಯ ಬಿಜೆಪಿ ನಾಯಕರದ್ದು. ಅದೇ ರೀತಿ ಪಕ್ಷದ ಒಂದು ತಂಡ ಇಬ್ಬರು ಪಕ್ಷೇತರರನ್ನು ಹೇಗಾದರೂ ಸೆಳೆಯಲೇ ಬೇಕೆಂದು ತಂತ್ರ ರೂಪಿಸುತ್ತಿದ್ದಾರೆ. ಅದೂ ವರ್ಕೌಟ್ ಆಗುವ ಎಲ್ಲ ಸಾಧ್ಯತೆ ಇದೆ ಎಂದು ನಂಬಿಕೊಂಡಿದ್ದಾರೆ. ಹೀಗಾಗಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮುಖಭಂಗವಾಗುತ್ತದೆ. ಗೆಲವು ನಮ್ಮದೇ ಎಂದು ಆತ್ಮವಿಶ್ವಾಸದ ಮಾತನ್ನಾಡುತ್ತಿದ್ದಾರೆ. ಬಿಜೆಪಿಯ ಮಹಾನಗರ ಅಧ್ಯಕ್ಷ ಸುಬ್ಬ ನರಸಿಂಹ ಈ ಕುರಿತು ಪ್ರತಿಕ್ರಿಯೆ ನೀಡಿ, `ನೋಡ್ತಿರಿ, ಬೆಂಗಳೂರು ಜನರ ಆಶಯದಂತೆ ಬಿಜೆಪಿಗೆ ಬಿಬಿಎಂಪಿ ಅಧಿಕಾರ ಸಿಗುತ್ತದೆ. ನಮ್ಮ ಪಕ್ಷದವರೇ ಮೇಯರ್ ಆಗುತ್ತಾರೆ' ಎಂದು ಆತ್ಮವಿಶ್ವಾಸದಿಂದ ಹೇಳಿದರು.

ಡಿ.ಕೆ.ರವಿ ಪ್ರಕರಣ, ಒಂದಂಕಿ ಲಾಟರಿ ಹಗರಣ ಸೇರಿದಂತೆ ಇತ್ತೀಚಿನ ಅನೇಕ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ನಾವು ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಿದ್ದೇವೆ. ಜೆಡಿಎಸ್ ಸಹ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ದನಿಯನ್ನೇ ಎತ್ತಿದೆ. ಹೀಗಿರುವಾಗ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮೇಯರ್ ಆಗುವುದನ್ನು ಬೆಂಬಲಿಸುತ್ತದೆ ಎಂದು ನಮಗೆ ಅನ್ನುಸುತ್ತಿಲ್ಲ ಎಂದರು.

ಇನ್ನೊಂದೆಡೆ ಪ್ರತಿಕ್ರಿಯೆ ನೀಡಿರುವ ಆರ್.ಅಶೋಕ್, ಕಾಂಗ್ರೆಸ್‍ನವರ ಚಟುವಟಿಕೆಯಿಂದ ನಾವು ಹೆದರುವುದಿಲ್ಲ. ಕಾಂಗ್ರೆಸ್‍ನ ತಂತ್ರಕ್ಕೆ ನಾವು ಪ್ರತಿತಂತ್ರ ಹೆಣೆದಿದ್ದೇವೆ. ನಾವೇ ಮೇಯರ್ ಆಯ್ಕೆ ಮಾಡಲಿದ್ದೇವೆ. ನಮಗೆ ವಿಶ್ವಾಸ ಇದೆ. ಕೆಲವರೊಂದಿಗೆ ಮಾತುಕತೆ ಆಗಿದೆ. ಯಶಸ್ವಿಯಾಗಿದ್ದೇವೆ ಎಂದರು. ಅಧಿಸೂಚನೆ ಹೊರಡಿಸುವ ಮುನ್ನ ಕಾಂಗ್ರೆಸ್ ನಿಂದ ಕುದುರೆ ವ್ಯಾಪಾರ ನಡೆಯುತ್ತಿದೆ. ನಮ್ಮ ಜತೆಗೆ ಇದ್ದ ಕಾರ್ಪೊರೇಟರ್‍ಗಳನ್ನು ಹೈಜಾಕ್ ಮಾಡಿ ಕರೆದೊಯ್ಯಲಾಗಿದೆ. ಪಕ್ಷೇತರ ಸದಸ್ಯರು ನಮ್ಮ ಜತೆಗೆ ಇದ್ದರು. ಯಾರಿಗೆ ಯಾವ ಸ್ಥಾನ ಕಲ್ಪಿಸಬೇಕೆಂಬ ಮಾತುಕತೆ ಕೂಡ ನಾವು ಮಾಡಿ ಮುಗಿಸಿದ್ದೆವು. ಅಷ್ಟರಲ್ಲೇ ಕಾಂಗ್ರೆಸ್ ಶಾಸಕರು ಪಕ್ಷೇತರ ಸದಸ್ಯರನ್ನು ಹೈಜಾಕ್ ಮಾಡಿದರು ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.