ಮಹಾರಾಷ್ಟ್ರ ವಿರುದ್ಧವೇ ತಿರುಗಿ ಬಿದ್ದ ಎಂಇಎಸ್
ಪ್ರತಿಬಾರಿ ವಿಧಾನ ಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ ನಡೆಸಿ ಸರ್ಕಾರ್ಕೆ ಸಡ್ಡು ಹೊಡೆಯುತ್ತಿದ್ದ ಎಂಇಎಸ್ ಪೌರುಷ ಈ ಬಾರಿ ಅಡಗಿದೆ.

-ಸಂಜೀವ್ ಕುಮಾರ್ ನಾಡಿಗೇರ
ಬೆಳಗಾವಿ: ಪ್ರತಿಬಾರಿ ವಿಧಾನ ಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ ನಡೆಸಿ ಸರ್ಕಾರ್ಕೆ ಸಡ್ಡು ಹೊಡೆಯುತ್ತಿದ್ದ ಎಂಇಎಸ್ ಪೌರುಷ ಈ ಬಾರಿ ಅಡಗಿದೆ.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಂಗಳವಾರ ಆಯೋಜಿಸಿದ್ದ ಮಹಾ ಮೇಳಾವ್‌ದಲ್ಲಿ ಈ ಬಾರಿ ಅತ್ಯುಗ್ರ ಭಾಷಣಗಳಿರಲಿಲ್ಲ. ಸರ್ಕಾರದ ವಿರುದ್ಧ ಟೀಕಾಸ್ತ್ರಗಳಿರಲಿಲ್ಲ. ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಜನರೇ ಇರಲಿಲ್ಲ. ಅದಕ್ಕಿಂತ ಮುಖ್ಯಮವಾಗಿ, ಮರಾಠಿಗರಿಗೆ ಆಗುತ್ತಿರುವ ಅನ್ಯಾಯಕ್ಕೆ ಮಹಾರಾಷ್ಟ್ರ ಸರ್ಕಾರಗಳೇ ಕಾರಣ ಎಂದು ರಾಗ ಬದಲಿಸಿದ್ದಾರೆ.
'ಕಳೆದ ಮಹಾಮೇಳಾವದಲ್ಲಿ ಎಂಇಎಸ್‌ನ ನಾಲ್ಕು ಜನ ಶಾಸಕರಿದ್ದರೆ, ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತೇವೆ' ಎನ್ನುವ ಉದ್ಧಟತನದ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ್ದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ ಈ ಸಲ ಸರ್ಕಾರದ ವಿರುದ್ಧ ಚಕಾರ ಎತ್ತಲಿಲ್ಲ. ಇದಕ್ಕೆ ಜಿಲ್ಲಾಡಳಿತ, ಪೊಲೀಸರ ಭಯವೇ ಕಾರಣ. ಭಾಷಣ ಮಾಡಿದವರೆಲ್ಲರೂ 58 ವರ್ಷಗಳಿಂದ ಅನುಭವಿಸುತ್ತಿರುವ ನೋವು, ಮರಾಠಿ ಜನರ ಒಗ್ಗಟ್ಟು, ಹೋರಾಟದ ಬಗ್ಗೆ ಮಾತ್ರ ಮಾತನಾಡಿದರೇ ವಿನಃ ಅಪ್ಪಿ ತಪ್ಪಿಯೂ ಸರ್ಕಾರದ ಬಗ್ಗೆ ಟೀಕೆ ಮಾಡಲಿಲ್ಲ. ಮಹಾರಾಷ್ಟ್ರದ ಯಾವುದೇ ಹಿರಿಯ ನಾಯಕರೂ ಬರಲಿಲ್ಲ. ಒಟ್ಟಾರೆ ಮಹಾಮೇಳಾವ ಎಂಬ ಮೆಗಾ ಶೋ ಠುಸ್ ಎಂದಿದೆ.
ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮ 11.30ಗಂಟೆಗೆ ಶುರುವಾಯಿತು. ಬೆರಳಣಿಕೆಯಷ್ಟೇ ಜನ ಭಾಗವಹಿಸಿದ್ದರು. ಬಂದವರಲ್ಲಿ ನೆರೆಯ ಮಹಾರಾಷ್ಟ್ರದ ಚಂದಗಡ, ಗಡಹಿಂಗ್ಲಜ ತಾಲೂಕಿನವರೇ ಹೆಚ್ಚು. ಸ್ಥಳೀಯ ಮರಾಠಿ ಭಾಷಿಕರು ಮಾತ್ರ ಇವರ ಉಸಾಬರಿಯೇ ಬೇಡಪ್ಪ ಎಂದು ಮೇಳಾವ್ ದಿಂದ ದೂರ ಉಳಿದಿದ್ದರು. ವ್ಯಾಕ್ಸಿನ್ ಡಿಪೋದಲ್ಲಿ ಹಾಕಿದ್ದ ಸಾಧಾರಣ ಪೆಂಡಾಲ್ ಸಹ ತುಂಬಿರಲಿಲ್ಲ. ಅಷ್ಟರ ಮಟ್ಟಿಗೆ ಜನರ ಕೊರತೆ ಎದ್ದು ಕಾಣುತ್ತಿತ್ತು. ಎಂಇಎಸ್ ನಾಯಕರು ಆಗಾಗ ದೂರದಲ್ಲಿದ್ದವರೆಲ್ಲಾ ಹತ್ತಿರ ಬಂದು ಕುಳಿತುಕೊಳ್ಳಿ ಎಂದು ಕೂಗುತ್ತಿದ್ದರೂ ಜನರ ಅತ್ತ ಸುಳಿಯಲಿಲ್ಲ. ಸಭೆಯೂ ತೀರ ಸಪ್ಪೆಯಾಗಿತ್ತು.
ಭಾಗವಹಿಸಿದ ಮಹಾ ಶಾಸಕರು
ಹಿಂದಿನ ಮಹಾಮೇಳಾವ್‌ದಲ್ಲಿ ಮಹಾರಾಷ್ಟ್ರ ಗೃಹ ಸಚಿವ ಆರ್‌ಆರ್ ಪಾಟೀಲ್, ಕೋಲ್ಹಾಪುರ, ಗಡ್‌ಹಿಂಗ್ಲಜ್, ಚಂದಗಡದ ಶಾಸಕರು, ಸಂಸದರು ಪಾಲ್ಗೊಂಡಿದ್ದರು. ಈ ಬಾರಿ ಮಹಾರಾಷ್ಟ್ರದ ಯಾವೊಬ್ಬ ಪ್ರತಿನಿಧಿ ಆಗಮಿಸಿರಲಿಲ್ಲ. ಮುಖ ಉಳಿಸಿಕೊಳ್ಳಲು ಎಂಇಎಸ್‌ನವರು ಕಾಡಿಬೇಡಿ ಚಂದಗಡದ ಮಾಜಿ ಶಾಸಕ ನರಸಿಂಗರಾವ್ ಪಾಟೀಲ್ ಹಾಗೂ ಕೊಲ್ಹಾಪುರದ ಶಿವಸೇನೆ ಮುಖಂಡರೊಬ್ಬರನ್ನು ಮಾತ್ರ ಕರೆದುಕೊಂಡು ಬಂದಿದ್ದರು.
ಇನ್ನು ಬೆಳಗಾವಿ ಮಾಜಿ ಮಹಾಪೌರ ವಿಜಯಮೋರೆ ಎಂಇಎಶ್ ಮುಖಂಡ ಕಿರಣ್ ಠಾಕೂರ್ ಸಮಾವೇಶದಿಂದ ದೂರು ಉಳಿದಿದ್ದರು.
ಠರಾವು, ಘೋಷಣೆಗೆ ಇಲ್ಲ ಚಪ್ಪಾಳೆ
ಸಮಾವೇಶದ ಅಂಗವಾಗಿ ಬೆಳಗಾವಿ ನಾಮಕರಣ ವಿರೋಧವೂ ಸೇರಿದಂತೆ ಮೂರು ಠರಾವು ಮಂಡಿಸಲಾಯಿತು. ಅದನ್ನು ಚಪ್ಪಾಳೆಯ ಮೂಲಕ ಅನುಮೋದಿಸಬೇಕೆಂಬ ಬೇಡಿಕೆಗೆ ಚಪ್ಪಾಳೆಯ ಸದ್ದೇ ಬರಲಿಲ್ಲ. ಮತ್ತೆ ಮತ್ತೆ ಮನವಿ ಮಾಡಿದಾಗ ಕೆಲವರು ಚಪ್ಪಾಳೆ ತಟ್ಟಿದರು. ಬೆಳಗಾವಿ, ನಿಪ್ಪಾಣಿ, ಬೀದರ್, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರವಾಗಬೇಕೆಂಬ ಘೋಷಣೆಗೂ ಧ್ವನಿ ಸಿಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


