ಜಿಲ್ಲಾ ಸುದ್ದಿ

ವಿಷ್ಣು ಸ್ಮಾರಕ ಶಂಕುಸ್ಥಾಪನೆಗೆ ಕೂಡಿ ಬಂತು ಕಾಲ

ಮಾರ್ಬಲ್ಸ್ ಹೊದಿಕೆಯ ಸಮಾಧಿ, ಅದರ ಬಳಿಯೇ ಕಂಚಿನ ಪುತ್ಥಳಿ. ಮುಂಭಾಗ ಫೋಟೋ ಗ್ಯಾಲರಿ, ಪಕ್ಕದಲ್ಲಿಯೇ...

ವಿಷ್ಣು ಸ್ಮಾರಕ ಶಂಕುಸ್ಥಾಪನೆಗೆ ಕೂಡಿ ಬಂತು ಕಾಲ
ಸಾಹಸಸಿಂಹ ಡಾ.ವಿಷ್ಣು ವರ್ಧನ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಮಾರ್ಬಲ್ಸ್ ಹೊದಿಕೆಯ ಸಮಾಧಿ, ಅದರ ಬಳಿಯೇ ಕಂಚಿನ ಪುತ್ಥಳಿ. ಮುಂಭಾಗ ಫೋಟೋ ಗ್ಯಾಲರಿ, ಪಕ್ಕದಲ್ಲಿಯೇ ಚಿತ್ರೋತ್ಸವದ ಸಭಾಂಗಣ. ಅದರೊಳಗೆ ಸಿನಿಮಾ ಶಿಕ್ಷಣದ ತರಗತಿ ಕೊಠಡಿ. ಆವರಣದಲ್ಲಿಯೇ ಗ್ರಂಥಾಲಯ, ಸ್ಮಾರಕದ ಸುತ್ತ ಹಸಿರು ತೋರಣದ ಸಸ್ಯ ತೋಟ..!

ಸಾಹಸಸಿಂಹ ಡಾ.ವಿಷ್ಣು ವರ್ಧನ್ ಸ್ಮಾರಕದ ನಿರ್ಮಾಣದ ಮೊದಲ ಹಂತದ ನೀಲ ನಕ್ಷೆ ಇದು. ಸತತ ಐದು ವರ್ಷಗಳ ನಂತರ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ವಿಷ್ಣು ವರ್ಧನ್ ಕುಟುಂಬದವರ ಹೋರಾಟ ಮತ್ತು ಅವರ ಅಭಿಮಾನಿಗಳ ಒತ್ತಡದ ಫಲವಾಗಿ ಸ್ಮಾರಕ ನಿರ್ಮಾಣಕ್ಕೆ ನಗರದ ಕೆಂಗೇರಿ ಸಮೀಪದ ಮೈಲಸಂದ್ರದಲ್ಲಿ ಎರಡು ಎಕರೆ ಜಾಗ ಸಿಕ್ಕಿದೆ.
ಡಿ. 30ರಂದು ಮಂಗಳವಾರ ಬೆಳಗ್ಗೆ ಇಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅಡಿಗಲ್ಲು ಹಾಕಲಿದ್ದಾರೆ.

ಈ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧವಾಗಿದೆ. ಡಾ. ವಿಷ್ಣುವರ್ಧನ್ ಟ್ರಸ್ಟ್, ಸ್ಮಾರಕ ನಿರ್ಮಾಣದ  ಹಲವು ಯೋಜನೆಗಳನ್ನು ಅಂತಿಮಗೊಳಿಸಿದೆ. ಮಾರ್ಬಲ್ಸ್ ಕಲ್ಲುಗಳ ಹೊದಿಕೆಯ ಸಮಾಧಿ, ಕಂಚಿನ ಪುತ್ಥಳಿ, ಉದ್ಯಾನ  ಹೀಗೆ ಮೊದಲ ಹಂತದಲ್ಲಿ  ಸ್ಮಾರಕದ ಮಹತ್ತರ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ. ಇದರ ಆಧಾರದಲ್ಲಿಯೇ ಸರ್ಕಾರ, ಸ್ಮಾರಕ ನಿರ್ಮಾಣಕ್ಕೆ ರು. 11 ಕೋಟಿ ನೀಡುತ್ತಿದೆ.

ಕಂಚಿನ ಪುತ್ಥಳಿ ರಚನೆ: ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಜಾಗದಲ್ಲಿ ಈಗ ಗಿಡಗಂಟಿಗಳು ಬೆಳೆದಿವೆ. ಮೊದಲು ದಾಗ ಸಮತಟ್ಟು ಮಾಡುವ ಕಾರ್ಯ ನಡೆಯಲಿದೆ. ಇದಾದ ನಂತರ, ಅಭಿಮಾನ್ ಸ್ಟುಡಿಯೊದಲ್ಲಿರುವ ವಿಷ್ಣು ಸಮಾಧಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ವಿಶೇಷವಾದ ಮಾರ್ಬಲ್ಸ್ ಕಲ್ಲುಗಳನ್ನು ಬಳಸಿ, ಸಮಾಧಿ ನಿರ್ಮಾಣವಾಗಲಿದೆ. ಅದರ ಸನಿಹದಲ್ಲಿಯೇ ಕಂಚಿನ ಪುತ್ಥಳಿ ಸ್ಥಾಪನೆಯಾಗಲಿದೆ.

ಸಮಾಧಿ ಮತ್ತು ಕಂಚಿನ ಪುತ್ಥಳಿ ಎದುರಿಗೆ ಎರಡೂ ಬದಿಯಲ್ಲಿ ಫೋಟೋ ಗ್ಯಾಲರಿ ನಿರ್ಮಾಣವಾಗಲಿದೆ. ವಿಷ್ಣುವರ್ಧನ್ ಅಭಿನಯಿಸಿದ ವಿವಿಧ ಚಿತ್ರಗಳಲ್ಲಿನ ಆಕರ್ಷಕ ಭಾವಚಿತ್ರಗಳನ್ನು ಇಲ್ಲಿ ಹಾಕಲಾಗುತ್ತದೆ. ಹಾಗೆಯೇ, ವಿಷ್ಣುವರ್ಧನ್ ಅವರ ಜೀವನದ ಪ್ರಮುಖ ಸನ್ನಿವೇಶಗಳ ಭಾವಚಿತ್ರಗಳು ಗ್ಯಾಲರಿಗೆ ವಿಶೇಷ ಮೆರಗು ನೀಡಲಿವೆ. ಸ್ಮಾರಕ ನಿರ್ಮಾಣದ ಯೋಜನೆಯಲ್ಲಿ ಚಿತ್ರೋತ್ಸವದ ಆಡಿಟೋರಿಯಂ ಕೂಡಾ ಒಂದು. ಸ್ಮಾರಕ ವೀಕ್ಷಣೆಗಾಗಿ ನಿತ್ಯ ಬಂದು ಹೋಗುವ ವಿಷ್ಣುವರ್ಧನ್ ಅಭಿಮಾನಿಗಳಿಗೆ ಅವರ ಅಭಿನಯದ ಚಿತ್ರಗಳನ್ನು ವೀಕ್ಷಿಸಲು ಈ ಆಡಿಟೋರಿಯಂ ಮೀಸಲಾಗಲಿದೆ. ನಿತ್ಯವೂ ಇಲ್ಲಿ ವಿಷ್ಣು ಅಭಿನಯದ ಚಿತ್ರಗಳ ಪ್ರದರ್ಶನ ಮಾತ್ರ ನಡೆಯಲಿದೆ.


ಇದರಲ್ಲಿಯೇ ಸಿನಿಮಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ತರಬೇತಿ ಶಿಬಿರಗಳನ್ನು ನಡೆಸುವ ಉದ್ದೇಶ ವಿಷ್ಣು ಟ್ರಸ್ಟ್‌ಗಿದೆ.

ತಲೆ ಎತ್ತಲಿದೆ ಗ್ರಂಥಾಲಯ: ಸ್ಮಾರಕ ವೀಕ್ಷಣೆಗೆ ಬಂದವರಿಗೆ ವಿಶ್ವದ ವಿವಿಧ ಭಾಷೆಯ ಸಿನಮಾ ಸಾಹಿತ್ಯ ಒದಗಿಸಲು ಬೃಹತ್ ಗ್ರಂಥಾಲಯವೂ ಇಲ್ಲಿ ತಲೆ ಎತ್ತಲಿದೆ. ಇಲ್ಲಿ ಕನ್ನಡವೂ ಸೇರಿದಂತೆ ದೇಶದ ಇತರೆ ಭಾಷೆಯ ಸಿನಿಮಾ ಸಾಹಿತ್ಯ ಹಾಗೂ ವಿದೇಶ ಭಾಷೆಯ ಸಿನಿಮಾ ಸಾಹಿತ್ಯದ ಪುಸ್ತಕಗಳನ್ನು ಇಡಲಾಗುತ್ತದೆ. ಸ್ಮಾರಕ ಕೇವಲ ಭಾವನಾತ್ಮಕ ಕೇಂದ್ರವಾಗದೆ, ಜ್ಞಾನದ ತಾಣವೂ ಆಗಬೇಕೆಂಬುದು ಗ್ರಂಥಾಲಯ ನಿರ್ಮಾಣದ ಉದ್ದೇಶವಂತೆ.

ಇನ್ನು ವಿಷ್ಣುವರ್ಧನ್ ಪರಿಸರ ಪ್ರೇಮಿಯಾಗಿದ್ದರ ಸಂಕೇತವಾಗಿ, ಅಲ್ಲಿ ಸುಂದರವಾದ ಉದ್ಯಾನ ಸ್ಥಾಪನೆಯ ಜತೆಗೆ ಹಸಿರು ತೋರಣದ ಸಸ್ಯತೋಟ ನಿರ್ಮಾಣ ಮಾಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ಇಷ್ಟು ಯೋಜನೆಗಳು ಸ್ಮಾರಕ ಜಾಗದಲ್ಲಿ ಕಾರ್ಯಗತಕ್ಕೆ ಬರಲಿವೆ. ಒಟ್ಟಿನಲ್ಲಿ ಸರ್ಕಾರ ನೀಡಿದ ಜಾಗ ಮತ್ತು ಆರ್ಥಿಕ ನೆರವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಮಾರಕವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವ ಮೂಲಕ ಸ್ಮಾರಕವನ್ನು ಪ್ರವಾಸಿ ಕೇಂದ್ರ ಮಾಡುವ ಕನಸು ಡಾ. ವಿಷ್ಣುವರ್ಧನ್ ಕುಟುಂಬದವರದ್ದು.

ಇನ್ನೂ 3 ಎಕರೆ ಜಾಗ ಬೇಕಂತೆ!

ಸ್ಮಾರಕದ ಬಳಿಯೇ ಸುಸಜ್ಜಿತವಾದ ಫಿಲ್ಮಂ ಮತ್ತು ಟೆಲಿವಿಜನ್ ತರಬೇತಿ ಸಂಸ್ಥೆ ಸ್ಥಾಪಿಸುವ ಕನಸು ಡಾ.ವಿಷ್ಣುವರ್ಧವ್ ಕುಟುಂಬದವರದ್ದು. ವಿಶಾಲವಾದ ಜಾಗದಲ್ಲಿ ಇದು ದೇಶಕ್ಕೇ ಮಾದರಿಯಾಗುವ ಹಾಗೆ ತರಬೇತಿ ಸಂಸ್ಥೆಯನ್ನು ಸ್ಥಾಪಿಸಬೇಕು. ಅಲ್ಲಿ ಕಿರುತರೆ, ಹಿರಿತೆರಿಗೆ ಪೂರಕವಾದಂತೆ ಅಭಿನಯ, ನಿರ್ದೇಶಕ ಸೇರಿದಂತೆ ಎಲ್ಲ ರೀತಿಯ ತರಬೇತಿ ಸಿಗಬೇಕು ಎಂಬ ಹೆಬ್ಬಯತೆ ಇದೆ. ಆದರೆ, ಇದು ನನಸಾಗಬೇಕಾದರೆ, ಸ್ಮಾರಕದ ಬಳಿಯೇ ಇನ್ನು ಮೂರು ಎಕರೆ ಜಾಗಬೇಕು. ಈಗಾಗಲೇ ಸರ್ಕಾರವು, ಸ್ಮಾರಕ ನಿರ್ಮಾಣಕ್ಕೆ ನೀಡಿರುವ ಎರಡು ಎಕರೆ ಜಾಗವೇ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಫಿಲ್ಮಂ ಮತ್ತು ಟೆಲಿವಿಜನ್ ತರಬೇತಿ ಸಂಸ್ಥೆಯ ಕನಸು ನನಸಾಗುವುದೋ ಇಲ್ಲವೋ ಕಾದು ನೋಡಬೇಕಿದೆ.

ಇನ್ನು ಗೊಂದಲ...

ಸ್ಮಾರಕ ನಿರ್ಮಾಣಕ್ಕೆ ನೀಡಿರುವ ಜಾಗ ಅರಣ್ಯ ಭೂಮಿ ಆಗಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರೊಬ್ಬರು ಕೋರ್ಟ್ ಮೆಟ್ಟಲೇರಿದ್ದಾರೆ. ಸದ್ಯಕ್ಕೆ ಅವರ ಅರ್ಜಿ ನ್ಯಾಯಾಲಯದಲ್ಲಿ ಇನ್ನು  ವಿಚಾರಣೆಗೆ ಪ್ರವೇಶ ಪಡೆದಿಲ್ಲ. ಈ ನಡುವೆಯೇ ಸರ್ಕಾರ, ಸ್ಮಾರಕ ನಿರ್ಮಾಣಕ್ಕೆ ನೀಡಿರುವ ಜಾಗ ಅರಣ್ಯಕ್ಕೆ ಸೇರಿಲ್ಲ. ಅದು ಕಂದಾಯ ಜಾಗ, ಯಾವುದೇ ವಿವಾದ ಉಂಟಾಗುವ ಪ್ರಶ್ನೆಯೇ ಇಲ್ಲ ಎಂದಿದೆ. ಆದರೂ, ಆಕ್ಷೇಪಣೆಯ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದರೆ ಮುಂದೇನು ಎನ್ನುವ ಆಂತಕವೂ ಇದೆ.

ಸ್ಮಾರಕವನ್ನು ಒಂದು ಸಾಂಸ್ಕೃತಿಕ, ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಈಗಾಗಲೇ ಹಲವು ಯೋಜನೆಗಳು ಅಂತಿಮವಾಗಿವೆ. ಸರ್ಕಾರ ಸಾಕಷ್ಟು ಸಹಕಾರ ನೀಡಿದೆ. ಸರ್ಕಾರ ನೀಡಿದ ಆರ್ಥಿಕ ನೆರವಿನಲ್ಲಿ ಸ್ಮಾರಕ ಒಂದು ಪ್ರವಾಸಿ ಕೇಂದ್ರವಾಗಬೇಕು ಎಂಬುದು ನಮ್ಮ ಆಸೆ.

ಅನಿರುದ್ಧ, ನಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.