ಜಿಲ್ಲಾ ಸುದ್ದಿ

ಸೋಲಾರ್ ಹಗರಣ

2010-11ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗಾಗಿ...

ಸೋಲಾರ್ ಹಗರಣ
Published On :

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ನಡೆದ ಸೌರ ವಿದ್ಯುತ್ ದೀಪ ಖರೀದಿ ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ. ನೆಪ ಮಾತ್ರಕ್ಕೆ ಒಂದು ಪಾಲಿಟೆಕ್ನಿಕ್ ಕಾಲೇಜಿನ ಮೇಲೆ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ಮೌನವಹಿಸಿದರೆ, ನಿವೃತ ಐಎಎಸ್ ಅಧಿಕಾರಿ ಕೃಷ್ಣರಾವ್ ಅವರ ವರದಿಯಲ್ಲಿ ಹಗರಣದ ಹಣಕಾಸು ವ್ಯವಹಾರದ ಬಗ್ಗೆ ಚಕಾರ ಎತ್ತಿಲ್ಲ.

2010-11ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗಾಗಿ 184 ಸೌರ ವಿದ್ಯುತ್ ದೀಪ ಹಾಗೂ 23 ವಸತಿ ನಿಲಯಗಳಿಗೆ ಸೌರ ವಿದ್ಯುತ್ ದೀಪ ಹಾಗೂ 23 ವಸತಿ ನಿಲಯಗಳಿಗೆ ಸೌರ ವಿದ್ಯುತ್ ಹೀಟರ್ ಖರೀದಿಸಲಾಗಿದೆ. ಕಾಲೇಜು ಕೊಠಡಿ ಹಾಗೂ ವಸತಿ ನಿಲಯಗಳಿಗೆ ಈ ದೀಪ ನೀಡಲಾಗಿದ್ದು, ಮಾರುಕಟ್ಟೆ ಬೆಲೆಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಹಣವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ.

ಈ ಬಗ್ಗೆ ತಾಂತ್ರಿಕ ಶಿಕ್ಷಣ ಇಲಾಖೆ ವಿರುದ್ಧ ರಾಜ್ಯ ಸರ್ಕಾರಕ್ಕೆ ದೂರು ನೀಡಿದರೆ, ಅಲ್ಲಿರುವ ಅಧಿಕಾರಿಗಳನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ. ಈವರೆಗೆ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ. 184 ದೀಪಗಳ ಖರೀದಿಯಲ್ಲಿ ರೂ.22.75 ಲಕ್ಷ ಅವ್ಯವಹಾರವಾಗಿದ್ದರೆ, ಹೀಟರ್ ಖರೀದಿಗೆ ರೂ.60 ಲಕ್ಷಕ್ಕೂ ಅಧಿಕ ಹಣ ವ್ಯಯಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ, ಇಲಾಖೆಗೆ ದಾಖಲೆ ಸಹಿತ ದೂರು ನೀಡಿದರೆ ಕೃಷ್ಣರಾವ್ ವರದಿ ಹಣಕಾಸು ಅಂಶಗಳ ಬಗ್ಗೆ ಕಿಂಚಿತ್ತೂ ಗಮನಿಸಿಲ್ಲ.

ಸೌರ ವಿದ್ಯುತ್ ಉಪಕರಣಗಳ ಖರೀದಿಯಲ್ಲಿ ಅಕ್ರಮವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದರೂ, 'ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ತಾಂತ್ರಿಕ ಶಿಕ್ಷಣ ಇಲಾಖೆಯಿಂದಲೇ ಸಂಪೂರ್ಣ ಖರೀದಿ ನಡೆದಿದ್ದು, ಉನ್ನತ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರ ಈ ಅಕ್ರಮದ ಬಗ್ಗೆ ಕಣ್ಮುಚ್ಚಿಕುಳಿತಿದೆ. ಜತೆಗೆ ಇಲಾಖೆಯ ಅಧಿಕಾರಿಗಳನ್ನು ರಕ್ಷಿಸುವ ಕಾರ್ಯಕ್ಕೂ ಮುಂದಾಗಿದೆ.

ಆಗಿದ್ದೇನು?
2010 ಸೆಪ್ಟೆಂಬರ್‌ನಲ್ಲಿ ಸೌರ ವಿದ್ಯುತ್ ಉಪಕರಣ ಖರೀದಿಸಲು ಸರ್ಕಾರ ಅನುಮತಿ ನೀಡಿತ್ತು. ರಾಜ್ಯ ಸರ್ಕಾರದ 38 ಪಾಲಿಟೆಕ್ನಿಕ್ ಕಾಲೇಜು ಹಾಗೂ 23 ವಸತಿ ನಿಲಯಗಳಿಗೆ ಸೌರ ವಿದ್ಯುತ್ ಕೊಠಡಿ ದೀಪ ಹಾಗೂ ಬೀದಿ ದೀಪ ಖರೀದಿಸಿಲು ನಿರ್ಧರಿಸಲಾಗಿತ್ತು. ವೀಡಲ್ ಸೋಲಾರ್ ಹೋಮ್ ಲೈಟ್ ಹಾಗೂ ಬೀದಿ ದೀಪಕ್ಕೆ ರೂ.26,450 ಹಣ ಸಂದಾಯವಾಗಿದ್ದು, ಗುತ್ತಿಗೆದಾರ ಕಂಪನಿಗೆ ತಲಾ ರೂ.5.48 ಲಕ್ಷ, ರೂ.17.27 ಲಕ್ಷ ಹೆಚ್ಚುವರಿ ಹಣವನ್ನು ಸಂದಾಯ ಮಾಡಲಾಗಿದೆ. ಏಕೆಂದರೆ ಇದೇ ಸೌರ ದೀಪಗಳಿಗೆ ಮಾರುಕಟ್ಟೆಯ ಕನಿಷ್ಠ ಬೆಲೆ ಕ್ರಮವಾಗಿ ರೂ.7 ಸಾವಿರ ಹಾಗೂ ರೂ.9 ಸಾವಿರವಾಗಿದೆ.

ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ದೂರಿನಲ್ಲೇ ಸನ್‌ಲೈಟ್ ಸೋಲಾರ್ ಎನರ್ಜಿ ಪವರ್ ಲಿಮಿಟೆಡ್ ಸಂಸ್ಥೆಯ ಕೊಟೇಷನ್ ನೀಡಲಾಗಿದ್ದು, ಆ ಸಂಸ್ಥೆ ಈ ಹಣವನ್ನು ದಾಖಲಿಸಿದೆ. ಇನ್ನು ಸೋಲಾರ್ ಹೀಟರ್ ಒಂದಕ್ಕೆ ರೂ.54 ಸಾವಿರ ಹೆಚ್ಚುವರಿ ಸಂದಾಯ ಮಾಡಲಾಗಿದೆ. ಒಟ್ಟಾರೆ ಹಗರಣದ ಮೊತ್ತ ಸುಮಾರು ರೂ.87 ಲಕ್ಷ.

ಟೆಂಡರ್ ಪ್ರಕ್ರಿಯೆ ನಡೆದು 4 ವರ್ಷಗಳಾಗಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಅಕ್ರಮ ನಡೆದಿದೆ. ಆದರೆ ಇವತ್ತಿನವರೆಗೂ ಅಂತಿಮ ನಿರ್ಧಾರಕ್ಕೆ ಬರಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

- ರಾಜೀವ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.