ಕ್ರಿಕೆಟ್

IPL 2025: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ RCB

ಈ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಆದರೆ, ತವರಿನಿಂದ ಹೊರಗೆ ಆಡಿರುವ ಎಲ್ಲ ಪಂದ್ಯಗಳನ್ನು ಗೆದ್ದು ಬೀಗಿದೆ.

IPL 2025: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ RCB
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
Published On :

ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದ್ದು, ಹೊಸ ದಾಖಲೆ ಬರೆದಿದೆ. ಆರಂಭದಲ್ಲೇ ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್ ಮತ್ತು ನಾಯಕ ರಜತ್ ಪಾಟಿದಾರ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್‌ಸಿಬಿಗೆ ನೆರವಾಗಿದ್ದು, ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಅವರ 119 ರನ್‌ಗಳ ಜೊತೆಯಾಟ.

ಡಿಸಿ ನೀಡಿದ್ದ 163 ರನ್‌ಗಳ ಗುರಿಯನ್ನು ಇನ್ನು 9 ಎಸೆತ ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಈ ಮೂಲಕ, ಟಿ20 ಲೀಗ್‌ನ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಿಂದ ಹೊರಗೆ ಸತತ 6ನೇ ಜಯವನ್ನು ದಾಖಲಿಸಿದೆ. ಲೀಗ್ ಇತಿಹಾಸದಲ್ಲಿಯೇ ಈ ಜಯ ಸಾಧಿಸಿದ ಮೊದಲ ತಂಡ ಎಂಬ ಖ್ಯಾತಿ ಪಡೆದಿದೆ.

ಈ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಆದರೆ, ತವರಿನಿಂದ ಹೊರಗೆ ಆಡಿರುವ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಕ್ರುನಾಲ್ ಪಾಂಡ್ಯ ಅವರ ಅಜೇಯ 73 ರನ್‌ಗಳ ನೆರವಿನಿಂದ ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಆರು ವಿಕೆಟ್‌ಗಳಿಂದ ಸೋಲಿಸಿ 14 ಅಂಕಗಳೊಂದಿಗೆ ಗುಜರಾತ್ ಟೈಟಾನ್ಸ್‌ಗಿಂತ ಮೇಲುಗೈ ಸಾಧಿಸಿತು.

ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ದುಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್‌ಗಳ ಗುರಿ ಬೆನ್ನಟ್ಟಿದ ಬೆಂಗಳೂರು ತಂಡವು ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಅವರ ಆಕರ್ಷಕ ಜೊತೆಯಾಟ ತಂಡಕ್ಕೆ ನೆರವಾಯಿತು.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಔಟಾದ ಬಳಿಕ ಬಂದ ಟಿಮ್ ಡೇವಿಡ್ ಐದು ಎಸೆತಗಳಲ್ಲಿ 19 ರನ್ ಗಳಿಸಿ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೊಹ್ಲಿ 51 ರನ್ ಗಳಿಸಿದರೆ, ಕೃನಾಲ್ ಪಾಂಡ್ಯ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಡೆಲ್ಲಿ ತಂಡಕ್ಕೆ ಆಘಾತ ಉಂಟುಮಾಡಿದರು.

2008ರಲ್ಲಿ ಲೀಗ್ ಪ್ರಾರಂಭವಾದಾಗಿನಿಂದ ಬೆಂಗಳೂರು ತಂಡ ಐಪಿಎಲ್ ಪ್ರಶಸ್ತಿಯ ಬರ ಎದುರಿಸುತ್ತಿದ್ದು, ಈ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುನ್ನುಗ್ಗುತ್ತಿದೆ.

443 ರನ್‌ಗಳೊಂದಿಗೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (427) ಅವರನ್ನು ಹಿಂದಿಕ್ಕಿ ಕೊಹ್ಲಿ ಈ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.