ಪರಿಸರ ಕಾಳಜಿ ಕಲ್ಯಾಣಿಯಲ್ಲೇ ಲೀನ
ಗಣೇಶ ಚೌತಿ ಸಮಯದಲ್ಲಿ ಬಿಬಿಎಂಪಿ ಹಾಗೂ ಬಿಡಿಎ ವಹಿಸುವ ಪರಿಸರ ಕಾಳಜಿ, ವಿಸರ್ಜನೆ..

-ಕಾರ್ತಿಕ್ ಭಟ್
ಬೆಂಗಳೂರು: ಗಣೇಶ ಚೌತಿ ಸಮಯದಲ್ಲಿ ಬಿಬಿಎಂಪಿ ಹಾಗೂ ಬಿಡಿಎ ವಹಿಸುವ ಪರಿಸರ ಕಾಳಜಿ, ವಿಸರ್ಜನೆಯಾಗುವ ಮೂರ್ತಿಗಳೊಂದಿಗೆ ಕೆರೆಯಲ್ಲೇ ಲೀನವಾಗುತ್ತಿದೆ. ಆದ್ದರಿಂದ ನಗರದ ಕೆರೆಗಳು ಮತ್ತಷ್ಟು ವಿಷಕಾರಕವಾಗುತ್ತಿವೆ.
ಪ್ರತಿವರ್ಷ ಕೆರೆ ಪಕ್ಕ ನಿರ್ಮಿಸುವ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ವಿಜೃಂಭಣೆಯಿಂದ ನಡೆಯುತ್ತದೆ. ಮೂರ್ತಿ ವಿಸರ್ಜನೆ ವಿಜೃಂಭಣೆಯಿಂದ ನಡೆಯುತ್ತದೆ. ಮೂರ್ತಿ ವಿಸರ್ಜನೆಗೆ ಸಿದ್ಧತೆ ನಡೆಸುವ ಬಿಬಿಎಂಪಿ ಹಾಗೂ ಬಿಡಿಎ, ತನ್ನ ವ್ಯಾಪ್ತಿಯ ಕೆರೆ ಆವರಣದಲ್ಲೇ ಇರುವ ಕಲ್ಯಾಣಿಗಳಿಗೆ ಹೊಸ ನೀರು ತುಂಬಿಸಿ ಗಣೇಶ್ ವಿಸರ್ಜನೆಗೆ ಸಿದ್ಧಪಡಿಸಲಾಗುತ್ತದೆ. ಆದರೆ ಹಬ್ಬ ಮುಗಿದರೆ ಸಾಕು, ಕೆರೆ ಬಗೆಗಿನ ಕಾಳಜಿ ಮೂರ್ತಿಯೊಂದಿಗೆ ವಿಸರ್ಜನೆಯಾಗುತ್ತಿದೆ.
ಮೂರ್ತಿ ಅವಶೇಷಗಳನ್ನು ವಿಷಕಾರಕ ಬಣ್ಣಗಳೊಂದಿಗೆ ಅಲ್ಲೇ ಬಿಡುವುದರಿಂದ ಕೆರೆಗಳು ಇನ್ನಷ್ಟು ವಿಷಯುಕ್ತವಾಗುತ್ತಿವೆ. ನಗರದ 191 ಕೆರೆಗಳಲ್ಲಿ ಬಿಬಿಎಂಪಿ 59, ಬಿಡಿಎ 123 ಕೆರೆ ಅಭಿವೃದ್ಧಿ ಪ್ರಾಧಿಕಾರ 4 ಹಾಗೂ ಅರಣ್ಯ ಇಲಾಖೆ 5 ಕೆರೆಗಳನ್ನು ನಿರ್ವಹಿಸುತ್ತಿವೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮೂರ್ತಿ ವಿಸರ್ಜನೆಗೆ ಕೆರೆಗಳ ಬಳಿ ಕಲ್ಯಾಣಿ ನಿರ್ಮಿಸಲಾಗುತ್ತದೆ.
ಹಬ್ಬ ಮುಗಿದ ಮೂರನೇ ದಿನವೇ ಕೆರೆ ನಿರ್ವಹಿಸುವ ಸಂಸ್ಥೆ, ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು. ಆಯಾ ವಾರ್ಡ್ ಅಧಿಕಾರಿಗಳೇ ಕಲ್ಯಾಣಿ ಶುಚಿ ಮಾಡುವ ಹೊಣೆವಹಿಸಿಕೊಳ್ಳಬೇಕು. ಆದರೆ ಯಾರೂ ಇದನ್ನು ನಿರ್ವಹಿಸುತ್ತಿಲ್ಲ. ಮೇಲುಸ್ತುವಾರಿಯೂ ಇಲ್ಲ. ಪ್ರತಿ ವರ್ಷದ ಹಬ್ಬಕ್ಕೆ ಮುನ್ನ ಕಲ್ಯಾಣಿಗಳನ್ನು ಶುಚಿಯಾಗಿಟ್ಟುಕೊಳ್ಳಿ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಾಲಿನ ನಿಯಂತ್ರಣ ಮಂಡಳಿ ಬಿಬಿಎಂಪಿಗೆ ಸೂಚಿಸುತ್ತದೆ. ಹಬ್ಬದ ಮುನ್ನ ತೋರುವ ಉತ್ಸಾಹ ಹಬ್ಬದ ನಂತರ ಇರುವುದಿಲ್ಲ.
ಇತ್ತೀಚೆಗೆ ತಲಘಟ್ಟಪುರ ಹಾಗೂ ಮಲ್ಲತಹಳ್ಳಿ ಕೆರೆಯಲ್ಲಿ ಕಂಡುಬಂದ ಮೂರ್ತಿಗಳ ತ್ಯಾಜ್ಯ ಹಾಗೂ ಹೆಬ್ಬಾಳ ಕೆರೆ ಕಲ್ಯಾಣಿಗಳ ಅಶುಚಿತ್ವದ ಬಗ್ಗೆ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರುಗಳು ಸಲ್ಲಿಕೆಯಾಗಿವೆ. 2013ರ ನವೆಂಬರ್ನಲ್ಲಿ ಪ್ರಾಧಿಕಾರಕ್ಕೆ ಸಲ್ಲಿಕೆಯಾದ ದೂರಿನ ಪ್ರಕಾರ, ಕಳೆದ ವರ್ಷ ಹಬ್ಬ ಮುಗಿದು ತಿಂಗಳು ಕಳೆದಿದ್ದರೂ ಹೆಬ್ಬಾಳ ಕೆರೆ ಶುಚಿಗೊಂಡಿರಲಿಲ್ಲ.
ತ್ಯಾಜ್ಯ ವಿಷ
ಕೆರೆಗಳಿಗೆ ಅಂಟಿಕೊಂಡಂತೆ ಕಲ್ಯಾಣಿಗಳಿರುವುದರಿಂದ ಮೂರ್ತಿಗಳ ತ್ಯಾಜ್ಯ ಸುಲಭವಾಗಿ ಕೆರೆ ಸೇರುತ್ತದೆ. ವಿಷದ್ರವ ಮಣ್ಣಿನಲ್ಲೇ ಇಂಗಿ ಅಂತರ್ಜಲ ಸೇರುತ್ತದೆ. ಹೂಳು ತೆಗೆಯುವುದರಿಂದ ಪಕ್ಕದ ಕೆರೆಯಲ್ಲಿ ಹಾಗೂ ಮಣ್ಣಿನಲ್ಲಿ ಸೀಸದ ಪ್ರಮಾಣ ಹೆಚ್ಚುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ನ ಮೂರ್ತಿಗಳು ಹೆಚ್ಚು ವಿಸರ್ಜನೆಯಾಗುವುದಿರಂದ ಮಾಡಿದ್ದರೆ, ಸೀಸದ ಪ್ರಮಾಣ ಹೆಚ್ಚಾಗಿ ಕೆರೆ ಸೇರುತ್ತಿದೆ.
ಮೂರ್ತಿಗಳಿಗೆ ಬಳಸುವ ಬಣ್ಣದಲ್ಲಿ ಸೀಸದ ಅಂಶ ಹೆಚ್ಚಿರುತ್ತದೆ. ಸೀಸದ ಅಂಶವಿರುವ ನೀರನ್ನು ಜಾನುವಾರುಗಳು ಕುಡಿದರೆ, ಪರೋಕ್ಷವಾಗಿ ಮಾನವರ ದೇಹ ಸೇರುತ್ತದೆ. ಮೂರ್ತಿ ವಿಸರ್ಜಿಸಿದ ನಂತರ ಶೀಘ್ರದಲ್ಲಿ ಕೆರೆ ಅಥವಾ ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು.
-ಡಾ.ಎ.ಎನ್.ಯಲ್ಲಪ್ಪರೆಡ್ಡಿ, ಪರಿಸರವಾದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


