ಏಕದಿನ ಕ್ರಿಕೆಟ್ ವಿಶ್ವಕಪ್: ಪಂದ್ಯ ಟೈ ಆದರೆ ಸೂಪರ್ ಓವರ್ ಬೇಡ.. ಜಂಟಿಯಾಗಿ ಪ್ರಶಸ್ತಿ ನೀಡಿ- ರಾಸ್ ಟೇಲರ್
ವಿಶ್ವಕಪ್ ನಂತಹ ಮಹತ್ವದ ಟೂರ್ನಿಗಳಲ್ಲಿ ಫೈನಲ್ ಪಂದ್ಯ ಟೈ ಆದರೆ ವಿಜೇತರನ್ನು ಘೋಷಿಸಲು ಸೂಪರ್ ಓವರ್ ಬೇಡ.. ಬದಲಿಗೆ ಎರಡೂ ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಬೇಕು ಎಂದು ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಲರ್ ಅಭಿಪ್ರಾಯ ಪಟ್ಟಿದ್ದಾರೆ.

ನವದೆಹಲಿ: ವಿಶ್ವಕಪ್ ನಂತಹ ಮಹತ್ವದ ಟೂರ್ನಿಗಳಲ್ಲಿ ಫೈನಲ್ ಪಂದ್ಯ ಟೈ ಆದರೆ ವಿಜೇತರನ್ನು ಘೋಷಿಸಲು ಸೂಪರ್ ಓವರ್ ಬೇಡ.. ಬದಲಿಗೆ ಎರಡೂ ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಬೇಕು ಎಂದು ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಲರ್ ಅಭಿಪ್ರಾಯ ಪಟ್ಟಿದ್ದಾರೆ.
ಇಎಸ್‌ಪಿಎನ್ ಕ್ರಿಕ್ ಇನ್ಫೊ ಜೊತೆಗಿನ ಸಂವಾದದಲ್ಲಿ ಮಾತನಾಡಿದ ರಾಸ್ ಟೇಲರ್ ಇಂಗ್ಲೆಂಡ್ ಜೊತೆಗಿನ ವಿಶ್ವಕಪ್ ಫೈನಲ್ ಪಂದ್ಯದ ಕಹಿ ನೆನಪನ್ನು ಸ್ಮರಿಸಿಕೊಂಡರು. 'ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವು ಟೈ ಆದ ಬಳಿಕ ನಾನು ಅಂಪೈರ್‌ಗಳ ಕೈಕುಲುಕಲು ಹೋಗಿದ್ದೆ. ಇನ್ನೂ ‘ಸೂಪರ್ ಓವರ್’ ಬಾಕಿ ಇದೆ ಎಂಬುದು ನನಗೆ ಅರಿವಾಗಿದ್ದು ಆಗಲೇ. ಅಲ್ಲಿಯವರೆಗೂ ಅದರ ಕಲ್ಪನೆಯೇ ಇರಲಿಲ್ಲ’ ಎಂದು ಟೇಲರ್ ಹೇಳಿದರು.
ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು. ನಿಗದಿತ ಓವರ್‌ಗಳ (50) ಆಟ ಮುಗಿದಾಗ ಪಂದ್ಯ ‘ಟೈ’ ಆಗಿತ್ತು. ಸೂಪರ್ ಓವರ್ ಕೂಡ ‘ಟೈ’ ಆಗಿತ್ತು. ಹೀಗಾಗಿ ಅತಿ ಹೆಚ್ಚು ಬೌಂಡರಿ ಗಳಿಸಿದ್ದ (ಬೌಂಡರಿ ಕೌಂಟ್) ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು. ಐಸಿಸಿ ಈ ನಿಯಮವನ್ನು ಹಲವರು ಟೀಕಿಸಿದ್ದರು. ಬಳಿಕ ಐಸಿಸಿ ಕೂಡ ಈ ನಿಯಮವನ್ನು ತೆಗೆದು ಹಾಕಿತ್ತು.
ಇದೀಗ ಇದೇ ವಿಚಾರವಾಗಿ ಟೇಲರ್ ಮಾತನಾಡಿದ್ದು, 'ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯಲ್ಲಿ ಫೈನಲ್ ಪಂದ್ಯವು ಟೈ ಆದರೆ ಉಭಯ ತಂಡಗಳಿಗೂ ಜಂಟಿಯಾಗಿ ಪ್ರಶಸ್ತಿ ನೀಡಬೇಕು. ಏಕದಿನ ಮಾದರಿಯಲ್ಲಿ ‘ಸೂಪರ್ ಓವರ್’ ಅಗತ್ಯವೇ ಇಲ್ಲ ಎಂದು ಹೇಳಿದರು.
'ಏಕದಿನ ಪಂದ್ಯವು ಟೈ ಆದರೆ ಆ ಫಲಿತಾಂಶವೇ ಅಂತಿಮವಾಗಬೇಕು. ವಿಜೇತರನ್ನು ನಿರ್ಧರಿಸಲು ಸೂಪರ್ ಓವರ್ ಆಡಿಸುವುದರಲ್ಲಿ ಅರ್ಥವಿಲ್ಲ. ಟ್ವೆಂಟಿ–20 ಮಾದರಿಯ ಪಂದ್ಯದಲ್ಲಿ ಫಲಿತಾಂಶ ಬರುವವರೆಗೂ ‘ಸೂಪರ್ ಓವರ್’ ಆಡಿಸಬಹುದು. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಏಕದಿನ ಮಾದರಿಯು ಸುದೀರ್ಘವಾದುದು. ಅದಕ್ಕೆ ಈ ನಿಯಮ ಸರಿಹೊಂದುವುದಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


