ಐಟಿ ರದ್ದು: ಮೋದಿ ಸಚಿವರದ್ದೇ ಅಡ್ಡಗಾಲು
ಕಪ್ಪುಹಣ ಹೊಂದಿರುವವರ ಪಟ್ಟಿಯಲ್ಲಿ 21 ಹಿರಿಯ ವಕೀಲರ ಹೆಸರೂ ಇದೆ...

ಬೆಂಗಳೂರು: ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಪ್ರಧಾನಿ ನರೇಂದ್ರ ಮೋದಿ ಸಿದ್ದರಿದ್ದಾರೆ. ಆದರೆ ಅವರ ಕೆಲ ಸಹೋದ್ಯೋಗಿಗಳು ಸಹಕಾರ ನೀಡುತ್ತಿಲ್ಲ ಎಂದು ಬಿಜೆಪಿ ಮುಖಂಡ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ.
ಪ್ರಣಾಳಿಕೆಯಲ್ಲಿ ಹೇಳಿದಂತೆ ಆದಾಯ ತೆರಿಗೆಯನ್ನು ತೆಗೆದುಹಾಕಲು ಸಾಧ್ಯವಿದೆ. ಆರ್ಥಿಕ ಸುಧಾರಣೆಯ ನೀತಿ ಜನತೆಗೆ ಜನರ ಬೆಂಬಲಕ್ಕಾಗಿ ಇದನ್ನು ಮಾಡಲೇಬೇಕು. ಆದರೆ, ಸರ್ಕಾರದಲ್ಲೇ ಕೆಲವರು ಇದನ್ನು ಮಾಡಲು ಬಿಡುತ್ತಿಲ್ಲ.
ಯಾರು ಎನ್ನುವುದನ್ನು ನಾನು ಹೇಳಬೇಕಿಲ್ಲ ಎಂದು ಎಫ್‌ಕೆಸಿಸಿಐ ಸದಸ್ಯರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು. ಈ ಮೂಲಕ ಆದಾಯ ತೆರಿಗೆ ವಿಚಾರವನ್ನು ಬಿಜೆಪಿ ಕೈಬಿಟ್ಟಿಲ್ಲ ಹಾಗೂ ಆಂತರಿಕ ಗೊಂದಲವಿದೆ ಎನ್ನುವುದು ಸ್ವಾಮಿ ಮಾತಿನಿಂದ ಬಹಿರಂಗವಾಗಿದೆ.
ಆದಾಯ ತೆರಿಗೆ ತೆಗಿದುಹಾಕುವುದರಿಂದ ಸರ್ಕಾರಕ್ಕೆ ಬರುವ ಆದಾಯ ನಿಲ್ಲುತ್ತದೆ ಎನ್ನುವವಾದವೇ ಸರಿಯಿಲ್ಲ. ಆದಾಯ ತೆರಿಗೆಯಿಂದ ಸರ್ಕಾರಕ್ಕೆ ರೂ.ಲಕ್ಷ ಕೋಟಿ ಹಣ ಬರುತ್ತಿದೆ. ಇದು 2ಜಿ ಹಗರಣದ ಮೊತ್ತಕ್ಕೆ ಸಮನಾಗಿದೆ. ಇನ್ನೊಂದೆಡೆ ಕಲ್ಲಿದ್ದಲು ಹಂಚಿಕೆಯಿಂದ ರೂ.11 ಲಕ್ಷ ಕೋಟಿ ಹಣ ಬರುತ್ತದೆ.
ಕಪ್ಪು ಹಣ ವಾಪಸ್ ತರುವುದರಿಂದ ರೂ.120 ಲಕ್ಷ ಕೋಟಿ ಹಣ ಗಳಿಸಬಹುದು. ಹೀಗಿರುವಾಗ ಆದಾಯ ತೆರಿಗೆ ರದ್ದು ಮಾಡುವುದರಿಂದ ಆರ್ಥಿಕ ವ್ಯವಸ್ಥೆ ಹದಗೆಡುವುದಿಲ್ಲ. ಬದಲಾಗಿ ದೇಶದ ಮಧ್ಯಮ ವರ್ಗದ ಮನೋಬಲ ಹೆಚ್ಚಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಅಸಮರ್ಥ ಆರ್‌ಬಿಐ ಗವರ್ನರ್!
ಆರ್‌ಬಿಐನ ಹಾಲಿ ಗವರ್ನರ್ ಅವರನ್ನು ಮೊದಲು ತೆಗೆದುಹಾಕಬೇಕಿದೆ. ಹಣದುಬ್ಬರ ಇಳಿಕೆ ಮಾಡುವುದು ಎಂದರೆ ಬಡ್ಡಿದರ ಏರಿಸುವುದು ಎಂದು ತಿಳಿದಿದ್ದಾರೆ. ಅವರನ್ನು ಮತ್ತೆ ಷಾಂಘೈಗೆ ಕಳುಹಿಸಬೇಕು. ಇಲ್ಲವಾದಲ್ಲಿ ಹಣದುಬ್ಬರ ಇಳಿಯುವುದಿಲ್ಲ.
ಕೇವಲ ವಿದೇಶಿ ವಿಶ್ವವಿದ್ಯಾಲಯಗಳ ಪದವಿಗಳಿಂದ ಏನು ಮಾಡಲೂ ಸಾಧ್ಯವಿಲ್ಲ ಎನ್ನುವುದನ್ನು ಮನಮೋಹನ್ ಸಿಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಈಗಾಗಾಲೇ ಸಾಧಿಸಿ ತೋರಿಸಿದ್ದಾರೆ. ಈಗ ರಘರಾಮ್ ರಾಜನ್ ಮತ್ತೆ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡಲೇಬೇಕಿದೆ ಎಂದು ಸುಬ್ರಹ್ಮಣ್ಯನ್ ಸ್ವಾಮಿ ನುಡಿದರು.
ಭಾರತದ ಉದ್ಯಮಿಗಳಿಗೆ ಶೇ.3ರ ಬಡ್ಡಿಯಲ್ಲಿ ಸಾಲ ನೀಡಬೇಕು. ಈ ಮೂಲಕ ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮೋದಿ ಕಪ್ಪುಹಣ ತರುತ್ತಾರೆ
ವಿದೇಶದಲ್ಲಿರುವ ಕಪ್ಪು ಹಣ ತರಲು ಪ್ರಧಾನಿ ನರೇಂದ್ರ ಮೋದಿ ಸರಿಯಾದ ಮಾರ್ಗದಲ್ಲಿ ಸಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಮೋದಿಗೆ ಯಾವುದೇ ರಾಜಿ ಮಾಡಿಕೊಳ್ಳುವ ಅನಿವಾರ್ಯವಿಲ್ಲ. ಪ್ರಧಾನಿ ಮಧ್ಯಪ್ರವೇಶಿಸಿದ್ದರಿಂದ ಕಪ್ಪುಹಣ ಹೊಂದಿದವರ ಮೊದಲ ಪಟ್ಟಿ ಎಸ್‌ಐಟಿ ಕೈ ಸೇರಿದೆ.
ಜಿ-20 ಶೃಂಗಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಕಪ್ಪು ಹಣಕ್ಕೂ ತೆರಿಗೆ ನೀತಿಗೂ ಯಾವುದೇ ಸಂಬಂಧವಿಲ್ಲ. ಅಮೆರಿಕ, ಜರ್ಮನಿ ಹಾಗೂ ಫ್ರಾನ್ಸ್ ಅನುಸರಿಸಿದ ಕ್ರಮಗಳನ್ನು ಭಾರತ ಅನುಸರಿಸಬೇಕಿದೆ. ನರೇಂದ್ರ ಮೋದಿ ಇದನ್ನು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಸ್ವಾಮಿ ಹೇಳಿದರು.
ದೆಹಲಿಯಲ್ಲಿ ಸಾಕಷ್ಟು ಮೊಸಳೆಗಳಿವೆ. ಕಳೆದ 6 ತಿಂಗಳಿಂದ ಇವರನ್ನು ನಿಯಂತ್ರಿಸಲು ಮೋದಿ ಸಫಲರಾಗಿದ್ದಾರೆ. ಇವರನ್ನೆಲ್ಲ ನಿಯಂತ್ರಿಸಿ ಕಪ್ಪುಹಣ ತರಲು ಸಾಧ್ಯವಿಲ್ಲ. ಅದನ್ನು ಬುದ್ದಿವಂತಿಕೆಯಿಂದ ತರಬೇಕು ಎಂದು ಅವರು ಅಭಿಪ್ರಾಯಪಟ್ಟರು.
21 ಹಿರಿಯ ವಕೀಲರ ಹೆಸರಲ್ಲಿ ಕಪ್ಪುಹಣ
ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಕಪ್ಪುಹಣ ಹೊಂದಿರುವವರ ಪಟ್ಟಿಯಲ್ಲಿ 21 ಹಿರಿಯ ವಕೀಲರ ಹೆಸರೂ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ಆ ರೀತಿಯ ವಾದಗಳು ಬರಲು ಕಾರಣವೇನು, ಆದಾಯ ತೆರಿಗೆ ನೀತಿ ಎಂಬ ಅನವಶ್ಯಕ ವಿಚಾರ ಪ್ರಸ್ತಾಪವಾಗುವ ಉದ್ದೇಶವೇನು ಎನ್ನುವುದನ್ನು ಜನರು ಅರ್ಥೈಸಿಕೊಳ್ಳಬಹುದು.
ಈ ಪಟ್ಟಿಯಲ್ಲಿ ದೇಶದ ಪ್ರಮುಖ ಹಾಗೂ ಪ್ರಭಾವಿ ಉದ್ಯಮಿಗಳಿದ್ದಾರೆ. ಅದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಅಮೆರಿಕದ ಮಾದರಿಯಲ್ಲಿ ಸೂಕ್ತ ಕಾನೂನು ಮೂಲಕ ಕೇಂದ್ರ ಸರ್ಕಾರ ಈ ಕ್ರಿಮಿನಲ್‌ಗಳಿಗೆ ಬುದ್ದಿ ಕಲಿಸಲಿದೆ ಎಂದು ಸ್ವಾಮಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


