ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ನಾಳೆ
ಹಿಟ್‌ಮನ್ ರೋಹಿತ್ ಶರ್ಮಾ ಅನುಪಸ್ಥಿಯಲ್ಲಿ ಭಾರತ ತಂಡ ಗೆಲುವಿನ ಓಟ ಮುಂದುವರಿಸಲು ಇಲ್ಲಿನ ಸೆಡಾನ್ ಪಾರ್ಕ್ ಅಂಗಳದಲ್ಲಿ ನಾಳೆ ಏಕದಿನ ಸರಣಿಯ ಮೊದಲನೇ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.

ಹ್ಯಾಮಿಲ್ಟನ್: ಹಿಟ್‌ಮನ್ ರೋಹಿತ್ ಶರ್ಮಾ ಅನುಪಸ್ಥಿಯಲ್ಲಿ ಭಾರತ ತಂಡ ಗೆಲುವಿನ ಓಟ ಮುಂದುವರಿಸಲು ಇಲ್ಲಿನ ಸೆಡಾನ್ ಪಾರ್ಕ್ ಅಂಗಳದಲ್ಲಿ ನಾಳೆ ಏಕದಿನ ಸರಣಿಯ ಮೊದಲನೇ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ನಾಯಕ ವಿರಾಟ್ ಕೊಹ್ಲಿಗೆ ಖಂಡಿತವಾಗಿ ಉಪನಾಯಕ ರೋಹಿತ್ ಅವರ ಅನುಪಸ್ಥಿತಿ ಕಾಡಲಿದೆ. ಮತ್ತೊಂದೆಡೆ ನಿಯಮಿತ ನಾಯಕ ಕೇನ್ ವಿಲಿಯಮ್ಸನ್ ಅವರ ಅಲಭ್ಯತೆಯೊಂದಿಗೆ ಕಿವೀಸ್ ಆರಂಭಿಕ ಎರಡು ಪಂದ್ಯಗಳಾಡಲಿದೆ. ರೋಹಿತ್ ಕೊನೆಯ ಟಿ-20 ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರೆ, ಕೇನ್ ಭಾರತದ ವಿರುದ್ಧ ಮೂರನೇ ಟಿ-20 ಹಣಾಹಣಿಯಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಆದರೆ, ಟಿ-20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ವಿಶ್ವಾಸವನ್ನು ಮರೆತು ಕೊಹ್ಲಿ ಪಡೆ ಏಕದಿನ ಸರಣಿಯಲ್ಲಿ ಹೊಸ ಯೋಚನೆಯೊಂದಿಗೆ ಅಂಗಳ ಪ್ರವೇಶಿಸಲಿದೆ. ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತವರು ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದು ಬೀಗಿತ್ತು.
ಭಾರತ ತಂಡವನ್ನು ಸ್ಕೋರ್ ಕಾರ್ಡ್‌ನಲ್ಲಿ ನೋಡಿದಾಗ ಬಲಿಷ್ಠವಾಗಿ ಕಾಣುತ್ತದೆ. ಆದರೆ, ಕ್ರಿಕೆಟ್ ಸ್ಕೋರ್ ಕಾರ್ಡ್ ನೋಡಿ ಆಡುವ ಕ್ರೀಡೆಯಲ್ಲ. ಅನುಭವಿ ಕಿವೀಸ್ ಆಟಗಾರರ ಎದುರು ಅದರಲ್ಲೂ ದ್ವೀಪ ರಾಷ್ಟ್ರದ ಅಂಗಳಗಳಲ್ಲಿ ಭಾರತಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಬೌಲಿಂಗ್ ವಿಭಾಗವನ್ನು ಜಸ್ಪ್ರಿತ್ ಬುಮ್ರಾ ಮುನ್ನಡೆಸಲಿದ್ದಾರೆ. ಏಕದಿನ ಸರಣಿ ನಿಮಿತ್ತಾ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಪೃಥ್ವಿ ಶಾ ಇನಿಂಗ್ಸ್ ಆರಂಭಿಸಲಿದ್ದಾರೆ. ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
“ರೋಹಿತ್ ಶರ್ಮಾ ಏಕದಿನ ಸರಣಿಗೆ ಅಲಭ್ಯರಾಗಿರುವುದು ಅನಿರೀಕ್ಷಿತ. ಈ ಸರಣಿಯ ಬಳಿಕ ಭಾರತಕ್ಕೆ ಯಾವುದೇ ಏಕದಿನ ಸರಣಿ ಇಲ್ಲ. ಹಾಗಾಗಿ, ಅವರು ಚೇತರಿಸಿಕೊಳ್ಳಲು ಸಾಕಷ್ಟು ಸಮಯವಿದೆ. ಪೃಥ್ವಿ ಶಾ ಇನಿಂಗ್ಸ್ ಆರಂಭಿಸಲಿದ್ದಾರೆ. ಕೆ.ಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ,’’ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಕಿವೀಸ್ ಆಯ್ಕೆದಾರ ಗ್ಯಾವಿನ್ ಲಾರ್ಸೆನ್ ಅವರು ಕೇನ್ ವಿಲಿಯಮ್ಸನ್ ಅನುಪಸ್ಥಿಯಲ್ಲಿ ಟಾಮ್ ಲಥಾಮ್ ತಂಡವನ್ನು ಮುನ್ನಡೆಸಲಿದ್ದಾರೆ. ಕೇನ್ ಬದಲು ಮಾರ್ಕ್ ಚಾಪ್ಮನ್ ಅವರಿಗೆ ಅವಕಾಶ ನೀಡಲಾಗಿದೆ. ಇವರು ಭಾರತ ಎ ವಿರುದ್ಧ ಚಾಪ್ಮನ್ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದಿದ್ದಾರೆ.
"ಇದು ಕೇನ್‌ಗೆ ಭಾರಿ ನಿರಾಶಾದಾಯಕವಾಗಿದೆ. ಆದರೆ, ಈ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ಕ್ರಿಕೆಟ್ ಮುಂದಿರುವಾಗ ನಾವು ಸುರಕ್ಷತೆಯ ಮೊದಲ ವಿಧಾನವನ್ನು ತೆಗೆದುಕೊಳ್ಳಬೇಕು. ಬಲಿಷ್ಠ ಭಾರತ 'ಎ' ತಂಡದ ವಿರುದ್ಧ ನ್ಯೂಜಿಲೆಂಡ್ ಎ ಪರ ಸತತ ಶತಕಗಳ ಹಿಂದೆಯೇ ಮಾರ್ಕ್ ಅವರನ್ನು ಏಕದಿನ ರಾಷ್ಟ್ರೀಯ ಹಿರಿಯರ ತಂಡಕ್ಕೆ ಸ್ವಾಗತಿಸುವುದು ಅದ್ಭುತವಾಗಿದೆ. ಹಲವು ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡುವ ಮಾರ್ಕ್ ಚಾಪ್ಮನ್ ಬಹುಮುಖ ಪ್ರತಿಭೆ ಹಾಗೂ ಅವರ ಫೀಲ್ಡಿಂಗ್ ನಿಜಕ್ಕೂ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲದು,'' ಎಂದು ತಿಳಿಸಿದ್ದಾರೆ.
ತಂಡಗಳು
ಭಾರತ: ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ನವದೀಪ್ ಸೈನಿ, ಮೊಹಮ್ಮದ್ ಶಮಿ, ಯಜ್ವೇಂದ್ರ ಚಾಹಲ್, ಜಸ್ಪ್ರಿತ್ ಬುಮ್ರಾ, ಪೃಥ್ವಿ ಶಾ, ಕುಲ್ದೀಪ್ ಯಾದವ್, ರಿಷಭ್ ಪಂತ್ (ವಿ.ಕೀ), ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲ್ಸ್, ರಾಸ್ ಟೇಲರ್, ಟಾಮ್ ಲಥಾಮ್ (ನಾಯಕ/ ವಿ.ಕೀ), ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಾಮ್, ಕಾಲಿನ್ ಡಿ ಗ್ರಾಡ್ಹೋಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಹಾಮಿಶ್ ಬೆನೆಟ್, ಇಶ್ ಸೋಧಿ, ಟಾಮ್ ಬ್ಲಂಡೆಲ್, ಕೈಲ್ ಜಾಮಿಸನ್, ಸ್ಕಾಟ್ ಕುಗ್ಲೇಯಿನ್.
ಸಮಯ: ನಾಳೆ ಬೆಳಗ್ಗೆ 07:30
ಸ್ಥಳ: ಸೆಡಾನ್ ಪಾರ್ಕ್, ಹ್ಯಾಮಿಲ್ಟನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


