'ಇಷ್ಟೇ ಸಾಕಾಗಲ್ಲ, ಕಠಿಣ ಶಿಕ್ಷೆ ವಿಧಿಸಬೇಕು': ಯಶಸ್ವಿ ಜೈಸ್ವಾಲ್ ಬಳಿಕ ವೈಭವ್ ಸೂರ್ಯವಂಶಿ ಹೆಸರೇಳಿದ ಸಂಜಯ್ ಮಂಜ್ರೇಕರ್!
ಭಾರತದ ಮೊದಲ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಫರ್ನಾಂಡೋ ಅವರು ಜೈಸ್ವಾಲ್ ಅವರನ್ನು ಔಟ್ ಮಾಡಿದ ನಂತರ ಆಟಗಾರರ ನಡುವೆ ವಾಗ್ವಾದ ನಡೆದಿತ್ತು.

ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಮೈದಾನದಲ್ಲಿ ನಡೆದ ವಾಗ್ವಾದದ ನಂತರ, ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ಅಸಿತಾ ಫರ್ನಾಂಡೋ ಅವರಿಗೆ ಕೇವಲ ಅಲ್ಪ ಮೊತ್ತದ ದಂಡ ವಿಧಿಸಲಾಗಿದ್ದು, ಇದನ್ನು ಪ್ರಶ್ನಿಸಿರುವ ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಕಠಿಣ ಶಿಕ್ಷೆಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಇವರಿಬ್ಬರಿಗೂ ಅವರ ಪಂದ್ಯದ ಸಂಭಾವನೆ ಶೇ 25ರಷ್ಟು ದಂಡ ವಿಧಿಸಲಾಗಿದೆ.
'ಎಕ್ಸ್' (X) ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮಂಜ್ರೇಕರ್, ಈ ದಂಡವು ಸಾಕಾಗುವುದಿಲ್ಲ. ಕ್ರಿಕೆಟ್‌ನಲ್ಲಿ ಯಾವುದೇ ರೀತಿಯ ದೈಹಿಕ ಸಂಪರ್ಕಕ್ಕೆ ಅವಕಾಶವಿರದಂತೆ ನೋಡಿಕೊಳ್ಳಲು ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ 'ಎ' ತಂಡಗಳ ತ್ರಿಕೋನ ಸರಣಿಯ ವೇಳೆ ಶ್ರೀಲಂಕಾ 'ಎ' ತಂಡದ ಆಟಗಾರರೊಂದಿಗೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಘಟನೆಯನ್ನೂ ಮಂಜ್ರೇಕರ್ ನೆನಪಿಸಿಕೊಂಡರು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಕಾಮೆಂಟೇಟರ್ ಆಗಿರುವ ಮಾಜಿ ಕ್ರಿಕೆಟಿಗ ಮಂಜ್ರೇಕರ್ ಅವರು ಐಸಿಸಿ (ICC) ಮತ್ತು ಬಿಸಿಸಿಐ (BCCI) ಅನ್ನು ಒತ್ತಾಯಿಸಿದ್ದಾರೆ.
'ಆತ್ಮೀಯ ICC ಮತ್ತು BCCI... ಇತ್ತೀಚೆಗೆ 'ಇಂಡಿಯಾ ಎ' ತಂಡದ ವೈಭವ್ ಮತ್ತು ಈಗ ಜೈಸ್ವಾಲ್... ಇಂತಹ ವರ್ತನೆಯನ್ನು ನೀವು ಹೀಗೆಯೇ ಮುಂದುವರಿಯಲು ಬಿಟ್ಟರೆ, ಅವರು ಅಂತಹ ವರ್ತನೆಯನ್ನೇ ಪುನರಾವರ್ತಿಸುವಂತೆ ನೀವು ಅವರನ್ನು ರೂಪಿಸಿದಂತಾಗುತ್ತದೆ. ಇದು ಕ್ರೀಡೆಗೆ ಹಾಗೂ ಮುಖ್ಯವಾಗಿ ಅವರ ಸ್ವಂತ ಭವಿಷ್ಯಕ್ಕೂ ಒಳ್ಳೆಯದಲ್ಲ' ಎಂದು ಮಂಜ್ರೇಕರ್ ಬರೆದಿದ್ದಾರೆ.
ಇದೇ ವೇಳೆ, ಜೈಸ್ವಾಲ್ ಮತ್ತು ಫರ್ನಾಂಡೋ ಇಬ್ಬರಿಗೂ ತಲಾ ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿದೆ. ಭಾರತದ ಮೊದಲ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಫರ್ನಾಂಡೋ ಅವರು ಜೈಸ್ವಾಲ್ ಅವರನ್ನು ಔಟ್ ಮಾಡಿದ ನಂತರ ಆಟಗಾರರ ನಡುವೆ ವಾಗ್ವಾದ ನಡೆದಿತ್ತು.
ಜೈಸ್ವಾಲ್ ಪೆವಿಲಿಯನ್ ಕಡೆಗೆ ತೆರಳುತ್ತಿದ್ದಾಗ ಫರ್ನಾಂಡೋ ಅವರ ಸನ್ನೆಯಿಂದ ಕುಪಿತರಾಗಿ ಮತ್ತೆ ಅವರತ್ತ ಮರಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು; ಆ ಬಳಿಕ ಫರ್ನಾಂಡೋ ತಮ್ಮ ತಲೆಯನ್ನು ಜೈಸ್ವಾಲ್ ಅವರತ್ತ ಚಾಚಿದರು. ಇದಕ್ಕೆ ಪ್ರತಿಯಾಗಿ ಜೈಸ್ವಾಲ್ ಕೂಡ ಮುಂದಕ್ಕೆ ಬಾಗಿದಾಗ, ಇಬ್ಬರ ತಲೆಗಳೂ ಪರಸ್ಪರ ತಾಗಿದವು.
ಎರಡನೇ ದಿನದ ಆಟ ಆರಂಭವಾಗುವ ಮುನ್ನ, ಜೈಸ್ವಾಲ್ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾ, 'ಅವರು ಏನು ಹೇಳಿದರು ಎಂಬುದು ನಿಮಗೆ ತಿಳಿದಿಲ್ಲದಿದ್ದರೆ, ದಯವಿಟ್ಟು ಯಾವುದೇ ತೀರ್ಮಾನಕ್ಕೆ ಬರಬೇಡಿ. ಯಾರಾದರೂ ಮಿತಿ ಮೀರಿದರೆ, ಭಾರತವು ಹೋರಾಡುತ್ತದೆ ಮತ್ತು ತಕ್ಕ ಉತ್ತರ ನೀಡುತ್ತದೆ ಎಂಬುದನ್ನು ನಾವು ಅವರಿಗೆ ತಿಳಿಸಬೇಕಾಗುತ್ತದೆ' ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


