T20 World Cup 2026: ಭಾರತ ವಿರುದ್ಧದ ಪಂದ್ಯ ಬಹಿಷ್ಕಾರದಲ್ಲಿ ಏಕಾಂಗಿಯಾದ PCB; ಪಾಕ್‌ಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಎಚ್ಚರಿಕೆ!
ಟಿ20 ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ಭಾರತದೊಂದಿಗೆ ಆಡದಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಎಮಿರೇಟ್ಸ್ ಮಂಡಳಿಯು ಪಿಸಿಬಿಗೆ ಇಮೇಲ್ ಕಳುಹಿಸಿದೆ ಎಂದು ವರದಿಯಾಗಿದೆ.

ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026ರ ಗುಂಪು ಪಂದ್ಯದಲ್ಲಿ ಭಾರತದ ವಿರುದ್ಧ ಆಡದಿರಲು ನಿರ್ಧರಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ನಿಲುವಿನಿಂದ ಯೂ-ಟರ್ನ್ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಇದೀಗ ಪಿಸಿಬಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕಾರಿಗಳನ್ನು ಒಳಗೊಂಡಂತೆ ಲಾಹೋರ್‌ನಲ್ಲಿ ನಡೆದ ನಿರ್ಣಾಯಕ ಸಭೆಯ ನಂತರ ಈ ಪಂದ್ಯವು ಮತ್ತೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, 'ಭಾರತದ ಪಂದ್ಯವನ್ನು ಬಹಿಷ್ಕರಿಸುವ' ನಿಲುವಿನ ಕುರಿತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯಿಂದ ಇಮೇಲ್ ಬಂದಿದ್ದು, ಪಾಕಿಸ್ತಾನ ಮತ್ತಷ್ಟು ಒತ್ತಡಕ್ಕೆ ಒಳಗಾಗಿದೆ ಎಂದು ತಿಳಿದುಬಂದಿದೆ.
ಟಿ20 ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ಭಾರತದೊಂದಿಗೆ ಆಡದಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಎಮಿರೇಟ್ಸ್ ಮಂಡಳಿಯು ಪಿಸಿಬಿಗೆ ಇಮೇಲ್ ಕಳುಹಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಟಿ20 ವಿಶ್ವಕಪ್‌ನ ಗ್ರೂಪ್ ಎನಲ್ಲಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಘರ್ಷಣೆ ನಡೆಯದಿದ್ದರೆ ವ್ಯಾಪಕ ಆರ್ಥಿಕ ಪರಿಣಾಮ ಬೀರುತ್ತದೆ ಎಂದು ಎಮಿರೇಟ್ಸ್ ಮಂಡಳಿಯು ಎಚ್ಚರಿಕೆ ನೀಡಿದೆ.
'ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಪಾಕಿಸ್ತಾನದೊಂದಿಗೆ ದೀರ್ಘಕಾಲದ ಬಾಂಧವ್ಯವನ್ನು ಹೊಂದಿದೆ ಮತ್ತು ಹಿಂದೆ ನಾವು ನಮ್ಮ ಸ್ಥಳಗಳನ್ನು ನೀಡುವ ಮೂಲಕ ಮತ್ತು ಅವರ ಕ್ರಿಕೆಟ್ ಅನ್ನು ಆಯೋಜಿಸುವ ಮೂಲಕ ಪಾಕಿಸ್ತಾನಕ್ಕೆ ಅವಕಾಶ ಕಲ್ಪಿಸಿದ್ದೇವೆ' ಎಂದು ಪಿಸಿಬಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
'ಭಾರತದ ವಿರುದ್ಧ WCT20 ಪಂದ್ಯವನ್ನು ಆಡದಿರುವ ಪಾಕಿಸ್ತಾನದ ಇತ್ತೀಚಿನ ನಿರ್ಧಾರವು ಆಟಕ್ಕೆ ಹಾನಿ ಮಾಡುತ್ತದೆ ಮತ್ತು ಹೆಚ್ಚಿನ ಸದಸ್ಯ ರಾಷ್ಟ್ರಗಳು, ವಿಶೇಷವಾಗಿ ಅಸೋಸಿಯೇಟ್ಸ್ ಆರ್ಥಿಕವಾಗಿ ತೊಂದರೆ ಅನುಭವಿಸುತ್ತದೆ. ಕುಟುಂಬದ ಸದಸ್ಯರಾಗಿ ನಾವು PCB ತನ್ನ ನಿರ್ಧಾರವನ್ನು ಮರುಪರಿಶೀಲಿಸಿ, ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳುವಂತೆ ವಿನಂತಿಸುತ್ತೇವೆ' ಎಂದು ಪತ್ರದಲ್ಲಿ ಸೇರಿಸಲಾಗಿದೆ.
ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಬಾಶ್ಶೀರ್ ಉಸ್ಮಾನಿ ಅವರಿಗೆ ಶಾಂತಿ ಸ್ಥಾಪನೆಯ ಪಾತ್ರವನ್ನು ವಹಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಜೊತೆಗೆ ನಿನ್ನೆ ಲಾಹೋರ್ ಸಭೆಯಲ್ಲಿದ್ದ ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜಾ ಅವರಿಗೂ ವಹಿಸಲಾಗಿದೆ.
ಲಾಹೋರ್‌ನಲ್ಲಿ ಸಭೆ
ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜಾ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಬಿಸಿಬಿ ಅಧ್ಯಕ್ಷ ಅಮೀನುಲ್ ಇಸ್ಲಾಂ ನೇತೃತ್ವದ ಐಸಿಸಿ ನಿಯೋಗವು ಭಾನುವಾರ ಲಾಹೋರ್‌ನಲ್ಲಿ ಸಭೆ ಸೇರಿ ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರದ ಬಗ್ಗೆ ಚರ್ಚಿಸಿತು.
ಸುದೀರ್ಘ ಮಾತುಕತೆಗಳು ಮುಕ್ತಾಯಗೊಂಡಿವೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. ಇಮ್ರಾನ್ ಖವಾಜಾ, ಮೊಹ್ಸಿನ್ ನಖ್ವಿ ಮತ್ತು ಅಮೀನುಲ್ ಇಸ್ಲಾಂ ನಡುವೆ ಮಾರ್ಗಸೂಚಿಯನ್ನು ಅಂತಿಮಗೊಳಿಸುವುದರೊಂದಿಗೆ, 'ಮುಂದಿನ ಕೆಲವು ಗಂಟೆಗಳಲ್ಲಿ' ಪರಸ್ಪರ ಸಮಾಲೋಚನೆಯ ಮೂಲಕ ವಿವಾದ ಬಗೆಹರಿಯುವ ನಿರೀಕ್ಷೆಯಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



