ಗೆಲುವಿನ ಲಯದಲ್ಲಿ ಮುನ್ನುಗ್ಗುತ್ತಿದೆ ಆರ್ಸಿಬಿ: ರಾಜಸ್ಥಾನ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು!
ಐಪಿಎಲ್ 13ನೇ ಆವೃತ್ತಿಯಲ್ಲಿ ಕೊಹ್ಲಿ ಪಡೆ ಗೆಲುವಿನ ಲಯದಲ್ಲಿ ಮುನ್ನುಗುತ್ತಿದೆ. ಸಂಘಟಿತ ಹೋರಾಟದ ಬಲದಿಂದ ಆರ್ ಸಿಬಿ ತಂಡ ಐಪಿಎಲ್ ನಲ್ಲಿ ಮೂರನೇ ಗೆಲುವು ದಾಖಲಿಸಿದೆ.

ದುಬೈ: ಆರಂಭಿಕ ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕ್ಕಲ್ (63) ಮತ್ತು ನಾಯಕ ವಿರಾಟ್ ಕೊಹ್ಲಿ (ಅಜೇಯ 72) ಅವರ ಸೊಗಸಾದ ಆಟದ ಜತೆಗೆ ಯಜ್ವೇಂದ್ರ ಚಹಲ್ (24ಕ್ಕೆ 3) ಅವರ ಕರಾರುವಾಕ್ ಬೌಲಿಂಗ್ ದಾಳಿಯ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 13ನೇ ಆವೃತ್ತಿಯ ತನ್ನ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು.
ಐಪಿಎಲ್ 13ನೇ ಆವೃತ್ತಿಯಲ್ಲಿ ಕೊಹ್ಲಿ ಪಡೆ ಗೆಲುವಿನ ಲಯದಲ್ಲಿ ಮುನ್ನುಗುತ್ತಿದೆ. ಸಂಘಟಿತ ಹೋರಾಟದ ಬಲದಿಂದ ಆರ್ ಸಿಬಿ ತಂಡ ಐಪಿಎಲ್ ನಲ್ಲಿ ಮೂರನೇ ಗೆಲುವು ದಾಖಲಿಸಿದೆ. ಇನ್ನು 6 ಅಂಕಗಳನ್ನು ಪಡೆದಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇಲ್ಲಿನ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಡಬಲ್ ಹೆಡರ್ ನ ಮೊದಲ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಬಳಿಕ ಇದಕ್ಕುತ್ತರವಾಗಿ ವಿರಾಟ್ ಕೊಹ್ಲಿ ಸಾರಥ್ಯದ ಬೆಂಗಳೂರು ತಂಡ 5 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿ ಜಯದ ನಗೆ ಬೀರಿತು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಟ್ಟು ಆರು ಅಂಕ ಸಂಪಾದಿಸಿದೆ.
ನಾಯಕ ಕೊಹ್ಲಿಯೊಂದಿಗೆ ದ್ವಿತೀಯ ವಿಕೆಟ್ ಗೆ 99 ರನ್ ಕಲೆಹಾಕಿದ ಪಡಿಕ್ಕಲ್ ಅಂತಿಮವಾಗಿ 45 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ ಸಹಿತ 63 ರನ್ ಪೇರಿಸಿ ತಂಡದ ಗೆಲುವಿಗೆ ಬೇಕಾದ ಅಗತ್ಯ ವೇದಿಕೆ ನಿರ್ಮಿಸಿದರು. ನಂತರ ಕೊಹ್ಲಿ (72 ರನ್, 53 ಎಸೆತ, 7 ಫೋರ್, 2 ಸಿಕ್ಸರ್) ಮತ್ತು ಎಬಿ ಡಿ ವಿಲಿಯರ್ಸ್ (ಅಜೇಯ 12 ) ತಂಡವನ್ನು ಗೆಲುವಿನ ದಡ ಸೇರಿಸಿ ಸಂಭ್ರಮಿಸಿದರು.
ಇದಕ್ಕೂ ಮುನ್ನ ಸ್ಪಿನ್ನರ್ ಯಜ್ವೇಂದ್ರ ಚಹಲ್ ದಾಳಿಗೆ ಅಕ್ಷರಶಃ ನಲುಗಿದ ರಾಜಸ್ಥಾನ್ ರಾಯಲ್ಸ್ ಬೃಹತ್ ಮೊತ್ತ ಪೇರಿಸುವಲ್ಲಿ ಎಡವಿತು. ಲೊಮ್ರೊರ್ 47 ರನ್ ಹೊರತುಪಡಿಸಿದರೆ ಇತರರು ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಮಾಡುವಲ್ಲಿ ವಿಫಲಗೊಂಡರು.
ಕೊನೆಯ ಹಂತದಲ್ಲಿ ತೇವಾಟಿಯಾ ಬಿರುಸಿನ 24 ರನ್ ಗಳಿಸಿದ ಕಾರಣ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ಶಕ್ತಗೊಂಡಿತು.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ್ ರಾಯಲ್ಸ್: 20 ಓವರ್ ಗಳಲ್ಲಿ 6 ವಿಕೆಟ್ ಗೆ 154 (ಲೊಮ್ರೊರ್ 47, ರಾಹುಲ್ ತೆವಾಟಿಯಾ ಅಜೇಯ 24, ಜೋಸ್ ಬಟ್ಲರ್ 22; ಯಜ್ವೇಂದ್ರ ಚಹಲ್ 24ಕ್ಕೆ 3, ಉದಾನ್ 41ಕ್ಕೆ 2).
ರಾಯಲ್ ಚಾಲೆಂಜರ್ಸ್ ಬೆಂಗಳೂರು: 19.1 ಓವರ್ ಗಳಲ್ಲಿ 2 ವಿಕೆಟ್ ಗೆ 158 (ದೇವದತ್ ಪಡಿಕ್ಕಲ್ 63 , ವಿರಾಟ್ ಕೊಹ್ಲಿ ಅಜೇಯ 72 ; ಶ್ರೇಯಸ್ ಗೋಪಾಲ್ 27ಕ್ಕೆ 1).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


