ಸ್ವಚ್ಛ ಭಾರತ ರಾಜ್ಯ ಬಿಜೆಪಿಗೇ ತುಚ್ಛ
ಪಕ್ಷದ ಮುಖಂಡರಿಂದಲೇ ನಿರ್ಲಕ್ಷ್ಯ, ಕಸದಲ್ಲಿ ಕಳೆದು ಹೋದ ಮೋದಿ ಮಾತು

-ರಾಜೀವ್ ಹೆಗಡೆ
ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಸ್ವಚ್ಛ ಭಾರತ ಅಭಿಯಾನ ತುಚ್ಛವಾಗಿದೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದರೆ, ಕರ್ನಾಟಕದ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಮುಖಂಡರು ತಮ್ಮ ಕ್ಷೇತ್ರಗಳನ್ನು ಮರೆತೇ ಬಿಟ್ಟಿದ್ದಾರೆ. ವಾರದಲ್ಲಿ ಎರಡು ಗಂಟೆಯನ್ನು ನನಗೆ ದಾನ ಮಾಡಿ ಎಂದು ಪ್ರಧಾನಿ ಮನವಿ ಮಾಡಿದ್ದರೆ, ಒಂದು ವಾರ ಎಲ್ಲ ಜನಪ್ರತಿನಿಧಿಗಳು ಮಾಧ್ಯಮಗಳಿಗಾಗಿ ಪೋಸ್ ನೀಡಿದರು. ನಂತರ ಕನಿಷ್ಠ ಪ್ರಚಾರಕ್ಕಾದರೂ ಸ್ವಚ್ಛಗೊಳಿಸುವುದನ್ನು ಬಿಟ್ಟುಬಿಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಕೂಡ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪರಿಣಾಮ ಸ್ಥಳೀಯ ಮುಖಂಡರು, ಕಾರ್ಯಕರ್ತರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಜನಪ್ರತಿನಿಧಿಗಳು ಮಾತ್ರ ಸ್ವಚ್ಛ ಭಾರತ ಅಭಿಯಾನದಲ್ಲಿ ನಿರತರಾಗಿದ್ದಾರೆ.
ಪಕ್ಷ ಕಟ್ಟಲು ಹಾಗೂ ಜನರನ್ನು ಸಂಪರ್ಕಿಸಲು 'ಸ್ವಚ್ಛ ಭಾರತ ಅಭಿಯಾನ'ಕ್ಕಿಂತ ಉತ್ತಮ ಮತ್ತೊಂದು ವೇದಿಕೆ ಸಿಗಲು ಸಾಧ್ಯವೇ ಇಲ್ಲ. ಆದರೆ ಪಕ್ಷದ ಸಾರ್ವಭೌಮ ನಾಯಕ ಎಂದು ಹೇಳುವ ಮೋದಿ ಮಾತಿಗೂ ರಾಜ್ಯ ಮುಖಂಡರು ಬೆಲೆ ನೀಡದಿರುವುದು ವಿಪರ್ಯಾಸ. ಪ್ರಧಾನಿ ಮೋದಿ ಮಾತ್ರ ದೇಶ-ವಿದೇಶಗಳ ಕಾರ್ಯಕ್ರಮಗಳಲ್ಲಿ ಕೂಡ ಗಾಂಧೀಜೀ 150ನೇ ದಿನಾಚರಣೆಗೆ ಸ್ವಚ್ಛ ಭಾರತದ ಉಡುಗೊರೆ ನೀಡುತ್ತೇವೆ ಎಂದು ಭಾಷೆಯಿತ್ತಿದ್ದಾರೆ.
ಇತ್ತ ಪ್ರತಿಪಕ್ಷಗಳಿಗೆ ಬಾಯಿಗೆ ಆಹಾರವಾಗಲು ಬಿಜೆಪಿ ನಾಯಕರೇ ಆಸ್ಪದ ಮಾಡಿಕೊಡುತ್ತಿದ್ದಾರೆ. ಪ್ರಧಾನಿ ಮಹತ್ವಾಕಾಂಕ್ಷಿ ಯೋಜನೆಯನ್ನು ಹಳ್ಳ ಹಿಡಿಸಲು ಬಿಜೆಪಿ ಮುಖಂಡರೇ ಶತಪ್ರಯತ್ನ ನಡೆಸುತ್ತಿರುವಂತಿದೆ. ಬೆಂಗಳೂರು ನಗರ ಸೇರಿದಂತೆ ಬಹುತೇಕ ಜಿಲ್ಲೆಗಳ ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪ್ರಧಾನಿ ಕರೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಯಾವುದೇ ನಿರ್ಧಾರವಿಲ್ಲ: ಸ್ವಚ್ಛ ಭಾರತ ಅಭಿಯಾನವನ್ನು ಪ್ರಧಾನಿ ಘೋಷಣೆ ಮಾಡಿ ಒಂದೂವರೆ ತಿಂಗಳಾಯಿತು. ಈ ಅಭಿಯಾನವನ್ನು ರಾಜ್ಯ.ದಲ್ಲಿ ಹೇಗೆ ಪರಿಣಾಮಕಾರಿಯಾಗಿ ಸಂಘಟಿಸಬೇಕೆಂಬ ಬಗ್ಗೆ ಯೋಚಿಸಿಯೇ ಇಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಆಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಮೇಲುಸ್ತುವಾರಿ ಮಾಡುತ್ತಿಲ್ಲ. ರಾಜ್ಯ ಬಿಜೆಪಿ ಕಚೇರಿಯಿಂದಲೂ ಜನಪ್ರತಿನಿಧಿಗಳಿಗೆ ಸ್ಪಷ್ಟ ಸೂಚನೆಯೂ ಹೋಗಿಲ್ಲ. ಬೆಂಗಳೂರು ನಗರವೊಂದನ್ನೇ ತೆಗೆದುಕೊಂಡರೆ ಬಿಜೆಪಿಯಲ್ಲಿ 3 ಸಂಸದರು, 12 ಶಾಸಕರು ಹಾಗೂ 112 ಕಾರ್ಪೋರೇಟರ್‌ಗಳಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಪರಾಜಿತ ಅಭ್ಯರ್ಥಿಗಳಿದ್ದಾರೆ. ವಾರದಲ್ಲಿ ಎರಡು ದಿನ ಇವರೆಲ್ಲರೂ ರಸ್ತೆಗಳಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರೆ ಬೆಂಗಳೂರಿಗೆ ಅಂಟಿರುವ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಬೆಂಗಳೂರು ನಗರದಲ್ಲಿ ಮೇಯರ್ ಶಾಂತಾಕುಮಾರಿ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಹಾಗೂ ಶಾಸಕ ಅರವಿಂದ ಲಿಂಬಾವಳಿ ಮಾತ್ರ ಪ್ರತಿವಾರ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಇತರ ಭಾಗಗಳಲ್ಲಿ ಕೆಲ ಕಾರ್ಯಕರ್ತರೇ ಆಸಕ್ತಿವಹಿಸಿದ್ದಾರೇ ಹೊರತು ನಿರಂತರವಾಗಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿಲ್ಲ. ಬೆಂಗಳೂರು ಹೊರತುಪಡಿಸಿ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ರಾಜ್ಯದಲ್ಲಿರುವ 17 ಸಂಸದರು, 44 ಶಾಸಕರು ಹಾಗೂ 30 ವಿಧಾನಪರಿಷತ್ ಸದಸ್ಯರು ಬಿಜೆಪಿಯನ್ನು ಪ್ರತಿನಿಧಿಸುತ್ತಾರೆ. ಆದರೆ ಇವರಲ್ಲಿ ಯಾವ ಜನಪ್ರತಿನಿಧಿಗಳು ಎಷ್ಟು ಸಮಯವನ್ನು ಅಭಿಯಾನಕ್ಕೆ ಮೀಸಲಿಟ್ಟಿದ್ದಾರೆ ಹಾಗೂ ಎಷ್ಟು ಕಾರ್ಯಕರ್ತರನ್ನು ಪ್ರಧಾನಿ ಕನಸು ನನಸು ಮಾಡಲು ಬಳಿಸಿಕೊಂಡಿದ್ದಾರೆ ಎಂಬ ಬಗ್ಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಹಿತಿಯಿಲ್ಲ. ಈ ಬಗ್ಗೆ ಯಾವುದೇ ಪ್ರಯತ್ನವನ್ನೂ ಪಕ್ಷ ಮಾಡಿಲ್ಲ.
ಮೋದಿ ಮಾತಿಗೂ ಬೆಲೆ ಇಲ್ಲ!
ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಬಂದಾಗ ಬೆಳಗಾವಿಯಲ್ಲಿ ಅವರ ವಿಶೇಷ ವಿಮಾನ ಇಳಿದಿತ್ತು. ಆಗ ರಾಜ್ಯ ಬಿಜೆಪಿಯ ಕೆಲ ಮುಖಂಡರು ಭೇಟಿ ಮಾಡಿದ್ದಾಗ ಮೋದಿ ಕೇಳಿದ್ದ ಮೊದಲ ಪ್ರಶ್ನೆ ಸ್ವಚ್ಛ ಭಾರತ ಅಭಿಯಾನ ಹೇಗೆ ನಡೆಯುತ್ತಿದೆ? ಎಂದು ಅಭಿಯಾನದ ಬಗ್ಗೆ ಅಷ್ಟು ಕಾಳಜಿಯನ್ನು ತಾವು ಹೊಂದಿರುವ ಸಂದೇಶ ನೀಡಲು ಈ ಪ್ರಶ್ನೆಯನ್ನು ಮೋದಿ ಕೇಳಿದ್ದಿರಬಹುದು. ಆದರೆ ರಾಜ್ಯ ನಾಯಕರಿಗೆ ಮೋದಿ ಪ್ರಶ್ನೆ ವಿಮಾನ ನಿಲ್ದಾಣದಿಂದ ಹೊರಗೆ ಬರುವುದರೊಳಗೆ ಮರೆತುಹೋದಂತಿದೆ.
ಕಾರ್ಪೋರೇಟರ್‌ಗಳಿಗೆ ಚುನಾವಣೆ ಚಿಂತೆ!
ಬಿಜೆಪಿ ಕಾರ್ಪೋರೇಟರ್‌ಗಳಿಗೆ ಚುನಾವಣೆ ಯಾವಾಗ ನಡೆಯುತ್ತದೆ ಹಾಗೂ ತಮ್ಮ ಕ್ಷೇತ್ರ ಉಳಿಯುತ್ತದೆಯೋ ಇಲ್ಲವೋ ಎಂಬ ಚಿಂತೆ ಕಾಡತೊಡಗಿದೆ. ಈ ಕಾರಣದಿಂದ ಸ್ವಚ್ಛ ಭಾರತ ಅಭಿಯಾನವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಬಿಜೆಪಿಯ ನಗರ ಮುಖಂಡರೊಬ್ಬರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿನ ಬೆಳಗಾದರೆ ಜನರಿಂದ ಕಸದ ಸಮಸ್ಯೆ ಬಗ್ಗೆ ಬೈಸಿಕೊಳ್ಳುವುದನ್ನು ತಪ್ಪಿಸುವ ಪ್ರಯತ್ನಕ್ಕೆ ಪ್ರಧಾನಿ ಕರೆ ನೀಡಿದ್ದರೆ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಮಾನ್ಯ ಪ್ರಯತ್ನವೂ ಇವರಿಂದ ಕಾಣುತ್ತಿಲ್ಲ.
ಕೆಲವೆಡೆ ಅಭಿಯಾನ ನಡೆಯುತ್ತಿದೆ. ಆದರೆ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬೇಕಿದೆ. ಪಕ್ಷದ ವತಿಯಿಂದ ಈ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳಬೇಕಿದೆ. ಎಲ್ಲ ಜನಪ್ರತಿನಿಧಿಗಳು ಇದರಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಶೀಘ್ರದಲ್ಲೇ ಆದೇಶ ಹೊರಡಿಸುತ್ತೇವೆ.
-ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


