ತಂಡಕ್ಕೆ ತಕ್ಕಂತೆ ICC ನಿಯಮ ಬದಲಾಗುತ್ತಾ? India ಹಿಡಿದ ಕ್ಯಾಚ್ ನಾಟೌಟ್, ಅದೇ Pak ಹಿಡಿದರೇ ಔಟ್; video!
ಟಿ20 ವಿಶ್ವಕಪ್ನ ಮೊದಲ ಪಂದ್ಯವೇ ವಿವಾದಕ್ಕೀಡಾಗಿದೆ. ಐಸಿಸಿ ನಿಯಮ ಕಾರಣಕ್ಕೆ ವಿವಾದ ಸೃಷ್ಟಿಯಾಗಿದೆ.

ಪುರುಷರ ಟಿ20 ವಿಶ್ವಕಪ್ 2026 ಪಂದ್ಯಾವಳಿ ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಿದೆ. ಮೊದಲ ಪಂದ್ಯದಲ್ಲೇ ಪಾಕಿಸ್ತಾನ ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್ನ ಮೊದಲ ಪಂದ್ಯವೇ ವಿವಾದಕ್ಕೀಡಾಗಿದೆ. ಐಸಿಸಿ ನಿಯಮ ಕಾರಣಕ್ಕೆ ವಿವಾದ ಸೃಷ್ಟಿಯಾಗಿದೆ. ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ ಒಟ್ಟಾಗಿ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಗ್ರೂಪ್ ಎ ಪಂದ್ಯದಲ್ಲಿ ರಿಲೇ ಕ್ಯಾಚ್ ಹಿಡಿದರು. ನೆದರ್‌ಲ್ಯಾಂಡ್ಸ್‌ನ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಮೊಹಮ್ಮದ್ ನವಾಜ್ ಎಸೆತವನ್ನು ಲೆವಿಟ್ ಭರ್ಜರಿಯಾಗಿ ಹೊಡೆದರು. ಚೆಂಡು ಬೌಂಡರಿ ಗೆರೆಯನ್ನು ದಾಟಿದಂತೆ ತೋರುತ್ತಿತ್ತು. ಆದರೆ ಲಾಂಗ್-ಆಫ್ ನಲ್ಲಿದ್ದ ಬಾಬರ್ ಅಜಮ್ ಓಡಿ ಎರಡೂ ಕೈಗಳಿಂದ ಚೆಂಡನ್ನು ಗಾಳಿಯಲ್ಲಿ ಮಧ್ಯದಲ್ಲಿ ಹಿಡಿದರು. ಆದರೆ ಚೆಂಡಿನೊಂದಿಗೆ ಬೌಂಡರಿ ಗೆರೆ ದಾಟುತ್ತೇನೆಂದು ಭಾವಿಸಿ ಬಾಬರ್ ಬುದ್ಧಿವಂತಿಕೆ ಪ್ರದರ್ಶಿಸಿ ಚೆಂಡನ್ನು ಬೌಂಡರಿ ಗೆರೆ ತಲುಪುವ ಮೊದಲೇ ಅದನ್ನು ಮತ್ತೆ ಮೈದಾನಕ್ಕೆ ಎಸೆದರು.
ಹತ್ತಿರದಲ್ಲಿದ್ದ ಶಾಹೀನ್ ಅಫ್ರಿದಿ ಚೆಂಡನ್ನು ಹಿಡಿದರು. ಈ ರಿಲೇ ಪ್ರಯತ್ನವು ಲೆವಿಟ್ ಅವರ 15 ಎಸೆತಗಳಲ್ಲಿ 24 ರನ್ ಗಳಿಸಿದ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿತು. ಆದರೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಇತ್ತೀಚೆಗೆ ರಿಲೇ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಐಸಿಸಿ ರಿಲೇ ಕ್ಯಾಚ್ ನಿಯಮ 19.5.2 ಪ್ರಕಾರ, ರಿಲೇ ಕ್ಯಾಚ್ ಹಿಡಿದಾಗ ಬೌಂಡರಿ ಲೈನ್ ದಾಟಿದ ಫೀಲ್ಡರ್ ತನ್ನ ಸಹ ಆಟಗಾರನಿಗೆ ಎಸೆದ ಚೆಂಡು ಹಿಡಿಯುವ ಮೊದಲೇ ಮೈದಾನದ ಒಳಕ್ಕೆ ಬರಬೇಕು. ಆಗ ಮಾತ್ರ ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ. ಈ ನಿಯಮವು ಜೂನ್ ತಿಂಗಳಿಂದಲೇ ಜಾರಿಯಲ್ಲಿದೆ.
ಹೀಗಾಗಿ ಕಳೆದ ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎ ವಿರುದ್ಧ ಭಾರತ ಎ ತಂಡದ ಆಟಗಾರ ನೆಹಾಲ್ ವಧೇರಾ ಹಿಡಿದ ಕ್ಯಾಚ್ ಅನ್ನು ಅಮಾನ್ಯ ಎಂದು ಪರಿಗಣಿಸಲಾಗಿತ್ತು. ಈ ಪಂದ್ಯದ 10ನೇ ಓವರ್ನ ಮೊದಲ ಎಸೆತವನ್ನು ಮಾಝ್ ಸದಾಖತ್ ಲಾಂಗ್ ಆಫ್ನತ್ತ ಬಾರಿಸಿದ್ದರು. ಆದರೆ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ನೆಹಾಲ್ ವಧೇರಾ ಅದ್ಭುತವಾಗಿ ಚೆಂಡನ್ನು ಹಿಡಿದಿದ್ದರು. ಕ್ಯಾಚ್ ಹಿಡಿದ ಬಳಿಕ ನಿಯಂತ್ರಣ ಕಳೆದುಕೊಂಡ ವಧೇರಾ ಬೌಂಡರಿ ಲೈನ್ ದಾಟಿದರು. ಅಷ್ಟರಲ್ಲಾಗಲೇ ಸಹ ಆಟಗಾರ ನಮನ್ ಧೀರ್ಗೆ ವಧೇರಾ ಚೆಂಡನ್ನು ಎಸೆದರು. ಆದರೆ ಕ್ಯಾಚ್ ಪರಿಶೀಲಿಸಿದ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಇತ್ತ ನೆಹಾಲ್ ವಧೇರಾ ತನ್ನ ಕಾಲು ಬೌಂಡರಿ ಲೈನ್ಗೆ ತಾಗಿಲ್ಲ ಎಂಬ ವಾದವನ್ನು ಫೀಲ್ಡ್ ಅಂಪೈರ್ ಮುಂದಿಟ್ಟಿದ್ದರು.
ಬೌಂಡರಿ ಲೈನ್ ಚೆಕ್ಕಿಂಗ್ ವೇಳೆಯೂ ವಧೇರಾ ಅವರ ಕಾಲು ಲೈನ್ಗೆ ತಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿ ಭಾರತೀಯ ಆಟಗಾರರು ತೀರ್ಪನ್ನು ಪ್ರಶ್ನಿಸಿದರು. ಅದಕ್ಕೆ ಅಂಪೈರ್ ರಿಲೇ ಕ್ಯಾಚ್ ಹಿಡಿದಾಗ ಬೌಂಡರಿ ಲೈನ್ ದಾಟಿದ ಫೀಲ್ಡರ್ ತನ್ನ ಸಹ ಆಟಗಾರನಿಗೆ ಚೆಂಡು ನೀಡಿದ ಬೆನ್ನಲ್ಲೇ ಮೈದಾನದ ಒಳಕ್ಕೆ ಬರಬೇಕು. ಆದರೆ ನಮನ್ಧೀರ್ ಕ್ಯಾಚ್ ಹಿಡಿಯುವಷ್ಟರಲ್ಲಿ ನೇಹಾಲ್ ವಧೇರಾ ಮೈದಾನಕ್ಕೆ ಹಿಂತಿರುಗಿರಲಿಲ್ಲ. ಹೀಗಾಗಿಯೇ ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದಾರೆ ಎಂದು ಹೇಳಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಕ್ಯಾಚ್ ಹಿಡಿಯುವ ವೇಳೆಗೆ ಬಾಬರ್ ಅಜಂ ಬೌಂಡರಿ ಹೊರಗೆ ಇದ್ದರು. ಹೀಗಾಗಿ ಭಾರತಕ್ಕೆ ಒಂದು ನಿಯಮ. ಪಾಕಿಸ್ತಾನಕ್ಕೆ ಒಂದು ನಿಯಮನಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



