ಜಿಲ್ಲಾ ಸುದ್ದಿ

ವರ್ಷಧಾರೆಗೆ ಏಳು ಬಲಿ

ಬರದ ಸುಳಿಗೆ ಸಿಲುಕಿದ್ದ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಕುಂಭ...

ವರ್ಷಧಾರೆಗೆ ಏಳು ಬಲಿ
Published On :

ರಾಯಚೂರು/ಗುಲ್ಬರ್ಗ: ಬರದ ಸುಳಿಗೆ ಸಿಲುಕಿದ್ದ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಕುಂಭ ದ್ರೋಣ ಮಳೆಗೆ ಇಬ್ಬರು ಬಾಲಕರು ಸೇರಿದಂತೆ ಏಳು ಮಂದಿ ಬಲಿಯಾಗಿದ್ದಾರೆ.

ಗುಲ್ಬರ್ಗ ಜಿಲ್ಲೆಯಲ್ಲಿ ನಾಲ್ವರು, ರಾಯಚೂರು ಜಿಲ್ಲೆಯಲ್ಲಿ ಇಬ್ಬರು, ಯಾದಗಿರಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಜಾನುವಾರುಗಳೂ ಜೀವ ಕಳೆದುಕೊಂಡಿವೆ. ನೂರಾರು ಮನೆಗಳು ಕುಸಿದಿವೆ. ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಳ್ಳಗಳು ತುಂಬಿ ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಗುಲ್ಬರ್ಗ ನಗರದ ಕಮಲಾನಗರದಲ್ಲಿ ಶಾಲೆಗೆ ಹೋಗಿದ್ದ ಬಾಲಕ ಮಹಾದೇವ ನೀರಿನಿಂದ ತುಂಬಿದ್ದ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಕಮಲಾಪುರು ಓಕಳಿ ಗ್ರಾಮದ ಹೊಲದಲ್ಲಿ ರೈತ ಸಿದ್ದಾರ್ಥ ರಾಮಪ್ಪ ಬಾವಿ ಹಾಗೂ ಹೊಲದಲ್ಲಿನ ವ್ಯತ್ಯಾಸ ಅರಿಯದೆ ಬಾವಿಯಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾರೆ.

ಚಿತ್ತಾಪುರ ತಾಲೂಕಿನ ಬೆಳಗುಂಪಾದಲ್ಲಿ ಮನೆ ಗೋಡೆ ಕುಸಿದು ಭಾಗ್ಯವಂತಿ ಚಂದ್ರಕಾಂತ ಸಾವನ್ನಪ್ಪಿದರೆ, ಚಿಂಚೋಳಿ ತಾಲೂಕಿನ ಪೋತಗಲನಲ್ಲಿ ಊರ ಹೊರಗಿರುವ ಹಳ್ಳಕ್ಕೆ ಏಕಾಏಕಿ ಪ್ರವಾಹ ಬಂದು ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಈತನ ಹೆಸರು, ವಿಳಾಸ ಪತ್ತೆಯಾಗಿಲ್ಲ.

ಧಾರಾಕಾರ ಮಳೆಗೆ ರಾಯಚೂರಿನ ಮಕ್ತಲ್ ಪೇಟೆಯಲ್ಲಿ ಮನೆ ಚಾವಣಿಯ ಸಿಮೆಂಟ್ ಹೊದಿಕೆ ಕುಸಿದು ಸಾಗರ(12) ಎಂಬ ಬಾಲಕ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ದೇವದುರ್ಗ ತಾಲೂಕಿನ ಗೂಗಲ್ ಬಳಿ ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದ ರಾಯಚೂರು ತಾಲೂಕಿನ ಯರಮರಸ್ ಮೂಲದ ಶರಣ ಬಸವ(38) ಎಂಬಾತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಮನೆ ಕುಸಿದು ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ತುಮಕೂರ ಗ್ರಾಮದ ನರಸಮ್ಮ ಲಗಮಣ್ಣ ಅಂಗಡಿ(40) ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಶುಕ್ರವಾರ ಸಂಜೆ ಅಡುಗೆ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ.

ಗುಲ್ಬರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಶನಿವಾರ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಾರ್ಯಗಳ ಕುರಿತು ಚರ್ಚಿಸಿದರು. ರಾಯಚೂರಿನ 7 ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.