ಕಳಸಾ-ಬಂಡೂರಿ ನಿರ್ಲಕ್ಷ್ಯ:ಮಾಜಿ ಸಿಎಂ ಶೆಟ್ಟರ್ ಆರೋಪ

ಧಾರವಾಡ: ಮಹದಾಯಿ ನ್ಯಾಯಾಧೀಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿ, 7.56 ಟಿಎಂಸಿ ನೀರಿಗಾಗಿ ಪಟ್ಟು ಹಿಡಿದರೆ ನಮ್ಮ ಪರವಾಗಿ ತೀರ್ಪು ಬರುತ್ತದೆ. ಮಹದಾಯಿ ನದಿ ಕುರಿತು ಪ್ರತ್ಯೇಕವಾಗಿ ಸರ್ವ ಪಕ್ಷಗಳ ನಿಯೋಗ ಪ್ರಧಾನಿ ಭೇಟಿ ಮಾಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಬಹುದು. ಅದು ಬಿಟ್ಟು ಆರೇಳು ಸಮಸ್ಯೆಗಳೊಂದಿಗೆ ಮಹದಾಯಿಯನ್ನೂ ಪ್ರಸ್ತಾಪಿಸಿದರೆ ಸಮಸ್ಯೆ ಪರಿಹಾರವಾಗದು. ಯೋಜನೆಯ ರೂಪುರೇಷೆಯೇ ಇಲ್ಲದೆ ಮೇಕೆದಾಟು ಯೋಜನೆಗೆ ನಿಂಯೋಗ ಒಯ್ಯುವ ಸಿದ್ದರಾಮಯ್ಯಗೆ ಹತ್ತಾರು ದಶಕಗಳ ಮಹದಾಯಿ ಕೂಗಿಗೆ ಕಿವಿಗೊಡುವ ಸೌಜನ್ಯ ತೋರುತ್ತಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ 100 ಕೋಟಿ ಮಂಜೂರು ಮಾಡಿ ಕಳಸಾ- ಬಂಡೂರಿ ನಾಲಾ ಜೋಡಣೆಗೆ ಚಾಲನೆ ನೀಡಿದ್ದರು. ನರಗುಂದ ಹಾಗೂ ನವಲಗುಂದದಲ್ಲಿ ಮಹದಾಯಿ ನದಿ ಜೋಡಣೆ ಕುರಿತು ರೈತರು ಹಲವು ದಿನಗಳಿಂದ ರಸ್ತೆ ತಡೆ ನಡೆಸಿ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಅಲ್ಲಿಗೆ ತೆರಳಿ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಶೆಟ್ಟರ್ ಆಪಾದಿಸಿದರು.
ತಲಾ 10 ಲಕ್ಷ ನೀಡಲು ಒತ್ತಾಯ
ರಾಜ್ಯದ 110 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ, ಪ್ರತಿ ಹೆಕ್ಟೇರ್ ಭೂಮಿಗೆ ರೂ. 50 ಸಾವಿರ ಪರಿಹಾರ ನೀಡಬೇಕು. ರೈತರ ರೂ. 2 ಲಕ್ಷವರರೆಗಿನ ಸಾಲ ಮನ್ನಾ ಮಾಡಬೇಕು. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ 250ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ತಲಾ ರೂ. 10 ಲಕ್ಷ ಪರಿಹಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ತಾಲೂಕಿನ ಅಮ್ಮಿನಬಾವಿ ಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಸಿದ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ಜನರ ಸೇವೆ ಮಾಡಲಲ್ಲ, ಶೋಕಿಗಾಗಿ ಮುಖ್ಯಮಂತ್ರಿಯಾದವರು. ಅವರಿಗೆ ರೈತರ ಗೋಳು ಅರ್ಥವಾಗುತ್ತಿಲ್ಲ. ನಾನು ಕೇವಲ 10 ತಿಂಗಳು ಮುಖ್ಯಮಂತ್ರಿಯಿದ್ದ ಸಂದರ್ಭದಲ್ಲಿ ರಾಜ್ಯದ ರೈತರ ಸಂಕಷ್ಟ ಅರ್ಥ ಮಾಡಿಕೊಂಡು ರೂ.3600 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಆದರೆ, ಸಿದ್ದರಾಮಯ್ಯ ರೈತರ ಕುಟುಂಬಕ್ಕೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಿಸುತ್ತಿಲ್ಲ. ರೈತರ ಆಕ್ರೋಶ ರಸ್ತೆಗಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡು ಒಂದೆರಡು ಕಡೆ ಭೇಟಿ ನೀಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದಲೂ ಅಧಿಕಾರಿ ವರ್ಗ ಸರಿಯಾಗಿ ಕೆಲಸ ಮಾಡುತ್ತಿಲ್ಲ. ರೈತರಿಗೆ ವಿಮೆಯಲ್ಲೂ ಮೋಸವಾಗುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಂದ ಸರಿಯಾದ ಮೌಲ್ಯಮಾಪನ ನಡೆದಿಲ್ಲ. ಪ್ರತಿ ಗ್ರಾಪಂಗೆ ಮಳೆಮಾಪನ ಕೇಂದ್ರ ಅಳವಡಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ವಿಮಾ ಕಂಪನಿಯೊಂದಿಗೆ ಸರ್ಕಾರವೇ ಸೇರಿ ರೈತರ ದುಡ್ಡನ್ನು ಕೊಳ್ಳೆ ಹೊಡೆದಿದೆ ಎಂದು ಆರೋಪಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


