ಮೊಬೈಲ್ ಫೋನ್ನಿಂದಾಗಿ ಸಿಕ್ಕಿಬಿದ್ದ ಹಂತಕ ದಂಪತಿ

ಬೆಂಗಳೂರು: ಕಲಾಸಿಪಾಳ್ಯ ಮುಖ್ಯರಸ್ತೆ ಆರ್.ಕೆ.ಲಾಡ್ಜ್ ಸಮೀಪದ ಫುಟ್ಪಾತ್ ಮೇಲೆ ರುಂಡ, ಕೈ ಕಾಲು ಇಲ್ಲದ ಶವ ಪತ್ತೆ ಪ್ರಕರಣ ಸಂಬಂಧ ದಂಪತಿಯನ್ನು ಕಲಾಸಿಪಾಳ್ಯ ಪೋಲೀಸರು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿ ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಡೆಂಕಣಕೋಟೆ ನಿವಾಸಿ ಸಮೀವುಲ್ಲಾ ಚಾನು (35) ಎಂದು ಗುರುತಿಸಲಾಗಿದೆ. ಈತನ ಕೊಲೆಗೈದ ಮಂಗಮ್ಮಮನಪಾಳ್ಯ ಮದೀನ ನಗರ ನಿವಾಸಿ ರೇಷ್ಮಾ(30), ಪತಿ ಮುಖ್ತಿಯಾರ್ (45) ಬಂಧಿತರು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಗ್ಗ, ಚಾಕು, ಮಚ್ಚು ಹಾಗೂ ಎಕ್ಲಲ್ ಬ್ಲೇಡ್ನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಯಾದ ಸಮೀವುಲ್ಲಾ ಹಾಗೂ ರೇಷ್ಮಾ ನಡುವಿನ ಅನೈತಿಕ ಸಂಬಂಧ ಹಾಗೂ ಹಣಕಾಸಿನ ವೈಮನಸ್ಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಮುಖ್ತಿಯಾರ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ, ಪತ್ನಿ ರೇಷ್ಮಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು. ದಂಪತಿ ಮದೀನ ನಗರದ ಅಬ್ದುಲ್ಲಾ ಎಂಬುವರ ಮನೆಯಲ್ಲಿ ಬಾಡೆಗೆಗಿದ್ದರು.
ಡೆಂಕಣಕೋಟೆ ಮೂಲದ ರೇಷ್ಮಾ ಹಾಗೂ ಕೊಲೆಯಾದ ಸಮೀವುಲ್ಲಾ ಸಂಬಂಧಿಕರು. ಲಾರಿ ಚಾಲಕನಾಗಿದ್ದ ಸಮೀವುಲ್ಲಾ ಆಗಾಗ ರೇಷ್ಮಾಳನ್ನು ಭೇಟಿ ಮಾಡಿಕೊಂಡು ಹೋಗುತ್ತಿದ್ದ. ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆಯುತ್ತಿತ್ತು.
ಆದರೆ, ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಸಮೀವುಲ್ಲಾ ಸಾವಿರಾರು ರುಪಾಯಿಯನ್ನು ರೇಷ್ಮಾಳಿಗೆ ನೀಡಿದ್ದ, ಆದರೆ, ರೇಷ್ಮಾ ಮರಳಿಸದ ಕಾರಣ ಜಗಳವಾಗಿತ್ತು. ಅ.2 ರಂದು ಮಧ್ಯಾಹ್ನ ರೇಷ್ಮಾಳಿಗೆ ಕರೆ ಮಾಡಿದ ಸಮೀವುಲ್ಲಾ ಹಣ ನೀಡುವಂತೆ ಹೇಳಿದಾಗ, ರಾತ್ರಿ ಬರುವಂತೆ ರೇಷ್ಮಾ ಹೇಳಿದ್ದಳು. ಹೀಗಾಗಿ ಸಂಜೆ ರೇಷ್ಮಾ ಮನೆಗೆ ಸಮೀವುಲ್ಲಾ ಹೋಗಿದ್ದ. ಈ ವೇಳೆ ಪತಿ ಮುಖ್ತಿಯಾರ್ ಕೂಡಾ ಮನೆಯಲ್ಲಿದ್ದು ಮಾತುಕತೆ ನಡೆಸುತ್ತಿದ್ದ ವೇಳೆ ಮೂವರ ನಡುವೆ ಜಗಳವಾಗಿದೆ. ಆಗ, ದಂಪತಿ, ಸಮೀವುಲ್ಲಾನನ್ನು ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ.
ಬಾತ್ರೂಮ್ನಲ್ಲಿ ಕತ್ತರಿಸಿದರು: ಮನೆ, 3ನೇ ಮಹಜಿಯಲ್ಲಿದ್ದ ಕಾರಣ ಶವ ಸಾಗಿಸುವಾಗ ಅಕ್ಕ ಪಕ್ಕ ಮನೆಯವರಿಗೆ ಅನುಮಾನ ಬರಬಹುದು ಎಂದು ಭಾವಿಸಿ ರಾತ್ರಿವರೆಗೂ ಕಾದಿದ್ದಾರೆ. ನಂತರ ಶವವನ್ನು ಮನೆಯ ಬಾತ್ ರೂಮಿಗೆ ತೆಗೆದುಕೊಂಡು ಹೋಗಿ ಚಾಕು, ಮಚ್ಚು, ಹಾಗೂ ಎಕ್ಸಲ್ ಬ್ಲೇಡ್ನಿಂದ ಕತ್ತು, ಕೈ, ಕಾಲುಗಳನ್ನು ಕತ್ತರಿಸಿ ಪ್ರತ್ಯೇಕಿಸಿದ್ದಾರೆ.
ಅ.3 ರಂದು ಬೆಳಿಗ್ಗೆ ತಲೆ ಹಾಗೂ ಕೈಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಹೋಗಿ ಜೆ.ಜೆ.ನಗರ ಸಮೀಪದ ರಾಜಕಾಲುವೆಯಲ್ಲಿ ಬಿಸಾಡಿದ್ದಾರೆ. ಮತ್ತೊಮ್ಮೆ ಮನೆಗೆ ಬಂದು ಮುಂಡ ಹಾಗೂ ಕಾಲುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಆಟೋದಲ್ಲಿ ಕಬ್ಬನ್ಪೇಟೆಗೆ ಬಂದಿದ್ದಾರೆ. ಪುಟ್ಪಾತ್ ಮೇಲೆ ಚಿಲ ಇಟ್ಟು ಪ್ರಯಾಣಿಕರಂತೆ ಕೆಲಹೊತ್ತು ನಟಿಸಿ ಅಲ್ಲಿಂದ ಪರಾರಿಯಾಗಿದ್ದರು.
ಕೆಲ ಹೊತ್ತಿನ ಬಳಿಕ ಮಾಂಸದ ವಾಸನೆಗೆ ನಾಯಿಗಳು ಚೀಲವನ್ನು ಎಳೆದಾಡಿವೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಚೀಲ ತೆರೆದು ಮುಂಡ ಇರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಡ ಹಾಗೂ ಕಾಲುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ ಅದು ಮುಸ್ಲಿಂ ವ್ಯಕ್ತಿಯ ಶವ ಎನ್ನುವುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು, ಶವದ ಮೇಲಿನ ಗುರುತುಗಳ ಬಗ್ಗೆ ಉರ್ದು ಪತ್ರಿಕೆಗೆ ಮಾಹಿತಿ ನೀಡಿದ್ದರು.
ಉರ್ದು ಪತ್ರಿಕೆ ಗಮನಿಸಿದ ಸಮೀವುಲ್ಲಾ ಸ್ನೇಹಿತರು ಸಹೋದರ ಸಾದಿಕ್ ಹಾಗೂ ಆತನ ಪತ್ನಿ ತಾಸೀನಾಗೆ ತಿಳಿಸಿದ್ದಾರೆ. ಇಬ್ಬರು ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಶವದ ಮೇಲಿನ ಚಹರೆಗಳ ಆಧಾರದ ಮೇಲೆ ಸಮೀವುಲ್ಲಾ ಎಂದು ಗುರುತಿಸಿದ್ದಾರೆ.
ಈ ವೇಳೆ ಸಮೀವುಲ್ಲಾ ಮೊಬೈಲ್ ಫೋನ್ ಸಂಖ್ಯೆ ಪಡೆದು ಒಳ ಬಂದ ಹಾಗೂ ಹೊರ ಹೋದ ಕರೆಗಳನ್ನು ಪರಿಶೀಲಿಸಿದಾಗ ಆರೋಪಿಗಳಾದ ರೇಷ್ಮಾ ಹಾಗೂ ಮುಖ್ತಿಯಾರ್ ನಂಬರ್ಗಳು ಸಿಕ್ಕಿದೆ. ಅಲ್ಲದೇ ಆರೋಪಿಗಳು ಕಲಾಸಿಪಾಳ್ಯಕ್ಕೆ ಬಂದಿರುವುದು ಟವರ್ ಲೋಕೇಶನ್ನಿಂದ ಪತ್ತೆಯಾಗದೆ. ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಿಸಿದಾಗ ಘಟನೆಯನ್ನು ವಿವರಿಸಿದ್ದಾರೆ.
ಪ್ರಕರಣ ಪತ್ತೆ ಹಚ್ಚಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಶ್ಲಾಘಿಸಿದ್ದಾರೆ.
ಕೈ, ಕಾಲು, ತಲೆ ಕತ್ತರಿಸಲು 3 ತಾಸು!
ದಂಪತಿ ಚಾಕು, ಮಚ್ಚು ಹಾಗೂ ಎಕ್ಸಲ್ ಬ್ಲೇಡ್ ಬಳಸಿ ನಸುಕಿನ 4 ರಿಂದ 7ರ ವರೆಗೆ ಸಮೀವುಲ್ಲಾನ ತಲೆ, 2 ಕಾಲು, 2 ಕೈಗಳನ್ನು ಕತ್ತಿರಿಸಿದ್ದಾರೆ. ತಲೆ ಹಾಗೂ ಕೈಗಳನ್ನು ಗೌರಿಪಾಳ್ಯ ಸಮೀಪದ ರಾಜ ಕಾಲುವೆಯಲ್ಲಿ ಬಿಸಾಡಿದ್ದಾರೆ. ಆದರೆ, ಎರಡು ದಿನಗಳಿಂದ ರಾತ್ರಿ ವೇಳೆ ಸುರಿದ ಮಳೆಗೆ ತಲೆ ಹಾಗೂ ಕಾಲುಗಳು ಎಲ್ಲಿವರೆಗೂ ಕೊಚ್ಚಿಕೊಂಡು ಹೋಗಿದೆ ಎನ್ನುವುದು ತಿಳಿದುಬಂದಿಲ್ಲ, ಅವುಗಳನ್ನು ಹುಡುಕುವ ಪ್ರಯತ್ನ ನಡೆದಿದೆ ಎಂದು ಪೋಲೀಸರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


