ಕೇಂಬ್ರಿಡ್ಜ್ ಇಂದಿನಿಂದ ಪುನರಾರಂಭ
ಒಂದು ವಾರದ ಹಿಂದೆ ಸ್ಥಗಿತಗೊಂಡಿದ್ದ ತರಗತಿಗಳು ಇಂದಿನಿಂದ ಪುನರಾರಂಭ...

ಬೆಂಗಳೂರು: ಇಂದಿರಾನಗರದ ಕೇಂಬ್ರಿಡ್ಜ್ ಶಾಲೆಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಬಳಿಕ ಒಂದು ವಾರದ ಹಿಂದೆ ಸ್ಥಗಿತಗೊಂಡಿದ್ದ ತರಗತಿಗಳು ಇಂದಿನಿಂದ ಪುನರಾರಂಭಗೊಂಡಿದೆ. ಬೆಳಗಿನಿಂದಲೇ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದ ದೃಷ್ಯ ಸಾಮಾನ್ಯವಾಗಿದೆ.
ಶಾಲೆಯ ಆಡಳಿತ ಮಂಡಳಿ ಮಕ್ಕಳ ಸದಸ್ಯರು ಸ್ವಾಗತಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಮಫ್ತಿಯಲ್ಲಿ ಶಾಲೆಯ ಆವರದಲ್ಲಿ ಬೀಡು ಬಿಟ್ಟಿದ್ದಾರೆ. ಮಕ್ಕಳು ಪೊಲೀಸರನ್ನು ಕಂಡು ಹೆದರದಿರಲು ಪೊಲೀಸರು ಮಫ್ತಿಯಲ್ಲಿ ಭದ್ರತೆ ನೀಡಿದ್ದಾರೆ.
ಬುಧವಾರ ಕೇಂಬ್ರಿಡ್ಜ್ ಶಾಲೆಯಲ್ಲಿ ಪಾಲಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತ ಎಂ.ಎನ್.ರೆಡ್ಡಿ, ಮಕ್ಕಳ ಹಿತದೃಷ್ಟಿಯಿಂದ ಶಾಲೆ ಗುರುವಾರದಿಂದಲೇ ಆರಂಭವಾಗಬೇಕು ಎಂದು ಪಾಲಕರು ಪಟ್ಟು ಹಿಡಿದಿದ್ದರು. ಹೀಗಾಗಿ ಶಾಲೆಯನ್ನು ಗುರುವಾರಂದಿ ಆರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಶಾಲೆಯಲ್ಲಿ ಒಟ್ಟು 99 ಸಿಸಿ ಕ್ಯಾಮೆರಾಗಳ ಅಳವಡಿಕೆ, ಪ್ರತಿ ಮಹಡಿಗೂ ಒಬ್ಬ ವಿಚಕ್ಷಣ ಅಧಿಕಾರಿ ನೇಮಕ ಸೇರಿದಂತೆ ಸರ್ಕಾರ ವಿಧಿಸಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಅನುಮತಿ ನೀಡಲಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಆರಂಭವಾಗಿದ್ದ ಸಭೆಯಲ್ಲಿ ಪಾಲಕರು, ಆಡಳಿತ ಮಂಡಲಿ ಜತೆಗೆ ಸ್ಥಳೀಯ ಶಾಸಕ ರಘು, ಸಂಸದ ಪಿ.ಸಿ.ಮೋಹನ್ ಸ್ಥಳೀಯ ಕಾರ್ಪೋರೇಟರ್ ಸೇರಿದಂತೆ ರಾಜಕೀಯ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಸಭೆಯ ಉದ್ದೇಶ ಬದಲಾಗುತ್ತಿದ್ದಂತೆ ಪೋಷಕರು ಸಭೆ ಮಧ್ಯದಲ್ಲೇ ಎದ್ದು ಹೊರ ನಡೆದರು.
ತರಗತಿ ಪುನರಾರಂಭಕ್ಕೆ 3 ದಿನಗಳ ಕಾಲಾವಕಾಶ ನೀಡುವಂತೆ ಆಡಳಿತ ಮಂಡಳಿ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಪಾಲಕರು, ಈಗಾಗಲೇ ಐದಾರು ದಿನಗಳಿಂದ ಮಕ್ಕಳಿಗೆ ಪಾಠವಾಗಿಲ್ಲ. ಆದ್ದರಿಂದ ಗುರವಾರದಿಂದಲೇ ತರಗತಿ ಆರಂಭಿಸುವಂತೆ ಪಟ್ಟು ಹಿಡಿದರು. ಇದಕ್ಕೆ ಮಣಿದ ಶಾಲಾ ಆಡಳಿತ ಮಂಡಳಿ ಇಂದಿನಿಂದಲೇ ಶಾಲೆ ಪುನರಾರಂಭಿಸಲು ತೀರ್ಮಾನಿಸಲಾಯಿತು.
ಇದೇ ವೇಳೆ ಮಾತನಾಡಿದ ಶಾಲೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕಿ ಕುಸುಮ ಆರ್ಯ, ಪೊಲೀಸರ ತನಿಖೆಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿದ್ದೇವೆ. 90 ಸಿಸಿ ಕ್ಯಾಮರಾ ಸೇರಿದಂತೆ 12 ಸುರಕ್ಷತಾ ಕ್ರಮಗಳನ್ನು ಪಾಲಿಸಲು ಬದ್ದವಾಗಿದ್ದೇವೆ. ಭಾನುವಾರದ ಒಳಗೆ ಎಲ್ಲವೂ ಸಿದ್ದವಾಗಲಿದೆ ಎಂದರು.
ಘಟನೆ ಹಿನ್ನೆಲೆಯಲ್ಲಿ ಶಾಲೆ ಪ್ರಾಂಶುಪಾಲರು ರಾಜೀನಾಮೆ ನೀಲು ಬರುವುದಿಲ್ಲ. ತನಿಖೆ ನಡೆಯುತ್ತಿರುವುದರಿಂದ ಅವರು ಹುದ್ದೆಯಲ್ಲಿದ್ದರೆ ಸೂಕ್ತ ಎಂದು ಕುಸುಮ ವಿವರಿಸಿದರು.
ಶಾಲಾ ವಾಹನಗಳಲ್ಲಿ ಜಿಪಿಎಸ್ ಇದೆ. ಸಿಸಿಟಿವಿ ಕ್ಯಾಮರಾ ಇದೆ. ಸೆಕ್ಯುರಿಟಿ ಗಾರ್ಡ್, ಅಟೆಂಡರ್ಸ್, ಐಡೆಂಟಿಫಿಕೇಶನ್ ಕಾರ್ಡ್‌ಗಳು, ಎಸ್‌ಎಂಎಸ್ ಅಲರ್ಟ್, ಪ್ರತಿ ಮಹಡಿಗೂ ವಿಚಕ್ಷಣಾ ಅಧಿಕಾರಿ, ವಿದ್ಯಾರ್ಥಿ ಕೌನ್ಸಿಲ್‌ರ್ ನೇಮಿಸಲಾಗಿದೆ.
ಇದರೊಂದಿಗೆ ಪುರುಷ ಸಿಬ್ಬಂದಿ ಪೂರ್ವಾಪರ ಪರಿಶೀಲನೆ, ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ಶಿಕ್ಷಣ, ಮನೋತಜ್ಞರ ನೇಮಕ, ಪಾಲಕರ ಸಮಿತಿ ರಚನೆ, ಅವರಿಂದ ಸಲಹೆಗಳ ಸ್ವೀಕಾರ, ಮಕ್ಕಳ ಸಹಾಯವಾಣಿ, ಲೈಂಗಿಕ ದೌರ್ಜನ್ಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳ ನಡೆಸಲಾಗುತ್ತದೆ. ಮಕ್ಕಳ ಸುರಕ್ಷತೆ ಶಾಲೆಯ ಅತ್ಯುನ್ನತ ಆದ್ಯತೆಯಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


