ಸಂಸದ ಶ್ರೀರಾಮುಲುಗೂ 'ತನಿಖೆ' ಭೀತಿ
ಸಿಬಿಐ ತನಿಖೆಯಿಂದ ರೆಡ್ಡಿ ಸಹೋದರರು ಸಮಸ್ಯೆ ಎದುರಿಸುತ್ತಿರುವ ಬೆನ್ನಲ್ಲೇ ಅವರ ಆಪ್ತ ಹಾಗೂ...

ಬಳ್ಳಾರಿ: ಸಿಬಿಐ ತನಿಖೆಯಿಂದ ರೆಡ್ಡಿ ಸಹೋದರರು ಸಮಸ್ಯೆ ಎದುರಿಸುತ್ತಿರುವ ಬೆನ್ನಲ್ಲೇ ಅವರ ಆಪ್ತ ಹಾಗೂ ಸಂಸದ ಶ್ರೀರಾಮುಲು ಅವರಿಗೂ ತನಿಖೆ ಭೂತ ಕಾಡುವ ಲಕ್ಷಣ ಗೋಚರಿಸುತ್ತಿದೆ.
ಬಳ್ಳಾರಿಯ ಸರ್ವೆ ನಂ. 597 ಬಿ2ಗೆ ಸಂಬಂಧಿಸಿದಂತೆ 10 ಎಕರೆ ಜಮೀನನ್ನು ಸರ್ಕಾರ ಎಚ್ಎಲ್ಸಿಗೆ ಸ್ವಾಧೀನ ಪಡಿಸಿಕೊಂಡಿತ್ತು. ಅದನ್ನು ಶ್ರೀರಾಮುಲು ಅತಿಕ್ರಮಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಪತ್ರ ಆಧರಿಸಿ, ಗುಲ್ಬರ್ಗಾ ಪ್ರಾದೇಶಿಕ ಆಯುಕ್ತರು ತನಿಖಾ ತಂಡ ರಚಿಸಿದ್ದಾರೆ. ಈ ತಂಡ ಶೀಘ್ರ ಬಳ್ಳಾರಿಗೆ ಆಗಮಿಸಿ, ಆರೋಪಗಳ ಕುರಿತು ಪರಿಶೀಲನೆ ನಡೆಸಲಿದೆ. ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಸರ್ವೆ ನಂ. 597ನ 27.25 ಎಕೆರೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಿವಾದ ನಡೆಯುತ್ತಿದೆ.
ಈ ಸರ್ವೆ ನಂಬರ್ಗೆ ಸಂಬಂಧಿಸಿದ ಜಮೀನನ್ನು ಶ್ರೀರಾಮುಲು ಖರೀದಿ ಮಾಡಿಲ್ಲ. ದಾಖಲೆಗಳನ್ನು ಸೃಷ್ಟಿಸಿ, ಬೇರೆಯವರ ಜಮೀನನ್ನು ತೆಗೆದು ಕೊಂಡಿದ್ದಾರೆ ಎಂದು ಆರೋಪಿಸಿ ಖಾಸಗಿ ವ್ಯಕ್ತಿಗಳು ಶ್ರೀರಾಮುಲು ವಿರುದ್ಧ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು.
27.25 ಎಕರೆ ಪ್ರದೇಶದಲ್ಲಿ 10 ಎಕರೆ ಜಮೀನನ್ನು ಈ ಹಿಂದೆ ಸರ್ಕಾರವು ಲಕ್ಷ್ಮಮ್ಮ ಅವರಿಂದ ಎಚ್ಎಲ್ಸಿ ಕಾಲುವೆಗೆ ಭೂಸ್ವಾಧೀನಪಡಿಸಿ ಕೊಂಡಿದ್ದು, ಇದನ್ನು ಶ್ರೀರಾಮುಲು ಸ್ಧಾಧೀನಪಡಿಸಿಕೊಂಡಿದ್ದಾರೆ, ಉಳಿದ 17.25 ಎಕರೆ ಖಾಸಗಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಸ್ವಾಧೀನ ತೆಗೆದುಕೊಂಡಿದ್ದಾರೆ ಎನ್ನುವ ಆರೋಪವಿದೆ.
ಡಿಸಿಯಿಂದ ಆಸ್ಸಿಗೆ ಪತ್ರ: ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸಿ, ಜಿಲ್ಲಾಧಿಕಾರಿಗೆ ವರದಿ ನೀಡಿದ್ದು, ಅದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರಿಗೆ ಪತ್ರ ಮುಖೇನ ತಿಳಿಸಿದ್ದಾರೆ.
ಪತ್ರವನ್ನು ಪರಿಶೀಲಿಸಿದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಈ ಕುರಿತಾಗಿ ಪರಿಶೀಲನೆ ನೆಡಸಲು ಗುಲ್ಬರ್ಗದಿಂದ ತಂಡ ರಚಿಸಿ, ಶೀಘ್ರದಲ್ಲಿ ಬಳ್ಳಾರಿಗೆ ಕಳುಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಜಮೀನನ್ನು ಶ್ರೀರಾಮುಲು ಅತಿಕ್ರಮಿಸಿದ್ದಾರೋ ಎಂಬುದನ್ನು ಪರಿಶೀಲಿಸಿ, ತನಿಖಾ ತಂಡ ವರದಿ ನೀಡಲಿದೆ. ಶ್ರೀರಮಾಲು ವಿರುದ್ಧದ ಆರೋಪ ಸಾಬೀತಾದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರ ಮುಂದಾಗಬಹುದು.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


