ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಗೆ ಸೆಹ್ವಾಗ್ ಹೆಸರಿಸಿದ ಮೂರನೇ ವೇಗಿ ಯಾರು ಗೊತ್ತಾ?
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೀರ್ಘ ಕಾಲ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ.

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೀರ್ಘ ಕಾಲ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಇದೀಗ ಎಲ್ಲಾ ತಂಡಗಳ ಚಿತ್ತ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ನತ್ತ ನೆಟ್ಟಿದೆ. ಪ್ರಸಕ್ತ ವರ್ಷದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೊರೋನಾದಿಂದಾಗಿ ಮುಂದೂಡಲಾಗಿದೆ.
2016ರ ಬಳಿಕ ಆಯೋಜನೆಯಾಗುತ್ತಿರುವ ಮೊದಲ ಟಿ20 ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ಈಗಾಗಲೇ ಪೂರ್ವ ಸಿದ್ದತೆ ನಡೆಸುತ್ತಿವೆ. ಅದರಂತೆ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಕೂಡ ಸಜ್ಜಾಗುತ್ತಿದೆ. ಇದೀಗ ಕೊಹ್ಲಿ ಪಡೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಚುಟುಕು ಸರಣಿಯಲ್ಲಿ ನಿರತವಾಗಿವೆ. ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಭಾರತ 2-0 ಅಂತರದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.
ಟೂರ್ನಿ ಆರಂಭವಾಗಲು ಒಂದು ವರ್ಷಕ್ಕಿಂತ ಕಡಿಮೆ ಅವಧಿ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿರೇಂದ್ರ ಸೆಹ್ವಾಗ್, ಸದ್ಯ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಟಿ ನಟರಾಜನ್ ಟೂರ್ನಿಯ ವೇಗಿಗಳಲ್ಲಿ ಒಬ್ಬರಾಗಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾಗೆ ಆಯ್ಕೆಯಾಗುವ ವೇಗಿಗಳ ಪಟ್ಟಿಯಿಂದ ಮೊಹಮ್ಮದ್ ಶಮಿ, ದೀಪಕ್ ಚಹರ್ ಸೇರಿದಂತೆ ಕೆಲವರನ್ನು ಸೆಹ್ವಾಗ್ ಹೊರಹಾಕಿದ್ದಾರೆ.
ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಟಿ ನಟರಾಜನ್ ಆಡಲಿದ್ದಾರೆ ಎಂದು ಭವಿಷ್ಯ ನುಡಿದ ವಿರೇಂದ್ರ ಸೆಹ್ವಾಗ್, ಮೂರನೇ ವೇಗಿಯ ಸ್ಥಾನಕ್ಕೆ ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ಟಿ. ನಟರಾಜನ್ ಅವರಿಗೆ ಮಣೆ ಹಾಕಿದ್ದಾರೆ.
"ಜಸ್‌ಪ್ರಿತ್ ಬುಮ್ರಾ ಹಾಗೂ ಭುವನೇಶ್ವರ ಕುಮಾರ್ ಅವರೊಂದಿಗೆ ಟಿ ನಟರಾಜನ್ ಅವರಿಗೆ ಅವಕಾಶ ನೀಡಿದರೆ, ಮುಂದಿನ ಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅತ್ಯಂತ ಬಲಿಷ್ಠವಾಗಿರುತ್ತದೆ. ತಂಡದಲ್ಲಿ ಇತರೆ ಬೌಲರ್‌ಗಳು ದುಬಾರಿಯಾದರೆ, ಎಡಗೈ ವೇಗಿ ಕಡಿಮೆ ಎಕಾನಮಿಯನ್ನು ಕಾಯ್ದುಕೊಂಡಿದ್ದಾರೆ ಹಾಗೂ ಕೊನೆಯ ಪಂದ್ಯದಲ್ಲಿಯೂ ಅವರು ಇದೇ ರೀತಿ ಬೌಲಿಂಗ್ ಮಾಡಲಿದ್ದಾರೆ," ಎಂದು ವೀರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಟಿ ನಟರಾಜನ್ ಅವರನ್ನು ಆರಿಸಿಕೊಳ್ಳುವುದು ತುಂಬಾ ಒಳ್ಳೆಯದು, ಏಕೆಂದರೆ ಅವರಲ್ಲಿ ಯಾರ್ಕರ್, ನಿಧಾನಗತಿಯ ಎಸೆತಗಳು ಹಾಗೂ ಲೆನ್ತ್ ಎಸೆತಗಳಿವೆ. ಮುಖ್ಯವಾಗಿ ಅವರು ಗುಣಮಟ್ಟದ ವೇಗಿಯಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಅವರ ವೃತ್ತಿಜೀವನದಲ್ಲಿ ಎಷ್ಟು ದೊಡ್ಡ ಬದಲಾವಣೆಯನ್ನು ತಂದಿದೆ ಎಂದು ವೇಗಿಗೆ ಸರಣಿ ಮುಗಿದ ಬಳಿಕ ಅರಿವಾಗಲಿದೆ. ಜನರು ಅವರಿಂದ ಕಲಿಯಲು ಬಯಸುತ್ತಾರೆ ಮತ್ತು ಅವರಂತೆ ಆಗಲು ಪ್ರಯತ್ನಿಸುತ್ತಾರೆ," ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮಂಗಳವಾರ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಡೇವಿಡ್ ವಾರ್ನರ್ ಹಾಗೂ ಆರೋನ್ ಫಿಂಚ್ ಗಾಯಕ್ಕೆ ತುತ್ತಾಗಿರುವುದರಿಂದ ಅವರ ಅನುಪಸ್ಥಿತಿ ಆತಿಥೇಯರಿಗೆ ಕಾಡುತ್ತಿದೆ. ಅಲ್ಲದೆ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ತಂಡದಲ್ಲಿ ಇಲ್ಲದೇ ಇರುವುದು ಆಸ್ಟ್ರೇಲಿಯಾಗೆ ಹಿನ್ನಡೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


