ರೈಲ್ವೆಯಿಂದ ಕನ್ನಡದ ಕಗ್ಗೊಲೆ!
ಇದು ರಾಯಚೂರು ಜಿಲ್ಲೆಯೊಂದರ ಸಮಸ್ಯೆ ಅಲ್ಲ...

ರಾಯಚೂರು: ಇದು ರಾಯಚೂರು ಜಿಲ್ಲೆಯೊಂದರ ಸಮಸ್ಯೆ ಅಲ್ಲ. ಇಡೀ ರಾಜ್ಯಾದ್ಯಂತ ಕನ್ನಡದ ಕಗ್ಗೊಲೆಯಾಗುತ್ತಿದೆ. ಅದೂ ರೈಲ್ವೆ ಇಲಾಖೆಯಿಂದ. ಇದು ದಶಕಗಳ ಅನ್ಯಾಯ. ಆದರೆ ಕೇಳುವವರು ಮಾತ್ರ ಇರಲಿಲ್ಲ. ಆದರೆ, ಈಗ ಕನ್ನಡಿಗರೇ ಆದ ಡಿ.ವಿ.ಸದಾನಂದಗೌಡರು ರೈಲ್ವೆ ಸಚಿವರು. ಹೀಗಾಗಿ ಇನ್ನಾದರೂ ಸಮಸ್ಯೆಗೆ ಪೂರ್ಣ ವಿರಾಮ ಬೀಳುವುದೇ ಎಂದು ನೋಡಬೇಕಿದೆ.
ಕನ್ನಡ ನಾಡಿನಲ್ಲೇ ಕನ್ನಡ ಭಾಷೆ ಅನಾಥ. ಸಾಲು ಸಾಲು ತಪ್ಪುಗಳಿದ್ದರೂ ತಿದ್ದುವ ಕಾರ್ಯಕ್ಕೆ ಮುಂದಾಗದ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಭಾಷೆಗೆ ಒದಗಿರುವ ದುಸ್ಥಿತಿ. ರೈಲ್ವೆ ಇಲಾಖೆಯಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಅನ್ಯಾಯ ಆಗುತ್ತಿರುವುದು ಇದು ಮೊದಲೇನಲ್ಲ. ಕಾಲದಿಂದ ಕಾಲಕ್ಕೆ ಕನ್ನಡ ಮತ್ತು ಕನ್ನಡಿಗರಿಗೆ ಇಲಾಖೆಯು ಅನ್ಯಾಯ ಮಾಡುತ್ತಲೇ ಸಾಗಿದೆ. ಕೇಂದ್ರಕ್ಕೆ ಸೇರಿದ್ದೆಂದು ಹಿಂದಿ ಭಾಷೆಗೆ ಪ್ರಾಶಸ್ತ್ಯ ನೀಡುತ್ತಿದೆ. ಅದರ ಜತೆಗೆ ಸ್ಥಳೀಯ ಭಾಷೆಯನ್ನು ಬಳಸಬೇಕು. ಆದರೆ ಆ ಕೆಲಸ ಮಾತ್ರ ಆಗುತ್ತಿಲ್ಲ.
ರೈಲ್ವೆ ಇಲಾಖೆಯಿಂದ ಕನ್ನಡಕ್ಕೆ ಅಪಮಾನ ನಿರಂತರವಾಗಿದೆ. ಕನ್ನಡದ ಪದಗಳ ಬಳಕೆಯಲ್ಲಿ ಇಲಾಖೆಯು ತೋರುತ್ತಿರುವ ಅಸಡ್ಡೆಯನ್ನು ವಿರೋಧಿಸಿ ಹೋರಾಟ ನಡೆಸಲಾಗಿದೆ. ಆದರೆ ಈಗಲೂ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಸಂಘಟನೆ ಉಗ್ರ ಹೋರಾಟಕ್ಕಿಳಿಯಲಿದೆ ಆಶೋಕ ಕುಮಾರ್ ಜೈನ್, ಕರವೇ ಜಿಲ್ಲಾಧ್ಯಕ್ಷ
ತಪ್ಪುಗಳಿಗೆ ಮಾದರಿ ನಿಲ್ದಾಣ
ರೈಲು ನಿಲ್ದಾಣಗಳಲ್ಲಿ ಕನ್ನಡ ಬಳಕೆಗೆ ಇಲಾಖೆ ಆದ್ಯತೆಯನ್ನೇನೋ ನೀಡಿದೆ. ಆದರೆ ಅದು ನಾಮಫಲಕದಲ್ಲಿ ಮಾತ್ರ ಎಂಬುದು ವಾಸ್ತವ. ಇನ್ನು ರಾಯಚೂರು ನಿಲ್ದಾಣದ ಸಿಬ್ಬಂದಿ ತೆಲುಗಿನಲ್ಲಿಯೇ ವ್ಯವಹರಿಸುತ್ತಾರೆ. ಕನ್ನಡ ಬರುವುದಿಲ್ಲ ಎಂದಲ್ಲ. ತೆಲುಗೇ ಅವರಿಗೆ ಅಚ್ಚುಮೆಚ್ಚು. ದಕ್ಷಿಣ ಮಧ್ಯ ರೈಲ್ವೆಯ ಸಿಕಂದ್ರಾಬಾದ್ ವಲಯ ಗುಂತಕಲ್ ವಿಭಾಗದಲ್ಲಿರುವ ರಾಯಚೂರು ರೈಲು ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವವರಲ್ಲಿ ತೆಲುಗು ಭಾಷಿಕರೇ ಹೆಚ್ಚಾಗಿದ್ದಾರೆ. ಎಲ್ಲ ನಾಮಫಲಕಗಳು ಉಸ್ತುವಾರಿ ಅವರದ್ದೇ, ಹೀಗಾಗಿ ಅವು ಕನ್ನಡಿಗರಿಗೆ ಅರ್ಥವಾಗದ ರೀತಿಯಲ್ಲಿಯೂ ಇವೆ.
ಕನ್ನಡ ಅಧ್ವಾನ
ರಾಜ್ಯದ ಬಹುತೇಕ ರೈಲು ನಿಲ್ದಾಣಗಳಲ್ಲಿ ಮಾಹಿತಿ ಒದಗಿಸುವ ನಾಮಫಲಕಗಳಿಂದ ಹಿಡಿದು ಊರುಗಳ ಹೆಸರುಗಳಲ್ಲಿಯೂ ಕನ್ನಡದ ಕಾಗುಣಿತ ದೋಷ ಸಾಮಾನ್ಯ. ಅದಕ್ಕೆ ಒಂದು ಉದಾಹರಣೆ, ಇಲ್ಲಿನ ನಿಲ್ದಾಣದಲ್ಲಿರುವ ತತ್ಕಾಲೆ ಟಿಕೇಟುಗಳು ಬೆಳಗ್ಗೆ 10 ಗಂಟೆಯಿಂದ ಕೊಡಲಾಗುತ್ತದೆ. ತತ್ಕಾಲೆ ಟಿಕೇಟಿಗಾಗಿ ಬೇರೆ ಕ್ಯೂ ಇಲ್ಲ. ಬೀದರ್ ಬೀದರೇ ಆಗಿದೆ. ಹೈದರಾಬಾದರ್, ದಾದಾರರ್, ನಾಗರಕೋಯಿಲರ್, ಸಿಕಿಂದರಾಬಾದ್... ಹೀಗೆ ತಪ್ಪು ತಪ್ಪಾಗಿ ಬರೆಯಲಾಗಿದೆ.
ಹೋರಾಟಕ್ಕಿಲ್ಲ ಬೆಲೆ
ಕನ್ನಡಿಗರೇ ರೈಲ್ವೆ ಸಚಿವರು ಎಂದು ಕಳೆದ ಯುಪಿಎ ಸರ್ಕಾರದ ಅವಧಿಯಿಂದ ಕನ್ನಡಿಗರು ಬೀಗುತ್ತಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ನಗರಕ್ಕೆ ಆಗಮಿಸಿದ್ದಾಗ ಕರವೇ, ಕನ್ನಡಕ್ಕೆ ಒದಗಿದ ದುರ್ಗತಿಯನ್ನು ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಯಾವುದೇ ಕ್ರಮ ಜರುಗಿಲ್ಲ. ಪರಿಣಾಮ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಕನ್ನಡಕ್ಕೆ ಒದಗಿದ ದುರ್ಗತಿ ಸರಿಯಾಗಿಲ್ಲ.
- ಜಗನ್ನಾಥ ಆರ್.ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


