ಬರ್ತಾರೆ ಮತ್ತಷ್ಟು ಮೇಷ್ಟ್ರು
ಸರ್ಕಾರಿ ಪದವಿ ಕಾಲೇಜುಗಳಿಗೆ 2154 ಉಪನ್ಯಾಸಕರ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ...

ಕನ್ನಡಪ್ರಭವಾರ್ತೆ: ಸರ್ಕಾರಿ ಪದವಿ ಕಾಲೇಜುಗಳಿಗೆ 2154 ಉಪನ್ಯಾಸಕರ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಮೊದಲ ಹಂತದಲ್ಲಿ 1298 ಉಪನ್ಯಾಸಕರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿಸಿದೆ. ಈ ಹುದ್ದೆಗಳಿಗೆ ಯಾವುದೇ ಸಂದರ್ಶನವಿಲ್ಲದೇ ನೇರವಾಗಿ ಪ್ರವೇಶ ಪರೀಕ್ಷೆ ಮೂಲಕ ನೇಮಕ ನಡೆಯಲಿದೆ.
ಇದೇ ಮೊದಲ ಬಾರಿಗೆ ಪರೀಕ್ಷಾ ಪ್ರಾಧಿಕಾರದಿಂದ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ 3 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಹಂತದಲ್ಲಿ 856 ಉಪನ್ಯಾಸಕರನ್ನು ನೇಮಿಸಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಈ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನೂ ಪರೀಕ್ಷಾ ಪ್ರಾಧಿಕಾರದಿಂದ ಮಾಡಲು ಇಲಾಖೆ ಚಿಂತಿಸಿದೆ.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದು ಅನುಮತಿ ಕೇಳಲಾಗಿದೆ. ಅನುಮತಿ ಸಿಕ್ಕ ಬಳಿಕ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲ 2154 ಉಪನ್ಯಾಸಕರು ಸೇವೆಗೆ ಲಭ್ಯರಾಗುವ ನಿರೀಕ್ಷೆಯಿದೆ ಎಂದು ದೇಶಪಾಂಡೆ ಹೇಳಿದರು.
ಬೋಧನಾ ಅವಧಿ ಹೆಚ್ಚಳವಿಲ್ಲ: ಉಪನ್ಯಾಸಕರ ಕೆಲಸದ ಅವಧಿ ಹೆಚ್ಚಿಸಿ ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶವನ್ನು ತಡೆಹಿಡಿಯಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಉಪನ್ಯಾಸಕರ ಸೇವಾ ಅವಧಿಯನ್ನು 16ರಿಂದ 22 ಗಂಟೆಗೆ ಸರ್ಕಾರ ಏರಿಸಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ತಿದ್ದುಪಡಿ ಕೇವಲ ಸಂಶೋಧನಾ ರಹಿತ ಉಪನ್ಯಾಸಕರಿಗೆ ಅನ್ವಯವಾಗುತ್ತದೆ.
ಆದಾಗ್ಯೂ ಆದೇಶಕ್ಕೆ ತಡೆ ನೀಡಲಾಗಿದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯರು, ಉಪನ್ಯಾಸಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸ್ಮಾರ್ಟ್ ತರಗತಿ
ರಾಜ್ಯದ 50 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸ್ಮಾರ್ಟ್ ತರಗತಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವಿಷಯದಲ್ಲಿ 5 ಉತ್ತಮ ಪ್ರಾಧ್ಯಾಪಕರನ್ನು ಗುರುತಿಸಿ ಅವರ ಪಾಠವನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಎಜುಸ್ಯಾಟ್ ಹಾಗೂ ಪ್ರೊಜೆಕ್ಟರ್‌ಗಳ ಮೂಲಕ 50 ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್ ಕ್ಲಾಸ್ ನಡೆಸಲಾಗುವುದು.
ವರ್ಚ್ಯುವಲ್ ತರಗತಿ
ವರ್ಚ್ಯುವಲ್ ತರಗತಿಗಳನ್ನು ಆರಂಭಿಸಲು ಚಿಂತಿಸಲಾಗಿದೆ. ಎಲ್ಲ ಕಾಲೇಜುಗಳಿಗೆ ಇ-ಕಂಟೆಂಟ್ ಒದಗಿಸಿ ವೈ-ಫೈ ಮೂಲಕ ವಿದ್ಯಾರ್ಥಿಗಳಿಗೆ ಉಚಿತವಾಗಿ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು. ಕಾಲೇಜುಗಳ ವೈಬ್‌ಸೈಟ್‌ನಲ್ಲಿ ಕಲಿಕಾ ಮಾಹಿತಿಗಳು ಲಭ್ಯವಿರುತ್ತವೆ. ವಿದ್ಯಾರ್ಥಿಗಳು ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಮೂಲಕ ಅಂತರ್ಜಾಲ ಸಂಪರ್ಕ ಸಾಧಿಸಬಹುದು. ಕಡಿಮೆ ದರದಲ್ಲಿ ಟ್ಯಾಬ್ಲೆಟ್ ನೀಡುವ ಬಗೆಗೂ ಪರಿಶೀಲಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


