ಟೆಸ್ಟ್ ಕ್ರಿಕೆಟ್ ನಿಂದ 'ಟಾಸ್' ಔಟ್? ಶೀಘ್ರ ಐಸಿಸಿಯಿಂದ ನಿರ್ಧಾರ
ಟೆಸ್ಟ್ ಕ್ರಿಕೆಟ್ ನಿಂದ ಟಾಸ್ ಸಂಪ್ರದಾಯವನ್ನು ಕೈ ಬಿಡಲು ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ.

Published On :
ಮುಂಬೈ: ಟೆಸ್ಟ್ ಕ್ರಿಕೆಟ್ ನಿಂದ ಟಾಸ್ ಸಂಪ್ರದಾಯವನ್ನು ಕೈ ಬಿಡಲು ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಅತಿಥೇಯ ತಂಡಗಳು ತವರು ನೆಲದ ಲಾಭ ಪಡೆಯುವುದನ್ನು ತಪ್ಪಿಸಲು ಟೆಸ್ಟ್ ಕ್ರಿಕೆಟ್ನಲ್ಲಿ ಟಾಸ್ ಪದ್ಧತಿಯನ್ನೇ ಕೈಬಿಡಲು ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೇ 28 ಮತ್ತು 29ರಂದು ಮುಂಬೈನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ಸಮಿತಿಯ ಸಭೆಯಲ್ಲಿ ಟಾಸ್ ಪದ್ಧತಿ ಕೈಬಿಡುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಟೆಸ್ಟ್ ಕ್ರಿಕೆಟ್ ಹುಟ್ಟಿಕೊಂಡ 1877ರಿಂದಲೇ ಟಾಸ್ ಪದ್ಧತಿ ಇದ್ದು, ಟಾಸ್ ಗೆದ್ದ ತಂಡಕ್ಕೆ ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ದುಕೊಳ್ಳಲು ಅವಕಾಶ ನೀಡುವುದು ಸಾಮಾನ್ಯ. ಆದರೆ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಈ ಪದ್ಧತಿಯನ್ನು ಕೈ ಬಿಡಲು ಐಸಿಸಿ ಗಂಭೀರ ಚಿಂತನೆಯಲ್ಲಿ ತೊಡಗಿದೆ.
2019ರಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ನಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ. ಟಾಸ್ ಪದ್ಧತಿಯಿಂದ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ತಂಡಗಳು ತವರು ನೆಲದ ಲಾಭ ಪಡೆಯುವುದನ್ನು ತಪ್ಪಿಸಬಹುದು ಎಂಬುದು ಐಸಿಸಿ ಚಿಂತನೆಯಾಗಿದೆ.
ಐಸಿಸಿ ನಿರ್ಧಾರಕ್ಕೆ ಕ್ರಿಕೆಟ್ ಸಮಿತಿಯ ಕೆಲ ಸದಸ್ಯರು ಈಗಾಗಲೆ ಈ ಬಗ್ಗೆ ಒಲವು ತೋರಿದ್ದರೂ, ಇತರ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಮಾಜಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್, ಮೈಕೆಲ್ ಹೋಲ್ಡಿಂಗ್, ಇಯಾನ್ ಬಾಥಮ್, ಶೇನ್ ವಾರ್ನ್ ಮತ್ತು ಸ್ಟೀವ್ ವಾ ಮತ್ತಿತ್ತರರು ಈಗಾಗಲೆ ಟಾಸ್ ಕೈಬಿಡುವ ಯೋಚನೆಯನ್ನು ಬೆಂಬಲಿಸಿದ್ದಾರೆಯಾದರೂ ಇನ್ನು ಕೆಲ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಐಸಿಸಿ ಕ್ರಿಕೆಟ್ ಸಮಿತಿ ಸದಸ್ಯರಲ್ಲಿ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ, ಇಂಗ್ಲೆಂಡ್ ತಂಡ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸ್ಟ್ರಾಸ್, ಶ್ರೀಲಂಕಾದ ಮಹೇಲ ಜಯವರ್ಧನೆ, ರಾಹುಲ್ ದ್ರಾವಿಡ್, ಟಿಮ್ ಮೇ, ಡೇವಿಡ್ ವೈಟ್, ರಿಚರ್ಡ್ ಕೀಟಲ್ಬರ್ಗ್, ರಂಜನ್ ಮದುಗಲೆ, ಶಾನ್ ಪೊಲ್ಲಾಕ್, ಕ್ಲೇರ್ ಕಾನರ್ ಅವರೂ ಇದ್ದಾರೆ.
ಟಾಸ್ ಕೈ ಬಿಟ್ಟು ಪ್ರವಾಸಿ ನಾಯಕನಿಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಅವಕಾಶ
1877ರ ಚೊಚ್ಚಲ ಟೆಸ್ಟ್ನಿಂದಲೇ ಟಾಸ್ ಪದ್ಧತಿ ಇದ್ದು, ಸಾಮಾನ್ಯವಾಗಿ ಅತಿಥೇಯ ತಂಡದ ನಾಯಕ ಟಾಸ್ ಕಾಯಿನ್ ಹಾರಿಸಿದರೆ, ಪ್ರವಾಸಿ ತಂಡದ ನಾಯಕ ತನ್ನ ಆಯ್ಕೆಯ ನಾಣ್ಯದ ಮುಖ (ಹೆಡ್ಸ್ ಅಥವಾ ಟೈಲ್ಸ್) ತಿಳಿಸುತ್ತಾನೆ. ಕೊನೆಗೆ ಟಾಸ್ ಗೆದ್ದವರಿಗೆ ಬ್ಯಾಟಿಂಗ್-ಬೌಲಿಂಗ್ ಆಯ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಟಾಸ್ ಕೈ ಬಿಟ್ಟರೆ ಆಗ, ಪ್ರವಾಸಿ ತಂಡದ ನಾಯಕ ಪಿಚ್ ಪರಿಶೀಲಿಸಿ ಮೊದಲು ಬ್ಯಾಟಿಂಗ್ ಮಾಡಬೇಕೇ ಅಥವಾ ಮೊದಲು ಬೌಲಿಂಗ್ ಮಾಡಬೇಕೇ ಎಂದು ನಿರ್ಧರಿಸಲಿದ್ದಾನೆ. ಈ ಪದ್ಧತಿ ಈಗಾಗಲೇ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಜಾರಿಯಾಗಿದೆ.
ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಷಿಪ್ನಲ್ಲಿ 2016ರಿಂದಲೇ ಟಾಸ್ ಕೈಬಿಡಲಾಗಿದ್ದು, ಪ್ರವಾಸಿ ತಂಡದ ನಾಯಕನಿಗೆ ಆಯ್ಕೆ ನೀಡಲಾಗಿದೆ. ಅಲ್ಲದೆ ಈ ನಿರ್ಧಾರದಿಂದ ಈಗಾಗಲೆ ಪಂದ್ಯಗಳು ಸುದೀರ್ಘವಾಗುತ್ತಿವೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ. ಭಾರತದಲ್ಲೂ ದೇಶೀಯ ಕ್ರಿಕೆಟ್ನಲ್ಲಿ ಇಂಥ ಪದ್ಧತಿ ತರುವ ಪ್ರಸ್ತಾವನೆಗಳಿವೆ. ಯಾವ ತಂಡ ಮೊದಲು ಬ್ಯಾಟಿಂಗ್ಗೆ ಇಳಿಯಬೇಕು ಎಂಬುದನ್ನು ನಿರ್ಧರಿಸಲು ಟಾಸ್ ಉತ್ತಮ ಮಾರ್ಗ. ಆದರೆ ಇತ್ತೀಚೆಗಿನ ದಿನಗಳಲ್ಲಿ ಅತಿಥೇಯ ತಂಡ ತನಗೆ ಬೇಕಾದಂತೆ ಪಿಚ್ ನಿರ್ವಿುಸುವುದು ಸಾಮಾನ್ಯವೆನಿಸಿದೆ. ಇದರಿಂದ ಟಾಸ್ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ನೂತನ ಪದ್ಧತಿ 2019ರಿಂದ ಜಾರಿಯಾಗುವ ಸಾಧ್ಯತೆ ಇದೆ. 2019ರ ಆಶಸ್ ಸರಣಿಯಿಂದ ಆರಂಭಗೊಳ್ಳಲಿದ್ದು, ಅಲ್ಲಿಂದಲೇ ಟಾಸ್ ಕೈಬಿಡುವ ಯೋಚನೆ ಇದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


