ಮೊದಲ ಏಕದಿನ ಪಂದ್ಯ: ಸ್ಮೃತಿ ಮಂಧಾನ, ರೇಣುಕಾ ಸಿಂಗ್ ಅಬ್ಬರ; 211 ರನ್ ಗಳಿಂದ ವೆಸ್ಟ್ ಇಂಡೀಸ್ ಸೋಲಿಸಿದ ಭಾರತ!
ಭಾರತ ನೀಡಿದ 315 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ಆಟಗಾರ್ತಿಯರಿಗೆ ಭಾರತದ ರೇಣುಕಾ ಸಿಂಗ್ ಇನ್ನಿಲ್ಲದೆ ಕಾಡುವ ಮೂಲಕ ಆರಂಭಿಕ ಐದು ವಿಕೆಟ್ ಪಡೆದರು

ವಡೋದರಾ: ವಡೋದರಾದ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಅವರ ಅಬ್ಬರದ 91ರನ್ ಹಾಗೂ ರೇಣುಕಾ ಸಿಂಗ್ ಪಡೆದ ಐದು ವಿಕೆಟ್ ಗಳ ನೆರವಿನಿಂದ ಭಾರತ ತಂಡ ಎದುರಾಳಿ ವೆಸ್ಟ್ ಇಂಡೀಸ್ ತಂಡವನ್ನು 211 ರನ್ ಗಳ ಅಂತರದಿಂದ ಸೋಲಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ 102 ಎಸೆತಗಳಲ್ಲಿ 13 ಬೌಂಡರಿ ಬಾರಿಸಿ 91 ರನ್ ಗಳಿಸಿದಾಗ ಜೈದಾ ಜೇಮ್ಸ್ LBW ಬಲೆಗೆ ಕೆಡವಿದರು. ಸ್ಮೃತಿ ಮಂಧನಾ ಅವರಿಗೆ ಉತ್ತಮ ಸಾಥ್ ನೀಡಿದ್ದ ಪ್ರತೀಕಾ ರವಾಲ್ 40, ಹರ್ಲಿನಾ ಡಿಯೋಲ್ 44 ರನ್ ಗಳಿಸಿ ಫೆವಿಲಿಯನ್ ಗೆ ನಿರ್ಗಮಿಸಿದರು.
ನಂತರ ಬಂದ ನಾಯಕಿ ಹರ್ಮನ್ ಪ್ರೀತ್ ಕೌರ್ 34 ರನ್ ಗಳಿಸಿ ರನ್ ಔಟ್ ಆದರು. ಹೊಡಿಬಡಿ ಆಟಕ್ಕೆ ಮುಂದಾದ ರಿಚಾ ಘೋಷ್ 26 ರನ್ ಗಳಿಸಿ ಔಟಾದರೆ, ಕೊನೆಯಲ್ಲಿ ಮಿಂಚಿದ ಜೆಮಿಮಾ ರಾಡ್ರಿಗಸ್ 31 ರನ್ ಬಾರಿಸಿದರು.
ಹೀಗೆ ಉತ್ತಮ ಆರಂಭ ಪಡೆದ ಭಾರತ ತಂಡಕ್ಕೆ ಕೊನೆಯಲ್ಲಿ ದೀಪ್ತಿ ಶರ್ಮಾ ಔಟಾಗದೆ 14, ಸೈಮಾ ಠಾಕೂರ್ 4, ತೀತಸ್ ಸಾಧು 4, ಪ್ರಿಯಾ ಮಿಶ್ರಾ 1 ರನ್ ಗಳಿಸಿದರು. ಇದರೊಂದಿಗೆ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಭಾರತ ನೀಡಿದ 315 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ಆಟಗಾರ್ತಿಯರಿಗೆ ಭಾರತದ ರೇಣುಕಾ ಸಿಂಗ್ ಇನ್ನಿಲ್ಲದೆ ಕಾಡುವ ಮೂಲಕ ಆರಂಭಿಕ ಐದು ವಿಕೆಟ್ ಪಡೆದರು. 10 ಓವರ್ ಮಾಡಿದ ರೇಣುಕಾ 29 ರನ್ ಗಳಿಗೆ 5 ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಉಳಿದಂತೆ ಪ್ರಿಯಾ ಮಿಶ್ರಾ 2 ವಿಕೆಟ್ ಪಡೆದರೆ ದೀಪ್ತಿ ಶರ್ಮಾ ಮತ್ತು ತೀತಸ್ ಸಾಧು ತಲಾ 1 ವಿಕೆಟ್ ಪಡೆದರು. ಇದರೊಂದಿಗೆ ಭಾರತ 211 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ರೇಣುಕಾ ಸಿಂಗ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



