ಜಿಲ್ಲಾ ಸುದ್ದಿ

ಒತ್ತುವರಿ ವಿಚಾರಣೆಗೆ ವಿಶೇಷ ನ್ಯಾಯಾಲಯ

ರಾಜ್ಯಾದ್ಯಂತ ನಡೆದಿರುವ ಸರ್ಕಾರಿ ಭೂ ಒತ್ತುವರಿ ತೆರವು ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುವುದಕ್ಕೆ...

ಒತ್ತುವರಿ ವಿಚಾರಣೆಗೆ ವಿಶೇಷ ನ್ಯಾಯಾಲಯ
ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ಬಿ.ಟಿ ಲಲಿತಾ ನಾಯಕ್ ಮತ್ತು ಕಾನೂನು ಸಚಿವ ಟಿ.ಬಿ ಜಯಚಂದ್ರ
Published On :

ಬೆಂಗಳೂರು: ರಾಜ್ಯಾದ್ಯಂತ ನಡೆದಿರುವ ಸರ್ಕಾರಿ ಭೂ ಒತ್ತುವರಿ ತೆರವು ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುವುದಕ್ಕೆ ರಾಜ್ಯ ಸರ್ಕಾರ ಕೊನೆಗೂ ಅಧಿಕೃತ ಆದೇಶ ಹೊರಡಿಸಿದೆ. ಕರ್ನಾಟಕ ಭೂ ಒತ್ತುವರಿ ನಿಯಂತ್ರಣ ಕಾಯ್ದೆ 2011ರ ಸೆಕ್ಷನ್ 7ರ ಪ್ರಕಾರ ರಾಜ್ಯ ಸರ್ಕಾರಕ್ಕೆ ದತ್ತವಾದ ವಿಶೇಷ ಅಧಿಕಾರದ ಪ್ರಕಾರ ರಾಜ್ಯ ಸರ್ಕಾರ ನ್ಯಾಯಾಲಯ ಸ್ಥಾಪನೆ ಮಾಡುವುದಕ್ಕೆ ಆದೇಶ ಹೊರಡಿಸಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದು, ಮಾಸಾಂತ್ಯದಲ್ಲಿ ಈ ವಿಶೇಷ ನ್ಯಾಯಾಲಯ ತನ್ನ ಕರ್ತವ್ಯ ಆರಂಭಿಸುತ್ತದೆ ಎಂದು ಹೇಳಿದರು. ಕಾನೂನು ಪ್ರಕಾರ ಹೈಕೋರ್ಟ್ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು ಈ ವಿಶೇಷ ನ್ಯಾಯಾಲಯ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ನ್ಯಾಯಾಧೀಶರ ಹುದ್ದೆಯ ಇಬ್ಬರು ಸದಸ್ಯರು, ಉಪ ಆಯುಕ್ತರ ದರ್ಜೆಯ ಇಬ್ಬರು ಕಂದಾಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.

ಭೂ ಒತ್ತುವರಿ ನಿಯಂತ್ರಣ ಕಾಯ್ದೆ 14(ಎ) ಅಧ್ಯಾಯದಲ್ಲಿ ಉಲ್ಲೇಖವಾದ ಎಲ್ಲ ಬಗೆಯ ಭೂ ಕಬಳಿಕೆ, ಕಾನೂನು ಬಾಹಿರ ನಿಯಂತ್ರಣ, ಭೂ ಒಡೆತನದ ನಕಲಿ ದಾಖಲೆ ಸೃಷ್ಟಿ ಸೇರಿದಂತೆ ಎಲ್ಲ ಬಗೆಯ ಭೂ ಅಪರಾಧಗಳ ಬಗ್ಗೆ ಈ ನ್ಯಾಯಾಲಯ ವಿಚಾರಣೆ ನಡೆಸುತ್ತದೆ ಎಂದರು. ಸೆಕ್ಷನ್ 7ರಲ್ಲಿರುವ ನಿಯಮ ಪ್ರಕಾರ ನ್ಯಾಯಾಲಯ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡುವುದಕ್ಕೆ ಕಂದಾಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಅಧ್ಯಕ್ಷರು ಮತ್ತು ಸದಸ್ಯರು ಸಮಿತಿಗೆ ನೇಮಕಗೊಂಡ ದಿನದಿಂದ ಮೂರು ವರ್ಷದವರೆಗೆ ಅಧಿಕಾರದಲ್ಲಿರುತ್ತಾರೆ.

ಕಾಯ್ದೆಯಲ್ಲಿ ಉಲ್ಲೇಖವಾದ ನಿಯಮ ಪ್ರಕಾರವೇ ಈ ಸಮಿತಿಯನ್ನು ಪುನಾರಚಿಸಲಾಗುತ್ತದೆ ಎಂದರು. ಈ ವಿಶೇಷ ನ್ಯಾಯಾಲಯಕ್ಕೆ ರಾಜ್ಯಾದ್ಯಂತ ನಡೆದಿರುವ ಭೂ ಕಬಳಿಕೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುವ ಅಧಿಕಾರವಿದೆ. ಆದಾಗಿಯೂ ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇರುತ್ತದೆ. ವಿಶೇಷ ನ್ಯಾಯಾಲಯ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕುವ ಜವಾಬ್ದಾರಿಯನ್ನು ಕಂದಾಯ ಇಲಾಖೆಗೆ ನೀಡಲಾಗಿದೆ. ಇದರ ಜತೆಗೆ ಅಧ್ಯಕ್ಷರು ಮತ್ತು ಸದಸ್ಯರ ವೇತನ, ಭತ್ಯೆ ಹಾಗೂ ಇನ್ನಿತರ ವಿಚಾರಗಳನ್ನು ಕಂದಾಯ ಇಲಾಖೆಯೇ ನಿಗದಿ ಮಾಡುತ್ತದೆ. ತಹಸೀಲ್ದಾರ್ ಹುದ್ದೆಗಿಂತ ಕಡಿಮೆ ಇಲ್ಲದ ಅಧಿಕಾರಿಗಳನ್ನು ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

1,29, 811 ಎಕರೆ ಒತ್ತುವರಿ
ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸುಮಾರು 1,29,811 ಎಕರೆ ಸರ್ಕಾರ ಜಾಗ ಒತ್ತುವರಿಯಾಗಿದ್ದು, ಇವುಗಳನ್ನು ತೆರವುಗೊಳಿಸಬೇಕೆಂದು 1,41,592 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ.

ಬಾಲಸುಬ್ರಮಣ್ಯನ್ ವರದಿ ಪ್ರಕಾರ ರಾಜ್ಯದಲ್ಲಿ 12 ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಜಾಗ ಒತ್ತುವರಿಯಾಗಿದೆ. ಹಾಗೆಯೇ ಎ.ಟಿ.ರಾಮಸ್ವಾಮಿ ವರದಿ ಪ್ರಕಾರ ರಾಜಧಾನಿ ಬೆಂಗಳೂರು ನಗರ ಒಂದರಲ್ಲೇ ಸುಮಾರು 45,000 ಎಕರೆ ಸರ್ಕಾರ ಆಸ್ತಿ ಒತ್ತುವರಿಯಾಗಿದೆ. ಇವುಗಳಲ್ಲಿ ಬಹುತೇಕ ಜಾಗಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾರಾಟವನ್ನೂ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.