ಕ್ರಿಕೆಟ್

'ಭಾರತ ಕೂಡ ಐರ್ಲೆಂಡ್ ವಿರುದ್ಧ ಸೋತಿದೆ, ಹಾಗೆಂದ ಮಾತ್ರಕ್ಕೆ..': ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ಸಂಕಷ್ಟ ಕುರಿತು PCB ಮುಖ್ಯಸ್ಥ ಮೊಹ್ಸಿನ್ ನಖ್ವಿ

ತಮ್ಮ ಅಧಿಕಾರಾವಧಿಯಲ್ಲಿನ ವಿಫಲ ಕುರಿತಾದ ಟೀಕೆಗಳನ್ನು ಒಪ್ಪದ ನಖ್ವಿ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಸಾಧಿಸಿರುವ ಪ್ರಗತಿಯ ಮೇಲೆ ಇತ್ತೀಚಿನ ಟೆಸ್ಟ್ ಸೋಲುಗಳು ಕರಿನೆರಳು ಬೀರಬಾರದು ಎಂದರು.

'ಭಾರತ ಕೂಡ ಐರ್ಲೆಂಡ್ ವಿರುದ್ಧ ಸೋತಿದೆ, ಹಾಗೆಂದ ಮಾತ್ರಕ್ಕೆ..': ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ಸಂಕಷ್ಟ ಕುರಿತು PCB ಮುಖ್ಯಸ್ಥ ಮೊಹ್ಸಿನ್ ನಖ್ವಿ
PCB ಮುಖ್ಯಸ್ಥ ಮೊಹ್ಸಿನ್ ನಖ್ವಿ
Published On :

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ, ಪಾಕಿಸ್ತಾನ ಕ್ರಿಕೆಟ್ ವಿರುದ್ಧ ಕೇಳಿಬರುತ್ತಿರುವ ಟೀಕೆಗಳ ನಡುವೆ ತಮ್ಮ ತಂಡವನ್ನು ಸಮರ್ಥಿಸಿಕೊಳ್ಳಲು ಐರ್ಲೆಂಡ್ ವಿರುದ್ಧ ಭಾರತ ಅನುಭವಿಸಿದ ಆಘಾತಕಾರಿ ಸೋಲನ್ನು ಉಲ್ಲೇಖಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವು ಎರಡು ಪಂದ್ಯಗಳನ್ನು ಸೋತಿದೆ; ಈ ಸೋಲಿನ ನಂತರ, ಮಂಡಳಿಯು 7 ಆಟಗಾರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದ್ದಲ್ಲದೆ, ಟೆಸ್ಟ್ ತಂಡದ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ಕೂಡ ಬಿಡುಗಡೆ ಮಾಡಿದೆ.

ಪಾಕಿಸ್ತಾನ ಕ್ರಿಕೆಟ್ ಸದ್ಯ ಕಠಿಣ ಹಂತವನ್ನು ಎದುರಿಸುತ್ತಿದೆ ಎಂಬುದನ್ನು ಒಪ್ಪಿಕೊಂಡ ನಖ್ವಿ, ಇಂತಹ ಫಲಿತಾಂಶಗಳು ಸಾಮಾನ್ಯವಲ್ಲ. ದೊಡ್ಡ ತಂಡಗಳು ಕೂಡ ಅನಿರೀಕ್ಷಿತ ಸೋಲುಗಳನ್ನು ಅನುಭವಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿ, ಐರ್ಲೆಂಡ್ ವಿರುದ್ಧ ಭಾರತದ ಸೋಲು ಮತ್ತು ನಮೀಬಿಯಾ ವಿರುದ್ಧ ದಕ್ಷಿಣ ಆಫ್ರಿಕಾದ ಸೋಲನ್ನು ಅವರು ಪ್ರಸ್ತಾಪಿಸಿದರು.

'ನಾನು ನಿಮಗೆ ಒಂದು ವಿಷಯ ಕೇಳುತ್ತೇನೆ: ದಕ್ಷಿಣ ಆಫ್ರಿಕಾ ತಂಡವು ನಮೀಬಿಯಾ ವಿರುದ್ಧ ಮತ್ತು ಭಾರತ ತಂಡವು ಐರ್ಲೆಂಡ್ ವಿರುದ್ಧ ಸೋತವು. ಹಾಗೆಂದ ಮಾತ್ರಕ್ಕೆ ಅಲ್ಲಿಗೆ ಕ್ರಿಕೆಟ್ ಅಂತ್ಯಗೊಂಡಿತೇ? ಹೌದು, ಒಂದು ವಿಷಯ ಮುಖ್ಯ: ನಮಗೆ ಇಲ್ಲಿ ಯಾರ ಅಗತ್ಯವಿದೆಯೋ ಅವರನ್ನು ನಾವು ಖಂಡಿತವಾಗಿಯೂ ತಂಡಕ್ಕೆ ಕರೆತರುತ್ತೇವೆ. ಯಾರಾದರೂ ನಿರೀಕ್ಷಿತ ಮಟ್ಟದಲ್ಲಿ ಆಡದಿದ್ದರೆ ಅಥವಾ ಉತ್ತಮ ಪ್ರದರ್ಶನ ನೀಡದಿದ್ದರೆ, ನಾವೇನು ​​ಮಾಡಲು ಸಾಧ್ಯ? ನಮಗೆ ಪ್ರತಿಯೊಂದು ಪಂದ್ಯವೂ ಮತ್ತು ಪ್ರತಿಯೊಂದು ಸರಣಿಯೂ ಮುಖ್ಯ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ನಖ್ವಿ ಹೇಳಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿನ ವಿಫಲ ಕುರಿತಾದ ಟೀಕೆಗಳನ್ನು ಒಪ್ಪದ ನಖ್ವಿ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಸಾಧಿಸಿರುವ ಪ್ರಗತಿಯ ಮೇಲೆ ಇತ್ತೀಚಿನ ಟೆಸ್ಟ್ ಸೋಲುಗಳು ಕರಿನೆರಳು ಬೀರಬಾರದು ಎಂದು ಅವರು ಪ್ರತಿಪಾದಿಸಿದರು.

'ಹೌದು, ಖಂಡಿತವಾಗಿಯೂ, ಟೆಸ್ಟ್ ಪಂದ್ಯದಲ್ಲಿ ನಡೆದಿದ್ದನ್ನು ತಪ್ಪೆಂದು ಹೇಳಲಾಗುವುದಿಲ್ಲ. ನಾವು ಈ ಎರಡು ಪಂದ್ಯಗಳನ್ನು ಸೋತಿದ್ದೇವೆ. ಆದರೆ, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ನಾವು ಸಾಧಿಸಿದಂತೆಯೇ, ಮುಂದಿನ ದಿನಗಳಲ್ಲಿಯೂ ದೇವರ ದಯೆಯಿಂದ ನಾವು ಪ್ರಗತಿ ಸಾಧಿಸುತ್ತೇವೆ ಎಂದು ನಾನು ನಂಬುತ್ತೇನೆ. ನಾನು ಎಂದಿಗೂ ಟೀಕೆಗೆ ಹೆದರಿಲ್ಲ ಮತ್ತು ಮುಂದೆಯೂ ಹೆದರುವುದಿಲ್ಲ' ಎಂದರು.

'ನಾನು ಬಂದಾಗಿನಿಂದ ಕ್ರಿಕೆಟ್ ಹಾಳಾಗಿದೆ ಎಂದು ಹೇಳುವವರು, ನಮ್ಮ ಕೋಚಿಂಗ್ ತಂಡವನ್ನು ಕರೆತರುವ ಮೊದಲು ಶ್ರೇಯಾಂಕಗಳು ಹೇಗಿದ್ದವು ಎಂಬುದನ್ನು ಒಮ್ಮೆ ನೋಡಲಿ. ಏಕದಿನ ಪಂದ್ಯಗಳಲ್ಲಿ ನಾವು ಎಂಟನೇ ಸ್ಥಾನದಲ್ಲಿದ್ದೆವು, ಈಗ ಐದನೇ ಸ್ಥಾನದಲ್ಲಿದ್ದೇವೆ; ಹಾಗೆಯೇ ಟಿ20 ಪಂದ್ಯಗಳಲ್ಲಿ ಒಂಬತ್ತನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿದ್ದೇವೆ' ಎಂದು ನಖ್ವಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.