ಜಿಲ್ಲಾ ಸುದ್ದಿ

ಕೆಂಪೇಗೌಡ ನಗರ ಉದ್ವಿಗ್ನ

ಕೆಂಪೇಗೌಡ ನಗರದ ಲಕ್ಷ್ಮಿಪುರದಲ್ಲಿ ಪೊಲೀಸ್ ಕಿರುಕುಳ ತಾಳದೆ ಯುವಕನೊಬ್ಬ ಆತ್ಮಹತ್ಯೆ...

ಕೆಂಪೇಗೌಡ ನಗರ ಉದ್ವಿಗ್ನ
Published On :

ಬೆಂಗಳೂರು: ಕೆಂಪೇಗೌಡ ನಗರದ ಲಕ್ಷ್ಮಿಪುರದಲ್ಲಿ ಪೊಲೀಸ್ ಕಿರುಕುಳ ತಾಳದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರದೇಶದಲ್ಲಿ ಶನಿವಾರ ರಾತ್ರಿ ಉದ್ವಿಗ್ನ ವಾತಾವರಣ ಉಂಟಾಗಿದೆ. ರೊಚ್ಚಿಗೆದ್ದ ಪ್ರತಿಭಟನಾಕಾರರು ಪೊಲೀಸ್ ವಾಹನ ಚೀತಾಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಸ್ಥಳದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಗವಿಗಂಗಾಧರೇಶ್ವರ ದೇವಸ್ಥಾನ ಸಮೀಪದ ಲಕ್ಷ್ಮೀಪುರ 4ನೇ ಕ್ರಾಸ್ ನಿವಾಸಿ ಪ್ರದೀಪ್(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ವೇಳೆಗೆ ಘಟನೆ ಬೆಳಕಿಗೆ ಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ದಿನ ರಾತ್ರಿ ಪ್ರದೀಪ್‌ನನ್ನು ಠಾಣೆಯಲ್ಲಿ ಇಟ್ಟುಕೊಂಡು ಕಿರುಕುಳ ನೀಡಿದ್ದಾರೆ, ನಂತರ ರು.15 ಸಾವಿರ ಹಣ ಪಡೆದು ಆತನನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿ ಮೃತನ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.

ಘಟನೆಯ ವಿವರ:
ಪುಟ್ಟಸ್ವಾಮಿ ಎಂಬುವವರ ಬಳಿ ಪ್ರದೀಪ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆಗಸ್ಟ್ 20ರಂದು ರಾತ್ರಿ ಮದ್ಯಸೇವಿಸಿ ಬಂದಿದ್ದ ಆತ, ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಮಹಿಳೆಯ ಮನೆ ಬಾಗಿಲು ತಟ್ಟಿದ್ದಾನೆ. ಆಕೆ ಬಾಗಿಲು ತೆರೆಯಲು ನಿರಾಕರಿಸಿದ ಕಾರಣ ರಸ್ತೆಯಲ್ಲೇ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಬಹಿರಂಗವಾಗಿ ಕೂಗಾಡಿದ್ದಾನೆ.

ಅಷ್ಟರಲ್ಲಿ ಆ ಮಹಿಳೆ ತನ್ನ ಪತಿಗೆ ಕರೆ ಮಾಡಿ ವಿಷಯ ಹೇಳಿ ಮನೆಗೆ ಬರುವಂತೆ ತಿಳಿಸಿದ್ದಾಳೆ. ನಂತರ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ, ಆತನ ವರ್ತನೆಯಿಂದ ತಮಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.

ಶಂಕರೇಗೌಡ ಎಂಬ ಪೊಲೀಸ್ ಪೇದೆ ಸ್ಥಳಕ್ಕಾಗಮಿಸಿ ಗಲಾಟೆ ಮಾಡುತ್ತಿದ್ದ ಪ್ರದೀಪ್‌ನನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಪ್ರದೀಪ್ ಪೇದೆ ಕೊರಳಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ. ನಂತರ ಮಾತಿನ ಚಕಮಕಿ ನಡೆದು, ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಮಾರ್ಗಮಧ್ಯದಲ್ಲಿ ಬೈಕ್‌ನಲ್ಲಿ ಕುಳಿತಿದ್ದ ಪ್ರದೀಪ್, ಪೇದೆಯನ್ನು ತಳ್ಳಿ ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ. ಆತನನ್ನು ಬಂಧಿಸಿ ವೈದ್ಯ ಪರೀಕ್ಷೆಗೊಳಪಡಿಸಿದ ಪೊಲೀಸರು, ನಿಂದನೆಗೊಳಗಾದ ಮಹಿಳೆಯಿಂದ ದೂರು ಸ್ವೀಕರಿಸಿದ್ದರು. ಸುದ್ದಿ ತಿಳಿದು ಅಲ್ಲಿಗೆ ಬಂದ ಆತನ ತಂದೆ ಈರಣ್ಣ, ಮಗನ ವರ್ತನೆಯಿಂದ ಬೇಸತ್ತಿದ್ದು, ಜೈಲಿಗೆ ಕಳುಹಿಸುವಂತೆ ತಿಳಿಸಿದ್ದಾರೆ. ನಂತರ ಆತನ ಸ್ನೇಹಿತರು ಬಿಡುಗಡೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಆ.22ರಂದು ಬಾಡಿಗೆದಾರರು ದೂರು ಹಿಂಪಡೆದು ರಾಜಿ ಮಾಡಿಕೊಳ್ಳುವುದಾಗಿ ಹೇಳಿದ ನಂತರ ಪೊಲೀಸರು ಪ್ರದೀಪ್‌ನನ್ನು ಬಿಡುಗಡೆ ಮಾಡಿದ್ದಾರೆ. ಮನೆಗೆ ಬಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಘಟನೆಯಿಂದ ಸುಮಾರು ಮೂರು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆದಿದ್ದು, ಸ್ಥಳೀಯರು ಪೊಲೀಸರ ವಿರುದ್ಧ ಹರಿಹಾಯ್ದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಅಮಾನತು
ದೂರು ನೀಡಿದ ನಂತರವೂ ಪ್ರದೀಪ್‌ನನ್ನು 3 ದಿನ ಅಕ್ರಮವಾಗಿಟ್ಟುಕೊಂಡು ಹಣ ಪಡೆದ ಆರೋಪದ ಮೇಲೆ ಕೆಂಪೇಗೌಡ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಡಿ ನಾಗರಾಜು ಅವರನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಲು ಸೂಚಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಬಿಗಿ ಭದ್ರತೆ ನಡುವೆ ಪ್ರದೀಪ್ ಅಂತ್ಯಕ್ರಿಯೆ
ಈ ನಡುವೆ ಮೃತ ಪ್ರದೀಪ್‌ನ ಮರಣೋತ್ತರ ಪರೀಕ್ಷೆಯನ್ನು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಯಿತು. ನಂತರ ಪ್ರದೀಪ್ ಮೃತದೇಹವನ್ನು ಲಕ್ಷ್ಮೀಪುರಂಗೆ ಒಯ್ಯದೇ ನೇರವಾಗಿ ಚಾಮರಾಜಪೇಟೆಯಲ್ಲಿರುವ ಚಿತಾಗಾರಕ್ಕೆ ಕೊಂಡೊಯ್ದು ಅಂತಿಮ ವಿಧಾನವನ್ನು ನೆರವೇರಿಸಲಾಗಿದೆ.

ಮೃತದೇಹವನ್ನು ಲಕ್ಷ್ಮೀಪುರಂಗೆ ಕೊಂಡೊಯ್ದರೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಮತ್ತೆ ಕಾನೂನು ಸುವ್ಯವಸ್ಥೆ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ಚಾಮರಾಜಪೇಟೆ ಚಿತಾಗಾರಕ್ಕೆ ಕೊಂಡೊಯ್ಯಲಾಗಿದೆ. ಚಾಮರಾಜಪೇಟೆ ಚಿತಾಗಾರದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕುಟುಂಬಸ್ಥರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಅಂತಿಮ ವಿಧಾನಕಾರ್ಯ ನೆರವೇರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.