ಮಳಿಗೆ ತೆರವು: ಪರ, ವಿರೋಧ ಹೋರಾಟ
ಕೆ.ಆರ್.ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಬೇಕೇ? ಬೇಡವೇ? ಈ ಬಗ್ಗೆ ಈಗ ಗೊಂದಲ ಮೂಡಿದ್ದು, ಪರ...

ಬೆಂಗಳೂರು: ಕೆ.ಆರ್.ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಬೇಕೇ? ಬೇಡವೇ? ಈ ಬಗ್ಗೆ ಈಗ ಗೊಂದಲ ಮೂಡಿದ್ದು, ಪರ ಹಾಗೂ ವಿರೋಧದ ಹೋರಾಟ ನಡೆಯುತ್ತಿವೆ. ಅನಧಿಕೃತ ಮಳಿಗೆ ತೆರವುಗೊಳಿಸುವಂತೆ ಆಗ್ರಹಿಸಿ ಬುಧವಾರ ವ್ಯಾಪಾರಿಗಳು, ರೈತ ಸಂಘದ ಮುಖಂಡರು ಬಿಬಿಎಂಪಿಗೆ ಮೆರವಣಿಗೆ
ಸಾಗಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರ ಮನವೊಲಿಸಲು ಮುಂದಾದ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀ ನಾರಾಯಣ ಅವರು, ಮಳಿಗೆಗಳನ್ನು ತೆರವುಗೊಳಿಸುವ ಬಗ್ಗೆ ಗುರುವಾರದ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ನಂತರ ಮೊದಲು 4 ಮಳಿಗೆಗಳನ್ನು ನೆಲಸಮ ಮಾಡಲಾಗುವುದು. ಉಳಿದ 12 ಮಳಿಗೆಗಳನ್ನು ತೆರವುಗೊಳಿಸುವಂತೆ ಮಳಿಗೆದಾರರಿಗೆ ನೋಟಿಸ್ ನೀಡಲಾಗುವುದು. ಇಲ್ಲಿ ಅನಧಿಕೃತ ಸ್ಥಳಗಳಲ್ಲಿ ಮಳಿಗೆ ಕಟ್ಟಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಳೆದ ಸೋಮ ವಾರ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ವ್ಯಾಪಾರಿಗಳ ಸಂಘದವರ ಜೊತೆ ಸಭೆ ನಡೆಸಿ ತೆರವಿಗೆ ಆದೇಶಿಸಿದ್ದೆ. ಇಲ್ಲಿರುವ ಬಹುತೇಕ ಮಳಿಗೆಗಳು 2013 ಕ್ಕಿಂತ ಹಳೆಯ ಮಳಿಗೆಗಳಾಗಿದ್ದು, ಇಂತಹವುಗಳನ್ನು ತೆರವುಗೊಳಿಸಲು ಶೋಕಾಸ್ ನೋಟಿಸ್ ನೀಡಬೇಕು. ನಂತರ ನಿರ್ಮಾಣವಾದ 4 ಮಳಿಗೆಗಳನ್ನು ನಿರ್ಮಿಸಿ ವಿತರಣೆ ಮಾಡಲು ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ನಿರ್ಧರಿಸಿದೆ. ಈ ಸಂಬಂಧ ಬಿಬಿಎಂಪಿ ಕೌನ್ಸಿಲ್ ನಲ್ಲಿ ನಿರ್ಣಯ ವಾಪಸ್ಸು ಪಡೆಯುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಬಿಬಿಎಂಪಿಗೆ ಮುತ್ತಿಗೆ
ಮಳಿಗೆ ಅವ್ಯವಹಾರ ಖಂಡಿಸಿ, ಅಕ್ರಮ ಮಳಿಗೆ ತೆರವಿಗೆ ಆಗ್ರಹಿಸಿ ಎಸ್.ಕೆ.ಆರ್. ಮಾರುಕಟ್ಟೆ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ರೈತ
ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಬುಧವಾರ ಕೆ.ಆರ್. ಮಾರುಕಟ್ಟೆಯಿಂದ ಬಿಬಿಎಂಪಿ ಕೇಂದ್ರ
ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ನಂತರ ಕೇಂದ್ರ ಕಚೇರಿ ಎದುರು ಧರಣಿ ನಡೆಸಿ, ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು
ಯತ್ನಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕೆ. ಆರ್. ಮಾರುಕಟ್ಟೆಯಲ್ಲಿ ಯಾವುದೇ ನೂತನ
ನಿರ್ಮಾ ಣ ಮಾಡದಂತೆ 2002 ರಲ್ಲೇ ಹೈಕೋರ್ಟ್ ಆದೇಶ ಕೊಟ್ಟಿದೆ. ಹೀಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಾಣ ಮಾಡಿ ವಿತರಣೆ ಮಾಡಿದ್ದಾರೆ.
ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಆದೇಶ ಹಿಂಪಡೆದಿದ್ದಾರೆ. ತೆರವು ಕಾರ್ಯಾಚರಣೆ ಹಿಂಪಡೆದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕೆ.ಆರ್. ಮಾರುಕಟ್ಟೆ ವ್ಯಾಪಾರಿಗಳು ಮಂಗಳವಾರ ಮಾರುಕಟ್ಟೆ ಬಂದ್ ಮಾಡಿದ್ದಲ್ಲದೇ, ಬುಧವಾರವೂ ಪ್ರತಿಭಟನೆ ಮುಂದುವರೆಸಿದ್ದರು. ಈ ವೇಳೆ ಎಸ್.ಕೆ.ಆರ್. ಮಾರುಕಟ್ಟೆ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಿವಾಕರ್ ಮತ್ತಿತರರು ಹಾಜರಿದ್ದರು. ಈ ವೇಳೆ ಬಿಗಿ ಪೋಲೀಸ್ ಭದ್ರತೆ ನಿಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


