ವೈಯಕ್ತಿಕ ಸಮಸ್ಯೆಗಳಿಂದ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ: ಮೊಹಮ್ಮದ್ ಶಮಿ
ಹಲವು ವೈಯಕ್ತಿಕ ಸಮಸ್ಯೆಗಳಿಂದ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ ಎಂದು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬಹಿರಂಗಪಡಿಸಿದ್ದಾರೆ.

ನವದೆಹಲಿ: ಹಲವು ವೈಯಕ್ತಿಕ ಸಮಸ್ಯೆಗಳಿಂದ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ ಎಂದು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬಹಿರಂಗಪಡಿಸಿದ್ದಾರೆ.
ಭಾರತ ತಂಡದ ಉಪ ನಾಯಕ ರೋಹಿತ್ ಶರ್ಮ ಅವರೊಂದಿಗೆ ನಡೆಸಿದ ಇನ್ಸ್ಟಾಗ್ರಾಂ ಲೈವ್ ಚಾಟ್ ನಲ್ಲಿ ಈ ಬಗ್ಗೆ ಮಾತನಾಡಿದ ಮೊಹಮ್ಮದ್ ಶಮಿ, 2015ರ ವಿಶ್ವಕಪ್ ನಂತರ ವೈಯಕ್ತಿಕ ಮತ್ತು ವೃತ್ತಿ ಜೀವನ ಸಮಸ್ಯೆಯಿಂದಾಗಿ ಬದುಕುವುದೇ ಬೇಡ ಎಂದು ಅನಿಸುತ್ತಿತ್ತು, ಖಿನ್ನತೆ, ಒತ್ತಡದಿಂದ ಬಳಲುತ್ತಿದ್ದೆ ಎಂದಿದ್ದಾರೆ.
2015ರ ವಿಶ್ವಕಪ್ ವೇಳೆ ನನಗೆ ಗಾಯವಾಯಿತು. ನಂತರ ಭಾರತ ತಂಡಕ್ಕೆ ವಾಪಸ್ ಮರಳಲು 18 ತಿಂಗಳು ಬೇಕಾಯಿತು. ಆ ಸಮಯ ನನ್ನ ವೃತ್ತಿಜೀವನದ ಬಹಳ ನೋವಿನ ಸಮಯವಾಗಿತ್ತು. ನಂತರ ಕೌಟುಂಬಿಕ ಸಮಸ್ಯೆ ಎದುರಾಯಿತು. ಅದು ನಡೆಯುತ್ತಿರುವಾಗ ಐಪಿಎಲ್ ಗೆ 10-12 ದಿನ ಮೊದಲು ಅಪಘಾತವಾಯಿತು. ಈ ಸಮಯದಲ್ಲಿ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಹಲವು ಕಥೆಗಳು, ಅಂತೆಕಂತೆಗಳು ಬರುತ್ತಿದ್ದವು.
ಈ ಸಮಯದಲ್ಲಿ ನನ್ನ ಕುಟುಂಬ ಸದಸ್ಯರು ಮತ್ತು ಕೆಲವು ಸ್ನೇಹಿತರು ಬೆಂಬಲಕ್ಕೆ ನಿಂತರು. ಅವರ ಬೆಂಬಲ, ಧೈರ್ಯದ ನುಡಿಗಳಿಂದಾಗಿಯೇ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಇಂದು ಗೆಲ್ಲಲು ಸಾಧ್ಯವಾಗಿದೆ. ನನ್ನ ಕುಟುಂಬದವರು ಮತ್ತು ಸ್ನೇಹಿತರ ಪ್ರೋತ್ಸಾಹ ಸಿಕ್ಕದೇ ಇರುತ್ತಿದ್ದರೆ ಕ್ರಿಕೆಟ್ ಗೆ ಮತ್ತೆ ಮರಳಲು ಸಾಧ್ಯವಾಗುತ್ತಿರಲಿಲ್ಲ. ಆ ಸಮಯದಲ್ಲಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದೆ. ನನ್ನ ವರ್ತನೆ, ದಿನನಿತ್ಯದ ಬದುಕು ಕಂಡು ಮನೆಯಲ್ಲಿ ಒಬ್ಬರು ಯಾವಾಗಲೂ ನನ್ನ ಮೇಲೆ ಕಣ್ಣಿಟ್ಟಿರುತ್ತಿದ್ದರು. ಅಪಾರ್ಟ್ ಮೆಂಟಿನ 24ನೇ ಮಹಡಿಯಲ್ಲಿ ಇದ್ದ ನಮ್ಮ ಮನೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಮನೆಯವರು ಭಯಪಡುತ್ತಿದ್ದರು ಎಂದು ಮೊಹಮ್ಮದ್ ಶಮಿ ಹೇಳಿಕೊಂಡಿದ್ದಾರೆ.
ಕುಟುಂಬಕ್ಕಿಂತ ದೊಡ್ಡ ಶಕ್ತಿ ಬೇರೊಂದಿಲ್ಲ ಎಂದು ನನಗೆ ಗೊತ್ತಾಗಿದ್ದೇ ಆಗ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ, ನಿನ್ನ ಆಟದತ್ತ ಗಮನಹರಿಸು ಎಂದು ಮನೆಯಲ್ಲಿ ಯಾವಾಗಲೂ ಹೇಳುತ್ತಿದ್ದರು.ಮನಸ್ಸಿನಲ್ಲಿರುವ ದುಗುಡ, ಚಿಂತೆ ಎಲ್ಲವನ್ನೂ ಬದಿಗೊತ್ತಿ ಕೇವಲ ಮೈದಾನದಲ್ಲಿ ನೆಟ್ ಮೇಲೆ ಗಮನಹರಿಸುತ್ತಿದ್ದೆ. ಓಡುತ್ತಿದ್ದೆ. ಆಗ ಏನೆಲ್ಲಾ ಮಾಡುತ್ತಿದ್ದೆ ಎಂದು ನನಗೇ ಗೊತ್ತಿಲ್ಲ, ಅಷ್ಟು ಒತ್ತಡದಲ್ಲಿದ್ದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


