ಜಿಲ್ಲಾ ಸುದ್ದಿ

ಲೈಂಗಿಕ ದೌರ್ಜನ್ಯ ಹೆಸರಿನಲ್ಲಿ ಬ್ಲ್ಯಾಕ್ ಮೇಲ್

ಶಾಲೆಯಲ್ಲಿ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪೊಲೀಸರಿಗೆ ದೂರು ನೀಡದೆ ಇರಲು ರು.2 ಲಕ್ಷ..

ಲೈಂಗಿಕ ದೌರ್ಜನ್ಯ ಹೆಸರಿನಲ್ಲಿ ಬ್ಲ್ಯಾಕ್ ಮೇಲ್
ಆರೋಪಿ ರಾಜೇಶ್ ಖಾರ್ವಿ
Published On :

ಬೆಂಗಳೂರು: ಶಾಲೆಯಲ್ಲಿ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪೊಲೀಸರಿಗೆ ದೂರು ನೀಡದೆ ಇರಲು ರು.2 ಲಕ್ಷ ನೀಡಬೇಕೆಂದು ಶಾಲೆ ಆಡಳಿತ ಮಂಡಳಿಗೆ ಬೆದರಿಕೆ ಹಾಕಿದ್ದ ಜಾಹಿರಾತು ಸಂಸ್ಥೆಯೊಂದರ ಉದ್ಯೋಗಿಯನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ.

ಕೊಡಿಗೆಹಳ್ಳಿ ರಾಮಮಂದಿರ ಮುಖ್ಯರಸ್ತೆ ನಿವಾಸಿ ರಾಜೇಶ್ ಖಾರ್ವಿ (30) ಬಂಧಿತ ಆರೋಪಿ, ಮಾಸ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್, ಕೆಲಸ ಬಿಟ್ಟು ಇತ್ತೀಚೆಗೆ ಜಾಹೀರಾತು ಏಜೆನ್ಸಿಗೆ ಸೇರಿದ್ದ. ಈತನ ಮಗ ನಾಗಶೆಟ್ಟಿಹಳ್ಳಿ ಬಸವೇಶ್ವರ ಎಕ್ಸ್‌ಟೆನ್ಷನ್‌ನಲ್ಲಿರುವ ರಾಧಾಕೃಷ್ಣ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದಾನೆ.

ಇತ್ತೀಚೆಗೆ ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳನ್ನೇ ಬಂಡವಾಳವಾಗಿ ಮಾಡಿಕೊಂಡು ಹಣ ಮಾಡುವ ಉದ್ದೇಶ ಹೊಂದಿದ್ದ ರಾಜೇಶ್, ಪೋಕ್ಸೋ ಕಾಯಿದೆ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವಾರದ ಹಿಂದೆ ಶಾಲೆಯ ಮುಖ್ಯಶಿಕ್ಷಕಿ ಸುನಿತಾ ಅವರನ್ನು ಭೇಟಿ ಮಾಡಿದ ರಾಜೇಶ್, ತನ್ನ ಮಗನ ಮೇಲೆ ಶಾಲಾ ಸಿಬ್ಬಂದಿ ಶಾಲೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದ. ಇದರಿಂದ ಗಾಬರಿಗೊಂಡ ಶಿಕ್ಷಕಿ ಆಂತರಿಕ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಿದಾಗ ಅಂತಹ ಘಟನೆ ನಡೆದಿಲ್ಲದಿರುವುದು ತಿಳಿದು ಬಂದಿದೆ.

ಆದರೆ, ಬೆದರಿಕೆ ನಿಲ್ಲಿಸದ ರಾಜೇಶ್, ಪದೇ ಪದೇ ಶಾಲೆಯ ಉನ್ನತ ಸಿಬ್ಬಂದಿ ಹಾಗೂ ಮುಖ್ಯಶಿಕ್ಷಕಿಯನ್ನು ಭೇಟಿ ಮಾಡಿ, ವಿಷಯ ಮಾಧ್ಯಮಗಳಿಗೆ ತಿಳಿಸುತ್ತೇನೆ. ಇದರಿಂದ ನಿಮ್ಮ ಶಾಲೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಬೆದರಿಸುತ್ತಿದ್ದ, ಇದರ ಜೊತೆಗೆ ಮಕ್ಕಳ ಸುರಕ್ಷತೆಗೆ ಸರ್ಕಾರ ಸೂಚಸಿರುವ ಮಾರ್ಗಸೂಚಿಗಳನ್ನು ಶಾಲೆ ಉಲ್ಲಂಘಿಸಿದ ಎಂದೂ ಆರೋಪಿಸುತ್ತಿದ್ದ.

ಹೀಗಾಗಿ ಬಾಲಕ ಹಾಗೂ ತಂದೆಯಿಂದ ಮಾಹಿತಿ ಪಡೆದ ಶಾಲೆ ಆಡಳಿತ ಮಂಡಳಿ, ಮತ್ತೊಮ್ಮೆ ಆಂತರಿಕ ತನಿಖೆ ನಡೆಸಿತು. ಆಗಲೂ ಯಾವುದೇ ಸಾಕ್ಷ್ಯಗಳು ಸಿಗಲಿಲ್ಲ. ಅದಾದ ಬಳಿಕ ರಾಜೇಶ್ ರು.2 ಲಕ್ಷ ನೀಡಬೇಕು ಎಂದು ಒತ್ತಾಯಿಸತೊಡಗಿದ. ಈ ನಡುವೆ ಮುಖ್ಯ ಶಿಕ್ಷಕಿ ಪೊಲೀಸರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದರು. ಅಲ್ಲದೆ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲು ರಾಜೇಶ್ ಮನವೊಲಿಸಿ ರು.1.5 ಲಕ್ಷಕ್ಕೆ ಒಪ್ಪಿಸಿದ್ದರು. ಅದರಂತೆ ಸೋಮವಾರ ಮುಖ್ಯ ಶಿಕ್ಷಕಿಯಿಂದ ರಾಜೇಶ್ 1 ಲಕ್ಷ ಸ್ವೀಕರಿಸುತ್ತಿದ್ದಾಗ ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದುಕೊಂಡಿದ್ದಾರೆ.

ಆರೋಪಿ ಹಿನ್ನಲೆಯನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ರಾಜೇಶ್ ತನ್ನ ಮಗನ ಮೇಲೆ ನಡೆದಿದೆ ಎನ್ನಲಾದ ಆರೋಪದ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.